ಶನಿವಾರ, ಜನವರಿ 22, 2022
16 °C

ವ್ಯವಸ್ಥೆಯನ್ನು ನಾಶ ಮಾಡಿದ ಪಾಪ ಕಾಂಗ್ರೆಸ್‌ಗೆ: ಪ್ರಮೋದ ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಪಂಚಾಯತ್ ರಾಜ್ ವ್ಯವಸ್ಥೆಯನ್ನು ನಾಶ ಮಾಡಿದ ಪಾಪ ಕಾಂಗ್ರೆಸ್‌ನದ್ದು. ಆ ಪಕ್ಷದವರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆಯಿಲ್ಲ’ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಟೀಕಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1983ರ ಜಿಲ್ಲಾ ಪರಿಷತ್ತು ಕಾಯ್ದೆ ಅತ್ಯುತ್ತಮವಾಗಿತ್ತು. ಅದನ್ನು ಸಂಪೂರ್ಣವಾಗಿ ನಾಶಗೊಳಿಸಿದರು. 1993ರಲ್ಲಿ ಕಾಂಗ್ರೆಸ್ ಸರ್ಕಾರವು ಬೇರೊಂದು ಕಾಯ್ದೆ ಜಾರಿ ಮಾಡಿ ಸ್ಥಳೀಯ ಆಡಳಿತದ ಅಧಿಕಾರವನ್ನು ಸರ್ಕಾರಿ ನೌಕರರ ಕೈಯಲ್ಲಿರಿಸಿ ವ್ಯವಸ್ಥೆಯನ್ನು ದುರ್ಬಲಗೊಳಿಸಿತು. ಆಗ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿ ಹಾಗೂ ಎಂ.ವೈ. ಘೋರ್ಪಡೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು’ ಎಂದು ದೂರಿದರು.

‘ಜಿಲ್ಲೆಯಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯರು ಒಮ್ಮೆಯಾದರೂ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಭಾಗವಹಿಸಿದ್ದಾರಾ? ತಮಗೆ ಪಂಚಾಯತ್ ರಾಜ್ ವ್ಯವಸ್ಥೆ ಅರ್ಥವಾಗಿಲ್ಲ ಎಂದು ಕೊನೆಗೆ ಹೇಳಿಕೊಳ್ಳುತ್ತಾರೆ. ಈ ಮೂಲಕ ಅವರು 12 ವರ್ಷ ಜಿಲ್ಲೆಗೆ ಅನ್ಯಾಯ ಮಾಡಿದಂತಾಯಿತು’ ಎಂದು ಹೇಳಿದರು.

‘ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಕಾಂಗ್ರೆಸ್‌ನವರು ಬಿ.ಜೆ.ಪಿ.ಯಿಂದ ನೋಡಿ ಕಲಿಯಬೇಕು. ಆ ಪಕ್ಷದಲ್ಲಿ ಯಾವುದೇ ವಿಕೇಂದ್ರೀಕರಣವಿಲ್ಲ. ಗಾಂಧಿ ಕುಟುಂಬಕ್ಕೇ ಸಲಾಂ ಮಾಡಬೇಕು’ ಎಂದು ಟೀಕಿಸಿದರು.

ಪಕ್ಷದ ಜಿಲ್ಲಾ ಘಟಕದ ವಕ್ತಾರ ನಾಗರಾಜ ನಾಯಕ, ನಗರಸಭೆ ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಮುಖಂಡರಾದ ಮನೋಜ ಭಟ್ ಹಾಗೂ ನಾಗೇಶ ಕುರ್ಡೇಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು