ಗುರುವಾರ , ಜುಲೈ 29, 2021
23 °C
ಕೊರೊನಾ ಸೋಂಕಿನ ಭೀತಿ; ಮೊಬೈಲ್‌ ಮೂಲಕ ಹಣ ಪಾವತಿ

ಶಿರಸಿ | ಡಿಜಿಟಲ್ ಪಾವತಿಗೆ ಹೆಚ್ಚಿದ ಒಲವು

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಗರಿಷ್ಠ ಮುಖಬೆಲೆಯ ನೋಟು ರದ್ದತಿ ನಂತರ ಹೆಚ್ಚು ಚಾಲ್ತಿಗೆ ಬಂದಿರುವ ಡಿಜಿಟಲ್ ವಹಿವಾಟು, ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಯುವಜನರಿಂದ ಹಿರಿಯರವರೆಗೆ ಹಲವರು ಇ ಪಾವತಿಗೆ ಒಲವು ತೋರುತ್ತಿದ್ದಾರೆ.

ಕಿರಾಣಿ, ಔಷಧ ಅಂಗಡಿ, ಮೋರ್ ಮಾರ್ಕೆಟ್, ಟಿಎಸ್‌ಎಸ್ ಸೂಪರ್ ಮಾರ್ಕೆಟ್, ಬಟ್ಟ ಅಂಗಡಿ, ಆಸ್ಪತ್ರೆ ಹೀಗೆ ದೈನಂದಿನ ವಹಿವಾಟು ನಡೆಯುವ ಸ್ಥಳಗಳಲ್ಲಿ ಗ್ರಾಹಕರು, ಕ್ಯೂಆರ್ ಕೋಡ್ ಸ್ಕ್ಯಾನ್, ಪೇಟಿಎಂ, ಗೂಗಲ್ ಪೇ, ಡೆಬಿಟ್ ಕಾರ್ಡ್‌ಗಳ ಬಳಕೆ ಮಾಡುತ್ತಿದ್ದಾರೆ.

‘ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆಯಾದ ಮೇಲೆ ಮೂರನೇ ಹಂತದ ಲಾಕ್‌ಡೌನ್‌ವರೆಗೆ ಮಳಿಗೆಯಲ್ಲಿ ವಹಿವಾಟು ಇರಲಿಲ್ಲ. ಜನರ ಮನೆ ಬಾಗಿಲಿಗೆ ಸಾಮಗ್ರಿ ತಲುಪಿಸುವ ಸೌಲಭ್ಯ ಮಾತ್ರ ಇತ್ತು. ಆಗಿನಿಂದಲೇ ಜನರು ಕಾರ್ಡ್ ಬಳಕೆ ಹೆಚ್ಚಿಸಿದ್ದರು. ಈಗ ಮಳಿಗೆಯಲ್ಲಿ ವಹಿವಾಟು ಆರಂಭವಾಗಿದೆ. ಈಗಲೂ ಜನರು ಡಿಜಿಟಲ್ ಪಾವತಿಗೆ ಮಹತ್ವ ನೀಡುತ್ತಿದ್ದಾರೆ’ ಎನ್ನುತ್ತಾರೆ ಮೋರ್ ಮಾರ್ಕೆಟ್ ಉದ್ಯೋಗಿ ಕೃಷ್ಣಮೂರ್ತಿ.

‘ಕಾರ್ಡ್‌ಗಿಂತಲೂ ಹೆಚ್ಚಾಗಿ, ಫೋನ್ ಪೇ, ಪೇಟಿಎಂ ಮೂಲಕ ಹಣ ಪಾವತಿಸಲು ಮುಂದಾಗುತ್ತಾರೆ. ಕಾರ್ಡ್ ಬಳಕೆಯಲ್ಲಿ ಪಾಸ್‌ವರ್ಡ್‌ ಹಾಕಲು ಬಟನ್ ಒತ್ತಬೇಕಾಗುತ್ತದೆ. ಹೀಗಾಗಿ, ಮೊಬೈಲ್‌ನಲ್ಲೇ ಪಾವತಿಸುವುದಾಗಿ ಹೇಳುತ್ತಾರೆ. ವಯಸ್ಸಾದ ಪಾಲಕರು ಖರೀದಿಗೆ ಬಂದರೆ, ಮಹಾನಗರಗಳಲ್ಲಿರುವ ಅವರ ಮಕ್ಕಳು ಅಲ್ಲಿಂದಲೇ ಮೊಬೈಲ್ ಮೂಲಕ ಬಿಲ್ ಪಾವತಿಸುತ್ತಾರೆ. ಕೋವಿಡ್ ಪೂರ್ವದಲ್ಲಿ ದಿನದಲ್ಲಿ ಶೇ 80ರಷ್ಟು ಗ್ರಾಹಕರು ನಗದು ನೀಡುತ್ತಿದ್ದರು. ಈಗ ಶೇ 60ರಷ್ಟು ಡಿಜಿಟಲ್ ವಹಿವಾಟು ನಡೆಯುತ್ತದೆ’ ಎಂದು ಅವರು ತಿಳಿಸಿದರು.

‘ಟಿಎಸ್‌ಎಸ್‌ ಸೂಪರ್ ಮಾರ್ಕೆಟ್‌ನಲ್ಲಿ ಹಿಂದಿನಿಂದಲೂ ಡಿಜಿಟಲ್ ಪಾವತಿಗೆ ಒತ್ತು ನೀಡಲಾಗಿದೆ. ಈಗ ಲಾಕ್‌ಡೌನ್ ಸಂದರ್ಭದಲ್ಲೂ ಇದನ್ನು ಮುಂದುವರಿಸಲಾಗಿದೆ’ ಎಂದು ಟಿಎಸ್‌ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹೇಳಿದರು.

‘ಪಟ್ಟಣದ ಎಲ್ಲ ಮಾರಾಟ ಮಳಿಗೆ, ಅಂಗಡಿಗಳಲ್ಲಿ, ವಿಶೇಷವಾಗಿ ಔಷಧ ಅಂಗಡಿಗಳಲ್ಲಿ ಡಿಜಿಟಲ್ ವ್ಯವಹಾರ ಕಡ್ಡಾಯವಾಗಬೇಕು. ಅಂಗಡಿಯ ಮುಂದೆ ಕ್ಯೂಆರ್ ಕೋಡ್ ಪ್ರಿಂಟ್ ಮಾಡಿಸಿಡುವ ವ್ಯವಸ್ಥೆ ಆಗಬೇಕು. ನೋಟಿನಿಂದ ಕೊರೊನಾ ಸೋಂಕು ಹರಡಬಹುದೆಂಬ ಭಯದಿಂದ ಕೆಲವರು ಡಿಜಿಟಲ್ ವ್ಯವಸ್ಥೆ ಇಲ್ಲದ ಸ್ಥಳಗಳಲ್ಲಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ಶಿಕ್ಷಕ ಸದಾನಂದ ದಬಗಾರ್. 

‘ನಮ್ಮ ಆಸ್ಪತ್ರೆಯಲ್ಲಿ ಡಿಜಿಟಲ್ ವ್ಯವಸ್ಥೆಯ ಎಲ್ಲ ಮಾದರಿಗಳೂ ಇವೆ. ಅತಿ ಕನಿಷ್ಠ ಮೊತ್ತವನ್ನು ಸಹ ಇ ಪೇಮೆಂಟ್ ಮಾಡಬಹುದು. ಹಿಂದೆ ಯುವ ತಲೆಮಾರಿನವರು ಮಾತ್ರ ಈ ವ್ಯವಸ್ಥೆಗೆ ಆಸಕ್ತರಾಗಿದ್ದರು. ಈಗ ವಯಸ್ಸಾದ ರೋಗಿಗಳು ಸಹ, ಆಸ್ಪತ್ರೆ ಸಿಬ್ಬಂದಿ ಸಹಕಾರ ಪಡೆದು ಇ ಪಾವತಿ ಮಾಡುತ್ತಾರೆ’ ಎಂದರು ಆಯುರ್ವೇದ ವೈದ್ಯ ಡಾ.ರವಿಕಿರಣ ಪಟವರ್ಧನ.

ಕೋವಿಡ್ ಕಾಯಿಲೆಯ ಭೀತಿಯಿಂದ ಅನೇಕರು, ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುವುದನ್ನು ಗಮನಿಸಿದ್ದೇನೆ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು