ಶನಿವಾರ, ಜುಲೈ 31, 2021
27 °C
ವರ್ತಕರ ಸಭೆಯಲ್ಲಿ ಸ್ವಯಂ ಪ್ರೇರಣೆಯ ನಿರ್ಧಾರ

ಉತ್ತರ ಕನ್ನಡ: ಸಂಜೆ 5 ಗಂಟೆಗೆ ಪೇಟೆ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕೊರೊನಾ ಸೋಂಕು ಸಮುದಾಯಕ್ಕೆ ಪ್ರಸರಣವಾಗುವುದನ್ನು ನಿಯಂತ್ರಿಸಲು, ಆಸ್ಪತ್ರೆ, ಔಷಧ ಅಂಗಡಿ, ಹಾಲು, ಹೋಟೆಲ್, ವಸತಿಗೃಹ ಹಾಗೂ ತೀರಾ ಅಗತ್ಯ ಸೌಲಭ್ಯ ಹೊರತುಪಡಿಸಿ, ನಗರದ ಇನ್ನುಳಿದ ಎಲ್ಲ ಅಂಗಡಿಗಳನ್ನು ಪ್ರತಿದಿನ ಸಂಜೆ 5 ಗಂಟೆಗೆ ಮುಚ್ಚಲು ಬುಧವಾರ ಇಲ್ಲಿ ನಡೆದ ವರ್ತಕರ ಸಭೆ ನಿರ್ಧರಿಸಿದೆ.

ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಭಾಗಗಳ ವರ್ತಕರು ಭಾಗವಹಿಸಿದ್ದರು. ತಾಲ್ಲೂಕಿನ ಅನೇಕ ಕೋವಿಡ್ ಪ್ರಕರಣಗಳು ದೃಢಪಟ್ಟಿರುವುದರಿಂದ, ಈ ಸಾಂಕ್ರಾಮಿಕ ಕಾಯಿಲೆಯ ನಿಯಂತ್ರಣಕ್ಕೆ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ, ನಗರದ ಎಲ್ಲ ಅಂಗಡಿಗಳ ಬಾಗಿಲು ಮುಚ್ಚಿ, ಅರ್ಧದಿನ ಲಾಕ್‌ಡೌನ್ ಮಾಡಬೇಕು ಎಂದು ಕೆಲವು ವ್ಯಾಪಾರಸ್ಥರು ಅಭಿಪ್ರಾಯಪಟ್ಟರು.

ಅನೇಕ ವರ್ತಕರು ಅಂಗಡಿ ಬಾಗಿಲು ತೆಗೆಯುವುದೇ ಬೆಳಿಗ್ಗೆ 10 ಗಂಟೆಯಾಗುತ್ತದೆ. 2 ಗಂಟೆಯವರೆಗೆ ಮಾತ್ರ ವಹಿವಾಟು ನಡೆದರೆ, ಪೇಟೆಯಲ್ಲಿ ಜನದಟ್ಟಣಿಯಾಗುತ್ತದೆ. ಹೀಗಾಗಿ, ಸಂಜೆಯ ತನಕ ಅವಕಾಶ ನೀಡಬೇಕು ಎಂದು ಇನ್ನು ಕೆಲವರು ಅಭಿಪ್ರಾಯವ್ಯಕ್ತಪಡಿಸಿದರು. ಅಂತಿಮವಾಗಿ ಜುಲೈ 31ರವರೆಗೆ, ಪ್ರತಿದಿನ ಸಂಜೆ 5 ಗಂಟೆಗೆ ತರಕಾರಿ ಸೇರಿದಂತೆ ಎಲ್ಲ ಅಂಗಡಿಗಳ ಬಾಗಿಲು ಹಾಕಿ, ಮರುದಿನ ಬೆಳಿಗ್ಗೆಯವರೆಗೆ ಲಾಕ್‌ಡೌನ್ ಮಾಡಲು ನಿರ್ಧರಿಸಲಾಯಿತು.

‘ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಅಂಗಡಿಗಳಲ್ಲಿ ಸ್ಯಾನಿಟೈಸರ್ ಬಳಸಬೇಕು. ನಗರಸಭೆ ಮತ್ತು ಪೊಲೀಸರ ತಂಡ ಅಂಗಡಿಗಳಿಗೆ ಭೇಟಿ ನೀಡಿ ಇದನ್ನು ಪರಿಶೀಲಿಸುತ್ತದೆ. ಶಾರೀರಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮಹತ್ವದ್ದು’ ಎಂದು ಈಶ್ವರ ಉಳ್ಳಾಗಡ್ಡಿ ಹೇಳಿದರು.

‘ಸಂಜೆ 5 ಗಂಟೆಗೆ ಅಂಗಡಿ ಬಂದ್ ಮಾಡಲು ಎಲ್ಲರೂ ಸಹಕರಿಸಬೇಕು. ನಿಯಮ ಪಾಲನೆ ಮಾಡದ ಅಂಗಡಿಗಳ ಬಾಗಿಲು ಮುಚ್ಚಿಸುವ ಮೂಲಕ ಅವರಿಗೆ ಶಿಕ್ಷೆ ನೀಡಬೇಕು. ಆಗ, ಎಲ್ಲರೂ ಜಾಗೃತಿ ಮೂಡುತ್ತದೆ’ ಎಂದು ಡಿವೈಎಸ್ಪಿ ಜಿ.ಟಿ.ನಾಯಕ ಹೇಳಿದರು.

‘ಕಟ್ಟಡ ಕಾರ್ಮಿಕರು ಕೆಲಸ ಮುಗಿಸಿ, ಸಂಜೆ 6 ಗಂಟೆಗೆ ಮನೆಗೆ ತೆರಳುತ್ತಾರೆ. ಅವರಿಗೆ ಪೊಲೀಸರಿಂದ ತೊಂದರೆ ಆಗಬಾರದು’ ಎಂದು ಎಂಜಿನಿಯರಿಂಗ್ ಅಸೋಸಿಯೇಷನ್ ಪ್ರಮುಖ ಚಂದನ ಪೈ ಹೇಳಿದರು.

ವಿವಿಧ ವಿಭಾಗಗಳ ವರ್ತಕರ ಸಂಘಟನೆ ಪ್ರಮುಖರಾದ ಜಿ.ಜಿ.ಹೆಗಡೆ ಕಡೆಕೋಡಿ, ಈಶ್ವರ ನಾಯ್ಕ, ಪ್ರೇಮಕುಮಾರ ಮಾಳವದೆ, ಮಾಧವ ರೇವಣಕರ, ಶ್ರೀಪಾದ ಹೆಗಡೆ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು