ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ...

ಭೀಕರ ಅಪಘಾತದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಒತ್ತಾಯ
Last Updated 21 ಜುಲೈ 2022, 13:48 IST
ಅಕ್ಷರ ಗಾತ್ರ

ಕಾರವಾರ: ಶಿರೂರು ಟೋಲ್‌ಗೇಟ್‌ನಲ್ಲಿ ಬುಧವಾರ ನಡೆದ ಭೀಕರ ಅಪಘಾತದ ಬೆನ್ನಲ್ಲೇ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಪರವಾಗಿ ಸಾರ್ವಜನಿಕರು ಮತ್ತೊಮ್ಮೆ ಧ್ವನಿಯೆತ್ತಿದ್ದಾರೆ. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದ್ದಿದ್ದರೆ ಹೊನ್ನಾವರದ ನಾಲ್ವರ ಜೀವ ಉಳಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್‌, ಸಚಿವರು– ಶಾಸಕರ ‘ಪೇಜ್’ಗಳಲ್ಲಿ, ವಿವಿಧ ಮಾಧ್ಯಮ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ಸಾವಿರಾರು ಮಂದಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳಿಂದ ಬೇಡಿಕೆ ಮಂಡಿಸುತ್ತಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ಇನ್ನೆಷ್ಟು ಜೀವಗಳು ಬಲಿಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭೌಗೋಳಿಕವಾಗಿ ವಿಶಾಲವಾಗಿರುವ ಉತ್ತರ ಕನ್ನಡವು ವೈದ್ಯಕೀಯ ರಂಗದಲ್ಲಿ ಬಹಳ ಹಿಂದುಳಿದಿದೆ. ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗೆಮಂಗಳೂರು, ಉಡುಪಿ ಜಿಲ್ಲೆಗಳು ಅಥವಾ ಗೋವಾ ರಾಜ್ಯವನ್ನು ಅವಲಂಬಿಸಬೇಕಾಗಿದೆ ಎಂದು ಜನರ ಬೇಸರ ಮತ್ತೊಮ್ಮೆ ಪ್ರಕಟವಾಗಿದೆ.

ಕಾರವಾರದ ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಒಂದಷ್ಟು ಸೌಲಭ್ಯಗಳು ಮಂಜೂರಾಗಿವೆ. ಆದರೆ, ಅಲ್ಲಿ ಕೂಡ ಪೂರ್ಣ ಪ್ರಮಾಣದ ನೇಮಕಾತಿಯಾಗಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಿಲ್ಲೆಯಲ್ಲಿ ಟ್ರಾಮಾ ಸೆಂಟರ್ ಆದಷ್ಟು ಬೇಗ ಆರಂಭಿಸಬೇಕು. ಅದಕ್ಕೆ ವೈದ್ಯರ ನೇಮಕವಾಗಬೇಕು. ಕೇವಲ ಯಂತ್ರಗಳನ್ನು ಕೊಟ್ಟರೆ ಸಾಲದು. ಸಂಬಂಧಿಸಿದ ತಂತ್ರಜ್ಞರನ್ನು ನೇಮಿಸಿ ಕಾರ್ಯಾರಂಭ ಮಾಡಬೇಕು. ಅಲ್ಟ್ರಾ ಸೌಂಡ್ ಮಾಡಿಸಲು ಕೂಡ ಕಾಯುವಂಥ ಸ್ಥಿತಿಯಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೇಗ ಆಗುತ್ತಿದೆ’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳುತ್ತಾರೆ.

‘ಜಿಲ್ಲಾ ಆಸ್ಪತ್ರೆಯಲ್ಲಿ ಕಿಡ್ನಿ ಸಂಬಂಧಿತ ತಜ್ಞರಿಲ್ಲ. ನರರೋಗ ತಜ್ಞರನ್ನು ವಾರಕ್ಕೊಮ್ಮೆ ಮಾತ್ರ ಶಿರಸಿಯಿಂದ ಕರೆಸಲಾಗುತ್ತಿದೆ. ಹೃದ್ರೋಗ ತಜ್ಞರೂ ನೇಮಕವಾಗಬೇಕು’ ಎಂದು ಒತ್ತಾಯಿಸುತ್ತಾರೆ.

‘ಜಾನುವಾರು ನಿಯಂತ್ರಿಸಿ’:ಶಿರೂರು ಟೋಲ್‌ಗೇಟ್‌ನಲ್ಲಿ ತುರ್ತು ಸಂಚಾರದ ವಾಹನಗಳ ಲೇನ್‌ನಲ್ಲಿ ಬೀಡಾಡಿ ದನವೊಂದು ಮಲಗಿತ್ತು. ಅದನ್ನು ಎಬ್ಬಿಸಲು ಟೋಲ್‌ಗೇಟ್ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾಗಲೇ ಆಂಬುಲೆನ್ಸ್ ಬಂದು ಅಪ್ಪಳಿಸಿದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

‘ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ರಸ್ತೆಗಳಲ್ಲಿ ಬೀಡಾಡಿ ದನಗಳ ನಿಯಂತ್ರಣದ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗೆ ವಹಿಸಬೇಕು. ಇದಕ್ಕೆ ಬೇಕಾಗುವ ಖರ್ಚು ವೆಚ್ಚಗಳನ್ನು ಜಿಲ್ಲಾಡಳಿತ ಬಿಡುಗಡೆ ಮಾಡಬೇಕು’ ಎಂದು ಮಾಧವ ನಾಯಕ ಅಭಿಪ್ರಾಯ ಪಡುತ್ತಾರೆ.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಉತ್ತರ ಕನ್ನಡದ ವ್ಯಾಪ್ತಿಯ ಹೆದ್ದಾರಿಗಳು, ರಸ್ತೆಗಳಲ್ಲಿ ಬೀಡಾಡಿ ದನಗಳ ನಿಯಂತ್ರಣ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಚರ್ಚಿಸಲಾಗುವುದು. ಈ ಮೊದಲೂ ರೇಡಿಯಂ ಪಟ್ಟಿಗಳನ್ನು ಅಳವಡಿಸಲಾಗಿತ್ತು. ಟೋಲ್‌ಗೇಟ್‌ಗಳಲ್ಲಿ ಕೂಡ ತುರ್ತು ನಿರ್ಗಮನದ ಪಥಗಳಲ್ಲಿ ಅಡೆತಡೆ ಇಲ್ಲದಂತೆ ಕ್ರಮಕ್ಕೆ ಒಂದೆರಡು ದಿನಗಳಲ್ಲಿ ನಿರ್ದೇಶನ ಪ್ರಕಟಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT