ಗುರುವಾರ , ಸೆಪ್ಟೆಂಬರ್ 16, 2021
25 °C
ಪ್ರಯೋಗಕ್ಕೆ ಮುಂದಾದ ಗೋಕರ್ಣ ಗ್ರಾಮ ಪಂಚಾಯ್ತಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಯೋಗ | ಹಸಿಕಸದಿಂದ ಸಾವಯವ ಗೊಬ್ಬರ ಉತ್ಪಾದನೆ

ರವಿ ಸೂರಿ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಒಣ ಕಸ ಸಂಸ್ಕರಣಾ ಘಟಕ ಸ್ಥಾಪಿಸಿ ಜಿಲ್ಲೆಯಲ್ಲಿಯೇ ಮಾದರಿ ಎನಿಸಿದ್ದ ಗೋಕರ್ಣ ಗ್ರಾಮ ಪಂಚಾಯ್ತಿ, ಈಗ ಹಸಿ ಕಸದಿಂದ ಸಾವಯವ ಗೊಬ್ಬರ ಉತ್ಪಾದಿಸಲು ಸಜ್ಜಾಗಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಹಸಿ ಕಸದ ಸಂಸ್ಕರಣೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಐದು ಪ್ರಕಾರಗಳ ಹಸಿಕಸಗಳನ್ನು ಈ ಘಟಕದಲ್ಲಿ ಬಳಸಬಹುದಾಗಿದೆ. ಅನ್ನ, ತರಕಾರಿ ತ್ಯಾಜ್ಯಗಳು, ಮೊಟ್ಟೆಗಳ ಓಡು, ಆಹಾರಗಳಾದ ಮೀನಿನ ಮತ್ತು ಕೋಳಿ ತ್ಯಾಜ್ಯ ಮುಂತಾದವುಗಳನ್ನು ಇಲ್ಲಿ ಸಂಸ್ಕರಿಸಲಾಗುತ್ತದೆ. ಮೊದಲು ಎಲ್ಲ ಹಸಿಕಸಗನ್ನು ಭಾರಿ ಗಾತ್ರದ ಯಂತ್ರವೊಂದರಲ್ಲಿ ಹಾಕಿ ಪುಡಿ ಮಾಡಲಾಗುತ್ತದೆ. ನಂತರ ಪಕ್ಕದ ಇನ್ನೊಂದು ಯಂತ್ರಕ್ಕೆ ಸಾಗಿಸಿ ಈ ಪುಡಿಗಳಿಗೆ ರಾಸಾಯನಿಕಗಳನ್ನು ಬೆರೆಸಿ ದುರ್ವಾಸನೆ ನಿರ್ಮೂಲನೆ ಮಾಡಲಾಗುತ್ತದ.

ಈ ರೀತಿ ಹಾಕಲಾದ ಹಸಿಕಸದ ಶೇ 50ರಷ್ಟು ಕಚ್ಚಾ ಗೊಬ್ಬರ ಉತ್ಪತ್ತಿಯಾಗುತ್ತದೆ. ಇದನ್ನು ಕಂಟೇನರ್‌ಗಳಲ್ಲಿ ಇಟ್ಟು ಪ್ರತಿ ಎರಡು ದಿನಗಳಿಗೊಮ್ಮೆ ಐದು ಹಂತದಲ್ಲಿ ಸ್ಪ್ರಿಂಕ್ಲರ್ ಮೂಲಕ ಹದವಾಗಿ ನೀರು ಕೊಡಲಾಗುತ್ತದೆ. 10ನೇ ದಿನ ಪೌಷ್ಟಿಕವಾದ ಸಾವಯವ ಗೊಬ್ಬರ ಲಭ್ಯವಾಗುತ್ತದೆ.

ದೊಡ್ಡದಾದ ಈ ಘಟಕಕ್ಕೆ ಇನ್ನೂ ಹೆಚ್ಚಿನ ಹಸಿಕಸದ ಅಗತ್ಯವಿದೆ. ಸದ್ಯ ಈ ಭಾಗದಲ್ಲಿ ನಿತ್ಯ ಕೇವಲ 700 ಕೆ.ಜಿ ಹಸಿಕಸ ದೊರಕುತ್ತಿದೆ. ಅವೆಲ್ಲವುಗಳೂ ಕೆಲವೇ ಕೆಲವು ಹೊಟೆಲ್ ಮತ್ತು ರೆಸ್ಟೋರೆಂಟ್‌ಗಳ ತ್ಯಾಜ್ಯಗಳಾಗಿವೆ. ಇಲ್ಲಿರುವ 100ಕ್ಕೂ ಹೆಚ್ಚಿನ ಹೋಟೆಲ್ ಮತ್ತು ಮನೆಗಳಿಂದ ಹಸಿಕಸಗಳನ್ನು ಸಾಗಿಸುವ ವ್ಯವಸ್ಥೆ ಆಗಬೇಕು. ಆಗ ಈ ಘಟಕ ಗರಿಷ್ಠ ಮಟ್ಟದಲ್ಲಿ ಸಾವಯವ ಗೊಬ್ಬರವನ್ನು ನೀಡುವ ಜೊತೆಗೆ ಪರಿಸರ ಸ್ವಚ್ಛತೆಗೂ ಕಾರಣವಾಗಲಿದೆ.

ಉಪವಿಭಾಗಾಧಿಕಾರಿ ಭೇಟಿ: ಹೊಸದಾಗಿ ವರ್ಗಾವಣೆಗೊಂಡು ಶನಿವಾರ ಪ್ರಥಮವಾಗಿ ಗೋಕರ್ಣ ಗ್ರಾಮ ಪಂಚಾಯ್ತಿಗೆ ಭೇಟಿಯಿತ್ತ ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ್, ಗ್ರಾಮ ಪಂಚಾಯ್ತಿಯ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದೇ ಸೂರಿನಲ್ಲಿ ಎಲ್ಲವೂ ನಿರ್ಮಾಣವಾಗಿರುವುದು, ಗ್ರಾಮ ಪಂಚಾಯ್ತಿಗೆ ಆರ್ಥಿಕವಾಗಿ ಹೊರೆಯಾಗದಂತೆ ಯೋಜನೆ ಕೈಗೊಂಡಿರುವುದನ್ನು ಅವರು ಶ್ಲಾಘಿಸಿದ್ದಾರೆ.

ಎಲ್ಲಾ ಖಾಸಗಿ ಸಹಭಾಗಿತ್ವ: ಇದಕ್ಕಾಗಿ ಪಂಚಾಯ್ತಿಯಿಂದ ಒಂದು ರೂಪಾಯಿಯೂ ವ್ಯಯವಾಗಿಲ್ಲ. ಸಂಪೂರ್ಣ ಘಟಕವನ್ನು ಖಾಸಗಿ ಸಹಭಾಗಿತ್ವದಲ್ಲಿ ಸಿದ್ಧಪಡಿಸಲಾಗಿದೆ. ಅಂಕೋಲಾದ ಓಂ ಎಂಟರ್‌ಪ್ರೈಸಸ್ ಮತ್ತು ವೈಷ್ಣವಿ ಸಾಯಿಲ್ ಮಿಲ್ ಈ ಸಾಹಸಕ್ಕೆ ಮುಂದಾಗಿವೆ. ಈ ಘಟಕಕ್ಕಾಗಿ ಅಂದಾಜು ₹ 35 ಲಕ್ಷ ರ್ಚು ಮಾಡಿದೆ. ಪಂಚಾಯ್ತಿಗೆ ನೆಲ ಬಾಡಿಗೆ ನೀಡಲಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು