ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಟಪಕ್ಕೆ ಹೊರಡಲು ಅಣಿಯಾದ ಗಣಪ

ಜಿಟಿಜಿಟಿ ಮಳೆಯಲ್ಲೂ ಕಳೆಗಟ್ಟಿದ ಹಬ್ಬದ ಸಂಭ್ರಮ
Last Updated 30 ಆಗಸ್ಟ್ 2019, 9:02 IST
ಅಕ್ಷರ ಗಾತ್ರ

ಶಿರಸಿ: ಜಿಟಿಜಿಟಿ ಸುರಿಯುವ ಮಳೆಯಲ್ಲೂ ಚಪ್ಪರ ಕಟ್ಟುವ, ಮಂಟಪ ತಯಾರಿಸುವ, ಬಣ್ಣದ ಬ್ಯಾಗಡೆ ಅಂಟಿಸುವ ಕಾರ್ಯ ತಾಲ್ಲೂಕಿನಲ್ಲಿ ಜೋರಾಗಿ ನಡೆದಿದೆ. ಗಣೇಶ ಚತುರ್ಥಿ ಹಬ್ಬಕ್ಕೆ (ಸೆ.02) ಎರಡು ದಿನಬಾಕಿಯಿವೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಣೇಶನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಭರಾಟೆಯಲ್ಲಿ ಸಾಗಿದೆ. ಕಲಾಕಾರರಿಗೆ ಈಗ ಬಿಡುವಿಲ್ಲದ ಕೆಲಸ. ಗಣೇಶೋತ್ಸವ ಮಂಡಳಿಗಳು ಪೆಂಡಾಲ್ ಕಟ್ಟಿ, ಮಂಟಪ ಶೃಂಗರಿಸಿ, ಏಕದಂತನನ್ನು ತಂದು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಿವೆ. ತಾಲ್ಲೂಕಿನಲ್ಲಿ ಒಟ್ಟು 193 ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಲಾಗುತ್ತದೆ.

ಹಳ್ಳಿಗರಿಗೆ ದೀಪಾವಳಿ ದೊಡ್ಡ ಹಬ್ಬವಾದರೂ, ಹೆಚ್ಚು ಖುಷಿಯನ್ನು ಹಂಚುವುದು ಗಣೇಶ ಚತುರ್ಥಿ. ಜನರ ನಡುವಿನ ಸಣ್ಣ–ಪುಟ್ಟ ವೈಮನಸ್ಸನ್ನು ಅಳಿಸುವ ಶಕ್ತಿ ಗಣೇಶನಿಗಿದೆ. ಊರಿನ ಹಿರಿಯರು, ಯುವಕರು ಒಂದೆಡೆ ಸೇರಿ ವಾರದ ಮೊದಲಿನಿಂದ ಸಾರ್ವಜನಿಕ ಗಣಪತಿ ಕೂಡಿಸುವ ಸ್ಥಳವನ್ನು ಅಣಿಗೊಳಿಸುತ್ತಾರೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಬ್ಬದ ಸಿದ್ಧತೆಗೆ ಸಣ್ಣ ತೊಡಕಾಗಿದೆ.

ತಾಲ್ಲೂಕಿನ ಹುಲೇಕಲ್‌ ಅಂಚೆ ಕಚೇರಿಯ ಪೋಸ್ಟ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಗಜಾನನ ಶೇಟ್ ಅವರು 15 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಸುತ್ತಿದ್ದಾರೆ. ‘ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ರಾಸಾಯನಿಕ ಬಣ್ಣ ಬಳಸಬಾರದೆಂದು ಹೇಳುತ್ತಿದೆ. ಮಣ್ಣಿನ ಮೂರ್ತಿ ಗ್ರಾಹಕರನ್ನು ಸೆಳೆಯುವುದಿಲ್ಲ. ಹೀಗಾಗಿ ಸರ್ಕಾರವೇ ರಾಸಾಯನಿಕರಹಿತ ಬಣ್ಣ ಪೂರೈಸಲು ಯೋಚಿಸಬೇಕು’ ಎಂಬುದು ಅವರ ಸಲಹೆ.

ನಗರದ ದೇವಿಕೆರೆ, ಝೂ ವೃತ್ತ, ಮಾರಿಗುಡಿ, ಶಿವಾಜಿಚೌಕ, ಡ್ರೈವರ್‌ ಕಟ್ಟೆ, ಮಾರ್ಕೆಟ್, ರಾಯರಪೇಟೆ, ಸಿಂಪಿಗಲ್ಲಿ, ಉಣ್ಣೇಮಠ ಗಲ್ಲಿ, ಬಾಪೂಜಿ ನಗರ, ಟಿಎಸ್‌ಎಸ್ ರಸ್ತೆ, ಹನುಮಗಿರಿ, ಮರಾಠಿಕೊಪ್ಪ ಮೊದಲಾದ ಕಡೆಗಳಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲು ಮಂಟಪಗಳು ತಲೆಯೆತ್ತಿವೆ. ನಗರದಲ್ಲಿ 15ಕ್ಕೂ ಹೆಚ್ಚು ಗುಡಿಗಾರರು ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಸೆ.1ರಂದು ನಡೆಯುವ ಗೌರಿ ಹಬ್ಬಕ್ಕೆ ಮನೆ–ಮನೆ ಹೋಗಲು ಗೌರಿ ಸಿದ್ಧಳಾಗಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT