ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಧೈರ್ಯದಿಂದ ಪರೀಕ್ಷೆಗೆ ಬನ್ನಿ

ಪೂರ್ವ ಸಿದ್ಧತೆ ಕುರಿತು ಮಾಹಿತಿ ನೀಡಿದ ಡಿಡಿಪಿಐ ದಿವಾಕರ ಶೆಟ್ಟಿ ಹೇಳಿಕೆ
Last Updated 17 ಜೂನ್ 2020, 12:07 IST
ಅಕ್ಷರ ಗಾತ್ರ

ಶಿರಸಿ: ಜೂನ್ 25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮೂರು ದಿನ ಮುಂಚಿತವಾಗಿ ಮುಖಗವಸು ವಿತರಿಸಲಾಗುತ್ತದೆ. ಮಕ್ಕಳು ಮುಖಗವಸು ಧರಿಸುವುದನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು ಎಂದು ಡಿಡಿಪಿಐ ದಿವಾಕರ ಶೆಟ್ಟಿ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ 19 ಸಾಂಕ್ರಾಮಿಕ ರೋಗ ಇರುವ ಕಾರಣಕ್ಕೆ ಪ್ರವೇಶಪತ್ರ ನೀಡುವ ಸಂದರ್ಭದಲ್ಲಿ ಆಯಾ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಮುನ್ನೆಚರಿಕಾ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡುತ್ತಾರೆ. ಜೂನ್ 23ರಂದು ಪರೀಕ್ಷೆ ನಡೆಯುವ ಎಲ್ಲ ಕೇಂದ್ರಗಳ ಪ್ರತಿ ಕೊಠಡಿಯನ್ನು ಸ್ಯಾನಿಟೈಸ್ ಮಾಡಲಾಗುವುದು. ಪ್ರತಿ ಡೆಸ್ಕ್ ನಡುವೆ ಕನಿಷ್ಠ 3.5 ಅಡಿ ಅಂತರ ಕಾಯ್ದುಕೊಳ್ಳಲಾಗುವುದು. ಕಂಟೈನ್ಮೆಟ್ ವಲಯದ ವಿದ್ಯಾರ್ಥಿಗಳು, ಜ್ವರ ಬಂದವರು ಇದ್ದರೆ, ಅವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆಗೊಳಿಸಲಾಗುವುದು. ಮಕ್ಕಳು ಧೈರ್ಯದಿಂದ ಪರೀಕ್ಷೆಗೆ ಬರಬಹುದು’ ಎಂದರು.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 2255 ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯಕ್ಕಾಗಿ ಸಾರಿಗೆ ಸಂಸ್ಥೆಗೆ ಮನವಿ ಸಲ್ಲಿಸಲಾಗಿದೆ. ಬಸ್‌ ಮಾರ್ಗದ ಆರಂಭದಲ್ಲಿ ಒಬ್ಬರು ಶಿಕ್ಷಕರು ಇರಲಿದ್ದು, ಎಲ್ಲ ಮಕ್ಕಳನ್ನು ಕೇಂದ್ರಕ್ಕೆ ಕರೆತರುವ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ. ಮಲೆನಾಡಿನಲ್ಲಿ ಮಳೆಯಿಂದ ಗ್ರಾಮೀಣ ಭಾಗದಲ್ಲಿ ತೊಂದರೆಯಾದರೆ, ಸರ್ಕಾರಿ ಜೀಪ್‌ಗಳನ್ನು ಸಹ ಮಕ್ಕಳನ್ನು ಕರೆತರಲು ಬಳಸಿಕೊಳ್ಳಲಾಗುವುದು. ಪ್ರತಿ 200 ವಿದ್ಯಾರ್ಥಿಗೆ ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ರಚಿಸಲಾಗುತ್ತದೆ. ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 67 ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ಇರಲಿದೆ. ಸ್ಕೌಟ್ಸ್ ಮತ್ತು ಗೈಡ್ಸ್‌ನ 134 ಸ್ವಯಂ ಸೇವಕರು ನೆರವಾಗಲಿದ್ದಾರೆ ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರ ಸ್ಯಾನಿಟೈಸ್ ಮಾಡಲು ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯ್ತಿಗಳಿಗೆ ಪತ್ರ ಬರೆಯಲಾಗಿದೆ. ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿರಲು ಹೆಸ್ಕಾಂಗೆ ತಿಳಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 18ರಿಂದ 20 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆ ಪ್ರಮುಖರಾದ ವಸಂತ ಭಂಡಾರಿ, ಮಾರಿಕಾಂಬಾ ಪ್ರೌಢಶಾಲೆಯ ಉಪಪ್ರಾಚಾರ್ಯ ನಾಗರಾಜ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT