ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಒಂದೇ ಚುನಾವಣೆಗೆ ಸೀಮಿತ!

ಪಕ್ಷಗಳ ಚಿಹ್ನೆಯಡಿ ಚುನಾವಣೆಗೆ ಸಜ್ಜಾಗಬೇಕಿರುವ ‘ಮಂಕಿ’ ಗ್ರಾಮದ ಮತದಾರರು
Last Updated 5 ಡಿಸೆಂಬರ್ 2020, 15:47 IST
ಅಕ್ಷರ ಗಾತ್ರ

ಕಾರವಾರ: ಈ ನಾಲ್ಕು ಗ್ರಾಮ ಪಂಚಾಯಿತಿಗಳು ಕೇವಲ ಒಂದು ಬಾರಿ ಚುನಾವಣೆ ಎದುರಿಸಿವೆ. ಎರಡನೇ ಬಾರಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಇಲ್ಲಿ ಚುನಾವಣೆಯಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ವಿಭಜನೆಗೂ ಮೊದಲು ಅಸ್ತಿತ್ವದಲ್ಲಿದ್ದ ಮಂಕಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಿ ರಾಜ್ಯ ಸರ್ಕಾರವು ನ.27ರಂದು ಅಧಿಸೂಚನೆ ಪ್ರಕಟಿಸಿತ್ತು. ಹೀಗಾಗಿ ರಾಜ್ಯದ ಎರಡನೇ ಅತಿದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದ ಹೊನ್ನಾವರದ ‘ಮಂಕಿ’ಯಿಂದ ರಚನೆಯಾದ ನಾಲ್ಕು ಗ್ರಾಮ ಪಂಚಾಯಿತಿಗಳು, (ಗುಳದಕೇರಿ, ಹಳೆಮಠ, ಅನಂತವಾಡಿ ಮತ್ತು ಚಿತ್ತಾರ) ಒಂದಾಗಿ ಪಟ್ಟಣ ಪಂಚಾಯಿತಿಯ ರೂಪ ಪಡೆಯುತ್ತಿವೆ. ಈಗ ಅವು ಸ್ಥಳೀಯ ಸಂಸ್ಥೆಯ ಚುನಾವಣೆಗೆ ನಿಧಾನವಾಗಿ ಸಜ್ಜಾಗಬೇಕಿದೆ.

‘ವಿಭಜನೆಯಾದ ಬಳಿಕ ನಾಲ್ಕೂ ಗ್ರಾಮ ಪಂಚಾಯಿತಿಗಳಲ್ಲಿ ಕೇವಲ ಒಂದು ಬಾರಿ (2015ರಲ್ಲಿ) ಚುನಾವಣೆ ಯಾಗಿದೆ. ಅಷ್ಟರಲ್ಲೇ ಸರ್ಕಾರವು ಈ ಭಾಗದ ಜನರ ಬೇಡಿಕೆಗೆ ಮನ್ನಣೆ ನೀಡಿ ಮೇಲ್ದರ್ಜೆಗೇರಿಸಿದೆ. ಊರಿನ ಅಭಿವೃದ್ಧಿ ದೃಷ್ಟಿಯಿಂದ ಇದು ಸಹಕಾರಿಯಾಗಿದೆ’ ಎನ್ನುತ್ತಾರೆ ಹಳೆಮಠ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ ಖಾರ್ವಿ.

‘ಪಟ್ಟಣ ಪಂಚಾಯಿತಿ ಚುನಾವಣೆ ಯು ರಾಜಕೀಯ ಪಕ್ಷಗಳ ಚಿಹ್ನೆಗಳ ಅಡಿಯಲ್ಲಿ ನಡೆಯಲಿದೆ. ಇದಕ್ಕೂ ಮೊದಲು ವಾರ್ಡ್ ವಿಂಗಡನೆ, ಮೀಸಲಾತಿ ನಿಗದಿಯಾಗಬೇಕು. ಪಟ್ಟಣ ಪಂಚಾಯಿತಿ ರಚನೆ ಸಂಬಂಧ ಆಕ್ಷೇ ಪಣೆ ಸಲ್ಲಿಸಲು ಒಟ್ಟು ಒಂದು ತಿಂಗಳ ಕಾಲಾವಕಾಶವಿದೆ’ ಎಂದು ಅವರು ವಿವರಿಸಿದರು.

‘ಅವಿಭಜಿತ ಮಂಕಿ ಗ್ರಾಮದಲ್ಲಿ ಅಂದಾಜು 26 ಸಾವಿರ ಜನಸಂಖ್ಯೆಯಿದೆ. ಅದರ ಪ್ರಕಾರ ಪಟ್ಟಣ ಪಂಚಾಯಿತಿಯಲ್ಲಿ 20 ವಾರ್ಡ್‌ಗಳ ನಿಗದಿಯಾಗಬಹುದು’ ಎಂದೂ ಊಹಿಸಿದರು.

ಮಂಕಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ‘ಅಭಿವೃದ್ಧಿಗೆ ಅನುದಾನ ಹೆಚ್ಚು ಸಿಗುವ ಕಾರಣದಿಂದ ಮೇಲ್ದರ್ಜೆ ಗೇರಿದ್ದು ಸೂಕ್ತವಾಗಿದೆ. ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವು ಸಾಕಷ್ಟು ವಿಶಾಲವಾಗಿದೆ. ಹಾಗಾಗಿ ನೂತನ ಪಟ್ಟಣ ಪಂಚಾಯಿತಿಯ ಕಚೇರಿ ಕಾರ್ಯಗಳಿಗೆ ಸಮಸ್ಯೆಯಾಗದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ‘ಇನ್ನು ಮುಂದೆ ಚುನಾವಣೆಗೆ ಪಕ್ಷಗಳ ಚಿಹ್ನೆಗಳ ಅಡಿ ಸ್ಪರ್ಧಿಸಬೇಕಿದೆ. ಪಕ್ಷಗಳ ಮುಖಂಡರು ಸೂಚಿಸಿದಂತೆ ನಡೆದುಕೊಳ್ಳುತ್ತಾರೆ. ಹಾಗಾಗಿ ಈ ಬದಲಾವಣೆಯಿಂದ ದೊಡ್ಡ ವ್ಯತ್ಯಾಸ ವಾಗದು’ ಎಂದು ವಿಶ್ಲೇಷಿಸಿದರು.

ಮಜಿರೆ ಹೊರಗಿಡಲು ಮನವಿ

ಚಿತ್ತಾರ ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ಕಚೇರಿ ಕಾಮಗಾರಿಯು ಪ್ರಗತಿಯಲ್ಲಿದೆ. ಪಟ್ಟಣ ಪಂಚಾಯಿತಿ ರಚನೆ ಸಂಬಂಧ ನ.27ರಂದು ಸರ್ಕಾರದ ಅಧಿಸೂಚನೆ ಪ್ರಕಟವಾಗಿದೆ. ಗ್ರಾಮ ಪಂಚಾಯಿತಿ ಕಚೇರಿಯ ಹೊಸ ಕಟ್ಟಡದ ಚಾವಣಿಗೆ ಕಾಕತಾಳೀಯವಾಗಿ ನ.28ರಂದು ಕಾಂಕ್ರೀಟ್ ಕಾಮಗಾರಿ ಆರಂಭಿಸಲಾಗಿತ್ತು.

ಈ ಗ್ರಾಮ ಪಂಚಾಯಿತಿಯ ಕೆಲವು ಮಜಿರೆಗಳನ್ನು ಪಟ್ಟಣ ಪಂಚಾಯಿತಿಯಿಂದ ಹೊರಗಿಡಬೇಕು ಎಂದು ಗ್ರಾಮ ಪಂಚಾಯಿತಿಯ ನಿಕಟಪೂರ್ವ ಉಪಾಧ್ಯಕ್ಷ ಗಣಪತಿ ಗೌಡ ಮನವಿ ಮಾಡಿದ್ದಾರೆ.

‘ದೊಡ್ಡದಾಗಿದ್ದ ಗ್ರಾಮದ ಅಭಿವೃದ್ಧಿಗಾಗಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಿದ್ದು ಸ್ವಾಗತಾರ್ಹ. ಆದರೆ, ಪಟ್ಟಣ ‍ಪಂಚಾಯಿತಿಯ ಕೇಂದ್ರ ಸ್ಥಾನದಿಂದ 10– 12 ಕಿಲೋಮೀಟರ್ ದೂರದವರೆಗೂ ಕೆಲವು ಮಜಿರೆಗಳು ವ್ಯಾಪಿಸಿವೆ. ಅಲ್ಲಿ ಐದು ವರ್ಷಗಳಿಂದ ವಿವಿಧ ಯೋಜನೆಗಳಡಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣ ಪಂಚಾಯಿತಿಗೆ ಸೇರ್ಪಡೆಯಾದರೆ ಈ ಕಾಮಗಾರಿಗಳು ವ್ಯರ್ಥವಾಗುತ್ತವೆ ಎಂಬುದು ಸಾರ್ವಜನಿಕರ ಬೇಸರವಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT