ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪತ್ರಕರ್ತರು ಸಮಾಜದ ವೈದ್ಯರಿದ್ದಂತೆ’

ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
Last Updated 1 ಆಗಸ್ಟ್ 2021, 15:50 IST
ಅಕ್ಷರ ಗಾತ್ರ

ಕಾರವಾರ: ‘ಪತ್ರಕರ್ತರು ಸಮಾಜಕ್ಕೆ ಅಂಟಿದ ರೋಗಗಳಿಗೆ ಚಿಕಿತ್ಸೆ ಕೊಡುವ ವೈದ್ಯರಿದ್ದಂತೆ. ಸಮಾಜದ ಕೆಲವು ಕೆಡುಕುಗಳ ಮೂಲ ಅರಿತು ಜನರಿಗೆ ನೋವೂ ಆಗದಂತೆ, ಕಾಯಿಲೆಯೂ ಗುಣವಾಗುವಂತೆ ಚುಚ್ಚುಮದ್ದು ನೀಡುವ ಸವಾಲಿನ ಜವಾಬ್ದಾರಿ ಮಾಧ್ಯಮಗಳದ್ದಾಗಿದೆ’ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿಶ್ಲೇಷಿಸಿದರು.

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘವು ತಾಲ್ಲೂಕಿನ ಸಿದ್ದರ ಶ್ರೀ ನರಸಿಂಹ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಮಾತನಾಡಿ, ‘ಕೃಷಿ ವಲಯವು ತುಂಬಾ ಶ್ರಮ ಬೇಡುವಂಥದ್ದು. ಅವರ ಬದುಕನ್ನು ಮೇಲೆತ್ತುವ, ಪ್ರೇರಣೆ ನೀಡುವ ನಿಟ್ಟಿನಲ್ಲಿ ಕಾರವಾರದ ಪತ್ರಕರ್ತರು ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ’ ಎಂದರು.

ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಮಾತನಾಡಿ, ‘ಸತ್ಯಮೇವ ಜಯತೇ ಎಂಬ ಘೋಷ ವಾಕ್ಯವು ಕೇವಲ ಅಕ್ಷರಗಳಲ್ಲಿದ್ದರೆ ಸಾಲದು. ಅದನ್ನು ಪತ್ರಕರ್ತರು ಜಾರಿಗೆ ತರುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ:

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ‘ಟ್ಯಾಗೋರ್ ಪ್ರಶಸ್ತಿ’ಯನ್ನು ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ಸದಾಶಿವ ಎಂ.ಎಸ್., ‘ವಿಜಯ ಕರ್ನಾಟಕ’ ಶಿವಮೊಗ್ಗ ಬ್ಯೂರೊ ಮುಖ್ಯಸ್ಥ ವಿವೇಕ ಮಹಾಲೆ ಹಾಗೂ ‘ದಿಗ್ವಿಜಯ ನ್ಯೂಸ್’ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ ಅವರಿಗೆ ಪ್ರದಾನ ಮಾಡಲಾಯಿತು.

ಅಧಿಕಾರಿಗಳಿಂದ ಸಸಿ ನಾಟಿ:

ಸಿದ್ಧರದಲ್ಲಿ ಕೆ.ಡಿ.ಪೆಡ್ನೇಕರ್ ಅವರ ಜಮೀನಿನಲ್ಲಿ ಭತ್ತದ ಸಸಿ ನಾಟಿ ಮಾಡಲಾಯಿತು. ಬಿಳಿ ಲುಂಗಿ, ಕೇಸರಿ ಅಂಗಿ, ಶಲ್ಯ ಧರಿಸಿ ಪಕ್ಕಾ ಗ್ರಾಮೀಣ ದಿರಿಸಿನಲ್ಲಿ ಕೆಸರು ಗದ್ದೆಗಿಳಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗೂ ಇತರ ಅಧಿಕಾರಿಗಳು ಭತ್ತದ ಸಸಿಗಳನ್ನು ನಾಟಿ ಮಾಡಿದರು.

ಸಸಿಮಡಿಗೆ ಪೂಜೆ ಮಾಡಿ ಕೃಷಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇದೇವೇಳೆ, ನೆರೆ ಸಂತ್ರಸ್ತ ಐದು ಕುಟುಂಬಗಳಿಗೆ ರೋಟರಿ ಕ್ಲಬ್‌ನಿಂದ ದಿನಸಿ ಕಿಟ್‌ಗಳನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಸ್ತಾಂತರಿಸಿದರು.

ಸಮ್ಮಾನ:

50 ಎಕರೆ ಭತ್ತದ ಕೃಷಿ ಮಾಡಿ ಸಾಧನೆ ಮಾಡಿದ ಹಳಗಾದ ಧೋಲ ಗ್ರಾಮದ ರೈತ ಯಶವಂತ ಉಂಡೇಕರ್ ಹಾಗೂ ಸಿದ್ದರ ಗ್ರಾಮದ ಹಿರಿಯ ಕೃಷಿಕ ಅನಂತ ಶಾಬು ನಾಯ್ಕ ದಂಪತಿಯನ್ನು ಸನ್ಮಾನಿಸಲಾಯಿತು.

ತಹಶೀಲ್ದಾರ್ ನಿಶ್ಚಲ ನರೋನಾ, ವೈಲವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ನಾಯ್ಕ, ಉಪಾಧ್ಯಕ್ಷೆ ಮೇಘಾ ಗಾಂವಕರ್, ದೇವಸ್ಥಾನ ಸಮಿತಿ ಮುಕ್ತೇಸರ ದತ್ತಾತ್ರೇಯ ಗಾಂವ್ಕರ್, ಅರ್ಚಕ ವಿಠ್ಠಲ ಜೋಷಿ, ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ದರ್ಶನ ನಾಯ್ಕ, ಅರವಿಂದ ಗುನಗಿ ವೇದಿಕೆಯಲ್ಲಿದ್ದರು.

ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿದರು. ದೇವರಾಜ ನಾಯ್ಕ ಅತಿಥಿ ಪರಿಚಯ ಮಾಡಿದರು. ಸಂದೀಪ ಸಾಗರ ಕಾರ್ಯಕ್ರಮ ನಿರೂಪಿಸಿದರು. ಸುಭಾಶ್ಚಂದ್ರ ಎನ್.ಎಸ್.ವಂದಿಸಿದರು. ದೇವಸ್ಥಾನ ಸಮಿತಿ ಮುಕ್ತೇಸರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಾಜೇಂದ್ರ ರಾಣೆ ಸಂಪೂರ್ಣ ಕಾರ್ಯಕ್ರಮ ಸಂಘಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT