ಮಂಗಳವಾರ, ಜನವರಿ 19, 2021
17 °C
ಭಟ್ಕಳ: ಮೇಲ್ಸೇತುವೆ ನಿರ್ಮಿಸುವಂತೆ ಹಲವರ ಬೇಡಿಕೆ

ಭಟ್ಕಳ ಪಟ್ಟಣ ಕೇಂದ್ರಕ್ಕೆ ಇಬ್ಭಾಗದ ಆತಂಕ: ಮೇಲ್ಸೇತುವೆ ನಿರ್ಮಾಣಕ್ಕೆ ಬೇಡಿಕೆ

ಮೋಹನ ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ವೇಗದಲ್ಲಿ ಸಾಗುತ್ತಿದೆ. ಆದರೆ, ಶಂಸುದ್ದೀನ್ ವೃತ್ತದಲ್ಲಿ ಅಂಡರ್‌ಪಾಸ್ ನಿರ್ಮಾಣದ ಬಗ್ಗೆ ಆಕ್ಷೇಪಗಳು ಕೇಳಿಬಂದಿವೆ.

ಪಟ್ಟಣದ ಮೂಡಭಟ್ಕಳ ಬೈಪಾಸ್‌ನಿಂದ ಹಿಡಿದು ನವಾಯತ್ ಕಾಲೊನಿವರೆಗೆ ಕಟ್ಟಡಗಳ ತೆರವು ವಿರುದ್ಧ ನ್ಯಾಯಾಲಯದಲ್ಲಿದ್ದ ಪ್ರಕರಣಗಳು ಇತ್ಯರ್ಥವಾಗಿವೆ. ಅವುಗಳ ತೆರವು ಕಾರ್ಯವೂ ಆರಂಭಗೊಂಡಿದೆ. ನ್ಯಾಯಾಲಯದ ಮೊರೆ ಹೋದ ಕಟ್ಟಡದ ಮಾಲೀಕರಿಗೆ ಸೂಕ್ತ ಪರಿಹಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದೆ. ಆದರೆ, ಚತುಷ್ಪಥ ನಿರ್ಮಾಣದಿಂದ ಭಟ್ಕಳ ಜನರಿಗೆ ಆಗುವ ಅನನುಕೂಲಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ ಎಂಬುದು ಹಲವರ ಅಸಮಾಧಾನವಾಗಿದೆ.

ಶಂಸುದ್ದೀನ್ ವೃತ್ತದಲ್ಲಿ ಅಂಡರಪಾಸ್ ನಿರ್ಮಾಣವಾಗಲಿದೆ. ರಂಗಿನಕಟ್ಟೆಯಿಂದ ಪಟ್ಟಣದ ಮುಖ್ಯರಸ್ತೆ ವೃತ್ತದವರೆಗೆ ಅಂಡರ್‌ಪಾಸ್ ನಿರ್ಮಾಣಕ್ಕೆ ನೀಲನಕ್ಷೆ ರೆಡಿಯಾಗಿದೆ. ಈ ಕಾಮಗಾರಿಯಿಂದ ಶಂಸುದ್ದೀನ್ ವೃತ್ತವು ಇಬ್ಭಾಗವಾಗಿ ಎರಡು ಪ್ರತ್ಯೇಕ ಪ್ರದೇಶಗಳಾಗಲಿವೆ. ಇದರಿಂದ ಜನರಿಗೆ ಸಮಸ್ಯೆಯಾಗಲಿದೆ ಎನ್ನುತ್ತಾರೆ ಸ್ಥಳೀಯರು.

‘ಭಟ್ಕಳದಲ್ಲಿ ಮೇಲ್ಸೇತುವೆಯ ಅವಶ್ಯಕತೆ ಇದೆ. ಅಂಡರ್‌ಪಾಸ್ ನಿರ್ಮಾಣದಿಂದ ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗಲಿದೆ. ವಾರದ ಸಂತೆ, ಮೀನು ಮಾರುಕಟ್ಟೆ ಹಾಗೂ ಆಸ್ಪತ್ರೆಗಳು ಸುತ್ತಮುತ್ತ ಇದ್ದು, ಹೆದ್ದಾರಿ ದಾಟಿ ಬರಲು ಜನರು ಸುತ್ತಾಟ ನಡೆಸಬೇಕಾಗುತ್ತದೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ ಸತೀಶಕುಮಾರ ನಾಯ್ಕ.

ಬೈಪಾಸ್‌ನ ಪರ ವಿರೋಧದ ಮನವಿಗಳು, ಪ್ರತಿಭಟನೆಗಳು ನಡೆದು ಕೊನೆಗೆ ವಿಚಾರವನ್ನು ಕೈಬಿಡಲಾಗಿತ್ತು. ಬೈಪಾಸ್ ಬಗ್ಗೆ ಪ್ರತಿಭಟನೆ ನಡೆಸಿದ ಜನರು ಈಗ ಮೇಲ್ಸೇತುವೆ ಬಗ್ಗೆ ಹೋರಾಡಬೇಕಿದೆ. ಪಟ್ಟಣದ ಸೌಂದರ್ಯದ ಉಳಿವಿಗಾಗಿ ಇದು ಅನಿವಾರ್ಯವೂ ಕೂಡ ಎನ್ನುತ್ತಾರೆ ಸ್ಥಳೀಯರು.

ಪಟ್ಟಣದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆಯಿಲ್ಲ. ಪ್ರತಿ ಮಳೆಗಾಲದಲ್ಲಿ ಶಂಸುದ್ದೀನ್ ವೃತ್ತ, ರಂಗಿನಕಟ್ಟೆ ಬಳಿ ಹೆದ್ದಾರಿಯಲ್ಲಿ ನೀರು ತುಂಬಿ ಆಸುಪಾಸಿನ ಮನೆಗಳು ಜಲಾವೃತಗೊಳ್ಳುತ್ತವೆ. ಹೆದ್ದಾರಿ ವಿಸ್ತರಣೆ ಸಮಯದಲ್ಲಿ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಇದು ಶಾಶ್ವತ ಸಮಸ್ಯೆಯಾಗಿ ಉಳಿಯುವ ಸಾಧ್ಯತೆಯಿದೆ.

ಸುತ್ತಾಡುವ ಅನಿವಾರ್ಯತೆ:

‘ಶಂಸುದ್ದೀನ್ ವೃತ್ತದ ಆಸುಪಾಸಿನಲ್ಲಿ ಬಸ್ ನಿಲ್ದಾಣವಿದೆ. ಸರ್ಕಾರಿ ಆಸ್ಪತ್ರೆ, ಮಿನಿ ವಿಧಾನಸೌಧ, ಸರ್ಕಾರದ ಹಲವು ಕಚೇರಿಗಳಿವೆ. ಪ್ರಮುಖ ವ್ಯಾಪಾರ ವಾಣಿಜ್ಯ ಸಂಕೀರ್ಣಗಳು ಇಲ್ಲೇ ಇವೆ. ನಿತ್ಯವೂ ಕೆಲಸ ಕಾರ್ಯಗಳಿಗೆ ಬರುವ ಗ್ರಾಮೀಣ ಭಾಗದ ಜನರು ಬಹಳ ಸುತ್ತಾಡಬೇಕಿದೆ. ತುರ್ತು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬರುವವರಿಗೂ ತೊಂದರೆಯಾಗಲಿದೆ. ಹಾಗಾಗಿ, ಪಟ್ಟಣದ ಮಧ್ಯಭಾಗದಲ್ಲಿ ಹೆದ್ದಾರಿ ವಿಸ್ತರಣೆ ಮಾಡದೇ ಬೈಪಾಸ್ ಮೂಲಕ ಹಾದು ಹೋಗಲಿ’ ಎಂದು ಈ ಹಿಂದೆ ಹಲವಾರು ಹೋರಾಟಗಳು ನಡೆದಿದ್ದವು. ‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು