ಸೋಮವಾರ, ಜನವರಿ 20, 2020
27 °C
ಬಂಕ್‌ನ ಟ್ಯಾಂಕ್ ಸೋರಿಕೆಯಾಗಿ ಹರಿದ ತೈಲ

ಅಂಕೋಲಾದ ಬಾವಿಯಲ್ಲಿ ಪೆಟ್ರೋಲ್ ಪತ್ತೆ! 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ಇಲ್ಲಿನ ಮನೆಯೊಂದರ ಬಾವಿಯೊಂದರಲ್ಲಿ ಪೆಟ್ರೋಲ್ ಪತ್ತೆಯಾಗಿದೆ ಎಂಬ ಮಾಹಿತಿ ಪಟ್ಟಣದಲ್ಲಿ ಶುಕ್ರವಾರ ಕ್ಷಣಾರ್ಧದಲ್ಲಿ ಹಬ್ಬಿತ್ತು. ಅಚ್ಚರಿಗೊಂಡ ಜನರು ತಂಡೋಪತಂಡವಾಗಿ ಬಂದು ಬಾವಿಯ ಬಳಿ ಸೇರಿದ್ದರು!

ಆಗಿದ್ದೇನು?: ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಮನೆಯೊಂದರ ಬಳಿಯೇ ಪೆಟ್ರೋಲ್ ಬಂಕ್ ಇದೆ. ಅದರ ಟ್ಯಾಂಕ್ ಸೋರಿಕೆಯಾದ ಪರಿಣಾಮ ಅದರಲ್ಲಿದ್ದ ಪೆಟ್ರೋಲ್, ನಿಧಾನವಾಗಿ ಮಣ್ಣಿನಲ್ಲಿ ಇಂಗಿತು. ಸಮೀಪದಲ್ಲೇ ಇರುವ ಮನೆಯ ಕುಡಿಯುವ ನೀರಿನ ಬಾವಿಗೆ ಹರಿಯಿತು.

ಮನೆಯ ಮಾಲಕಿ ನಾಗವೇಣಿ ನಾಗರಾಜ ಆಚಾರಿ, ಬಾವಿಯಲ್ಲಿ ಒಂದು ವಾರದಿಂದ ಪೆಟ್ರೋಲ್ ವಾಸನೆ ಬರುತ್ತಿದ್ದುದನ್ನು ಗಮನಿಸಿದ್ದರು. ಶುಕ್ರವಾರ ಪುನಃ ಬಾವಿಯನ್ನು ನೋಡಿದಾಗ ನೀರಿನ ಮೇಲ್ಭಾಗದಲ್ಲೇ ಪೆಟ್ರೋಲ್ ಶೇಖರಣೆಯಾಗಿದ್ದು ಗೋಚರಿಸಿತು.

ಈ ಬಗ್ಗೆ ಅವರು ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ್ ಅವರಿಗೆ ದೂರು ನೀಡಿದರು. ಅದರಂತೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣ ನಾಯಕ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೀರು ಕಲುಷಿತಗೊಂಡಿದ್ದನ್ನು ಗಮನಿಸಿದರು. ಬಳಿಕ ಪೆಟ್ರೋಲ್ ಬಂಕ್‌ನವರಿಗೆ ನೋಟಿಸ್ ಜಾರಿ ಮಾಡಿದರು. 

ಈ ಬಗ್ಗೆ ಸ್ಪಂದಿಸಿದ ಪೆಟ್ರೋಲ್ ಬಂಕ್ ಮಾಲೀಕರು, ಬಾವಿಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿಸಿಕೊಡುವ ಭರವಸೆಯಿತ್ತು, ಕುಡಿಯುವ ನೀರಿನ ಬಳಕೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಿಶ್ವನಾಥ ಟಿ.ನಾಯ್ಕ, ಹಿರಿಯ ಆರೋಗ್ಯಾಧಿಕಾರಿ ಪ್ರವೀಣ ನಾಯಕ, ಸಿಬ್ಬಂದಿ ರಾಘವೇಂದ್ರ ಗೌಡ, ಮನೆ ಸದಸ್ಯ ನಾಗರಾಜ ಆಚಾರಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು