ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆ ಪ್ರಚಾರಕ್ಕೆ ಐವರಿಗೆ ಅವಕಾಶ

ವಿಧಾನಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲಾಧಿಕಾರಿ ಸೂಚನೆ
Last Updated 7 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ಕಾರವಾರ: ‘ವಿಧಾನಪರಿಷತ್‌ನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಮನೆ ಮನೆ ಪ್ರಚಾರಕ್ಕೆ ಐವರಿಗಿಂತ ಹೆಚ್ಚು ಮಂದಿ ಹೋಗಬಾರದು. ಈ ವೇಳೆ ಮುಖಗವಸು ಧರಿಸುವುದು ಮತ್ತು ಅಂತರ ಕಾಯ್ದುಕೊಳ್ಳುವುದು ಕಡ್ಡಾಯ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ತಹಶೀಲ್ದಾರ್‌ರು ಹಾಗೂ ಚುನಾವಣಾ ಕರ್ತ್ಯವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳ ಜೊತೆ ಹಮ್ಮಿಕೊಂಡ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಬಳಿ ₹ 50 ಸಾವಿರಕ್ಕಿಂತ ಹೆಚ್ಚಿನ ನಗದು ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಹೆಚ್ಚು ಹಣ ಇದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಚುನಾವಣಾ ವಿಚಕ್ಷಣಾ ದಳದ ಸಿಬ್ಬಂದಿ ಪರಿಶೀಲಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಈ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣೆಗೆ ಖರ್ಚು ಮಾಡಲು ಯಾವುದೇ ಮಿತಿ ಇಲ್ಲ. ಇತರ ಚುನಾವಣೆಗಳಂತೆ ಮಾದರಿ ನೀತಿ ಸಂಹಿತೆ ಇಲ್ಲಿಯೂ ಅನ್ವಯವಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಮೂಲಕ ಶಾಂತಿಯುತ ಚುನಾವಣೆಗೆ ಸಹಕರಿಸಬೇಕು’ ಎಂದು ಹೇಳಿದರು.

‘ಚುನಾವಣಾ ಅಕ್ರಮ ತಡೆಯಲು ಮತ್ತು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ವಲಯ ಅಧಿಕಾರಿಗಳ ತಂಡ ಮತ್ತು 13 ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಚುನಾವಣೆ ವಿಷಯವಾಗಿ ಸಾರ್ವಜನಿಕರು ಮತ್ತು ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ವಿಚಕ್ಷಣಾ ದಳ ರಚನೆ:ವಿಧಾನಪರಿಷತ್ ಚುನಾವಣೆಯಲ್ಲಿ ಅಕ್ರಮಗಳು ನಡೆಯದಂತೆ ಕಣ್ಣಿಡಲು ಪ್ರತಿ ತಾಲ್ಲೂಕಿನಲ್ಲಿ ವಿಚಕ್ಷಣಾ ದಳಗಳನ್ನು ರಚಿಸಲು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸೂಚಿಸಿದ್ದಾರೆ.

ಚುನಾವಣೆಗೆ ಅಭ್ಯರ್ಥಿಗಳು ಮಾಡುವ ಖರ್ಚು, ವೆಚ್ಚಗಳು, ಮತದಾರರಿಗೆ ಆಮಿಷ ಒಡ್ಡುವುದು, ಅಕ್ರಮವಾಗಿ ಶಸ್ತ್ರಾಸ್ತ್ರಗಳ ಸಾಗಣೆ, ಮದ್ಯ ಅಕ್ರಮ ಸಾಗಣೆ ಹಾಗೂ ಸಮಾಜ ವಿರೋಧಿ ಚಟುವಟಿಕೆಗಳ ಮೇಲೆ ಈ ತಂಡಗಳು ನಿಗಾ ವಹಿಸಬೇಕು. ಮಾದರಿ ನೀತಿ ಸಂಹಿತೆಯ ಪಾಲನೆ ಮತ್ತು ಉಲ್ಲಂಘನೆಯ ಬಗ್ಗೆ ಪ್ರತಿ ದಿನ ವರದಿ ನೀಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಇದ್ದರು.

ಕೊನೆ ದಿನದವರೆಗೂ ಹೆಸರು ಸೇರಿಸಬಹುದು

ಕುಮಟಾ: ‘ಪಶ್ಚಿಮ ಪದವೀಧರರ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಪದವೀಧರರು ಮತಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಅರ್ಜಿ ಸಲ್ಲಿಕೆಗೆ ಅವಕಾಶವಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಹೇಳಿದರು.

ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ನೈತಿಕ ಮತದಾನದ ನಿರೀಕ್ಷೆ ಇದೆ. ಅಭ್ಯರ್ಥಿಗಳ ಬಗ್ಗೆ ಮಾಧ್ಯಮಗಳು ಪ್ರಚಾರ, ಜಾಹೀರಾತು ಪ್ರಕಟಿಸುವಾಗ ನೀತಿ ಸಂಹಿತೆ ಅನುಸರಿಸುವುದು ಕಡ್ಡಾಯ. ತಮ್ಮ ಅಭ್ಯರ್ಥಿಗಳ ಪರವಾಗಿ ರಾಜಕೀಯ ಪಕ್ಷಗಳು ತಾಲ್ಲೂಕಿನ ಎಲ್ಲೆಲ್ಲಿ ಪ್ರಚಾರ ಕೈಕೊಳ್ಳಬಹುದು ಎನ್ನುವುದನ್ನು ಸೂಚಿಸಲಾಗುವುದು’ ಎಂದರು.

ಮಾಸ್ಕ್ ಧರಿಸದಿದ್ದರೆ ಕೋವಿಡ್ ಪರೀಕ್ಷೆ: ‘ಕೋವಿಡ್ ಪರೀಕ್ಷೆಯಲ್ಲಿ ಜಿಲ್ಲಾಡಳಿತ ನಿಗದಿತ ಗುರಿ ಮೀರಿ ಕೆಲಸ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ನಿಯಮದಲ್ಲಿ ಬದಲಾವಣೆಯಾಗಿದ್ದು, ಯಾವುದೇ ವ್ಯಕ್ತಿ ಕೋವಿಡ್ ಪರೀಕ್ಷೆ ನಿರಾಕರಿಸುವಂತಿಲ್ಲ. ಮಾಸ್ಕ್‌ ಧರಿಸದವರನ್ನು ಗುರುತಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಶೇ 5ಕ್ಕಿಂತ ಕಡಿಮೆಯಾಗಿದ್ದು, ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಸಂತಸಕರ ಸಂಗತಿ. ‌ಎಲ್ಲರೂ ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕಿದೆ. ಅನಾರೋಗ್ಯ ಮುಚ್ಚಿಡುವುದರಿಂದ, ತಡವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಮೀನು ಮಾರುಕಟ್ಟೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ವ್ಯವಹರಿಸುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ತಹಶೀಲ್ದಾರ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ವಿವರಿಸಿದರು.

ಉಪವಿಭಾಗಾಧಿಕಾರಿ ಎಂ.ಅಜಿತ್, ತಹಶೀಲ್ದಾರ್ ಮೇಘರಾಜ ನಾಯ್ಕ ಇದ್ದರು.

ನಿಯಂತ್ರಣ ಕೊಠಡಿಗಳ ವಿವರ

ಎಲ್ಲಿ; ದೂರವಾಣಿ ಸಂಖ್ಯೆ (ತಹಶೀಲ್ದಾರ್ ಕಚೇರಿ)

ಜಿಲ್ಲಾಧಿಕಾರಿ ಕಚೇರಿ;08382 229857

ಕಾರವಾರ;08382 226331

ಅಂಕೋಲಾ;08388 230243

ಕುಮಟಾ;08386 222054

ಹೊನ್ನಾವರ;08387 220262

ಭಟ್ಕಳ;08385 226422

ಶಿರಸಿ;08384 226383

ಸಿದ್ದಾಪುರ;08389 230127

ಯಲ್ಲಾಪುರ;08419 261129

ಮುಂಡಗೋಡ;08301 222122

ಹಳಿಯಾಳ;08284 220134

ದಾಂಡೇಲಿ ನಗರಸಭೆ;08284 231482

‌ಜೊಯಿಡಾ;08383 282706

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT