ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿ ಸಲ್ಲಿಸದ ರೈತರಿಗೂ ಪರಿಹಾರ!

ನೋಟಿಸ್ ಜಾರಿ ಕ್ರಮಕ್ಕೆ ಹಲವರ ಅಸಮಾಧಾನ: ಕೃಷಿಕ ವಲಯದಲ್ಲಿ ಚರ್ಚೆ
Last Updated 2 ಡಿಸೆಂಬರ್ 2020, 15:14 IST
ಅಕ್ಷರ ಗಾತ್ರ

ಕಾರವಾರ: ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್’ (ಪಿ.ಎಂ.ಕೆ.ಎಸ್.ವೈ) ಯೋಜನೆಯಡಿ ಸಹಾಯಧನಕ್ಕೆ ಅರ್ಜಿಯನ್ನೇ ಸಲ್ಲಿಸದ ಕೆಲವರ ಬ್ಯಾಂಕ್ ಖಾತೆಗಳಿಗೂ ಹಣ ಪಾವತಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಅದನ್ನು ಪುನಃ ಪಾವತಿಸುವಂತೆ ಕೃಷಿ ಇಲಾಖೆಯಿಂದ ನೋಟಿಸ್ ಕೂಡ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಎರಡು ಹೆಕ್ಟೇರ್‌ಗಳಿಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿ ಮಾಡಿತ್ತು. ತಲಾ ₹ 2 ಸಾವಿರದಂತೆ ಮೂರು ಕಂತುಗಳಲ್ಲಿ ಒಟ್ಟು ₹ 6 ಸಾವಿರವನ್ನು ಪಾವತಿಸಲಾಗಿತ್ತು. ಇದರೊಂದಿಗೆ ರಾಜ್ಯ ಸರ್ಕಾರವು ₹ 4 ಸಾವಿರ ಸಹಾಯಧನ ನೀಡಿತ್ತು. ಒಟ್ಟು ₹ 10 ಸಾವಿರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿತ್ತು.

ಈ ಯೋಜನೆಯಡಿ ಫಲಾನುಭವಿ ಗಳಾಗಲು ಕೆಲವು ಷರತ್ತುಗಳನ್ನೂ ಕೇಂದ್ರ ಸರ್ಕಾರ ವಿಧಿಸಿತ್ತು. ಆದಾಯ ತೆರಿಗೆ ಪಾವತಿಸುವ, ಸರ್ಕಾರಿ ನೌಕರಿಯಲ್ಲಿರುವ, ತಿಂಗಳಿಗೆ ₹ 10 ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುವ ಕೃಷಿಕರು ಸಹಾಯಧನ ಪಡೆಯಲು ಅರ್ಹರಲ್ಲ ಎಂದು ತಿಳಿಸಿತ್ತು. ಈ ನಿಯಮಗಳನ್ನು ಉಪೇಕ್ಷಿಸಿ ಅರ್ಜಿ ಸಲ್ಲಿಸಿ ಧನ ಸಹಾಯ ಪಡೆದ ಜಿಲ್ಲೆಯ 2,300 ರೈತರಿಗೆ ಕೃಷಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಒಟ್ಟು ₹ 10 ಸಾವಿರವನ್ನು ಡಿ.ಡಿ ಮೂಲಕ ಪುನಃ ಪಾವತಿಸುವಂತೆ ಸೂಚಿಸಲಾಗಿದೆ.

‘ನಾನು ಸಹಾಯಧನಕ್ಕೆ ಅರ್ಜಿ ಸಲ್ಲಿಸದಿದ್ದರೂ ನನ್ನ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ. ಅದನ್ನು ಮರು ಪಾವತಿ ಮಾಡುವಂತೆ ಕೆಲವು ದಿನಗಳ ಹಿಂದೆ ನೋಟಿಸ್ ಕೂಡ ಬಂದಿದೆ. ಇದು ಹೇಗೆ ಸಾಧ್ಯ? ನಾನು ಸಹಿ ಮಾಡಿದ ಅರ್ಜಿಯಿದ್ದರೆ ಕೃಷಿ ಇಲಾಖೆಯವರು ತೋರಿಸಲಿ’ ಎನ್ನುತ್ತಾರೆ ಶಿರಸಿಯ ಎಸ್.ಆರ್.ಹೆಗಡೆ.

‘ನಮ್ಮ ಕುಟುಂಬದಲ್ಲಿ ಆದಾಯ ತೆರಿಗೆ ಪಾವತಿಸುವವರಿದ್ದಾರೆ. ಹಾಗಾಗಿ ನಾವು ಇದರ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ಗೊತ್ತಿದ್ದೇ ಅರ್ಜಿ ಸಲ್ಲಿಸಿರಲಿಲ್ಲ. ಕೇಂದ್ರ ಸರ್ಕಾರದಿಂದ ಧನಸಹಾಯ ಬಂದಾಗ ಬಹುಶಃ ಎಲ್ಲ ರೈತರ ಖಾತೆಗಳಿಗೂ ನೀಡುತ್ತಿರುವುದಾಗಿ ಭಾವಿಸಿದ್ದೆ. ಆದರೆ, ನೋಟಿಸ್ ನೀಡಿ ಹಣವನ್ನು ಪುನಃ ಕೇಳುತ್ತಿರುವುದು ಗೊಂದಲ ಮೂಡಿಸಿದೆ. ಜೊತೆಗೆ ಅವಮಾನ ಮಾಡಿದಂತೆಯೂ ಆಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಮತ್ತೊಂದಿಬ್ಬರು ರೈತರಿಗೂ ಇದೇ ರೀತಿಯ ಅನುಭವವಾಗಿದೆ. ಕೆಲವರು ಹಣವನ್ನು ಈಗಾಗಲೇ ಮರುಪಾವತಿ ಮಾಡಿದ್ದಾರೆ. ಕೆಲವರು ಈ ವಿಚಾರದಲ್ಲಿ ಇನ್ನೂ ಸ್ಪಷ‌್ಟತೆಗಾಗಿ ಕಾಯುತ್ತಿದ್ದಾರೆ.

‘ಮಾಹಿತಿ ನೀಡಬಹುದು’

‘ಪಿ.ಎಂ.ಕೆ.ಎಸ್.ವೈ ಯೋಜನೆಯಡಿ ಅರ್ಜಿ ಸಲ್ಲಿಸದವರ ಬ್ಯಾಂಕ್ ಖಾತೆಗಳಿಗೆ ಧನಸಹಾಯ ಜಮೆಯಾಗಲು ಸಾಧ್ಯವಿಲ್ಲ. ಒಂದುವೇಳೆ, ಆ ರೀತಿ ಆಗಿದ್ದರೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT