ಭಾನುವಾರ, ಏಪ್ರಿಲ್ 11, 2021
32 °C
ಫಾಸ್ಟ್‌ಟ್ಯಾಗ್ ದುಪ್ಪಟ್ಟು ಹಣ ವಸೂಲಿಗೆ ಪ್ರತಿಭಟನಾಕಾರರ ತೀವ್ರ ಖಂಡನೆ

ಇಂಧನ ದರ ಏರಿಕೆ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಪೆಟ್ರೋಲ್, ಡೀಸೆಲ್, ವಾಹನಗಳ ಬಿಡಿಭಾಗ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಸಲು ಆಗ್ರಹಿಸಿ ಲಾರಿ ಮಾಲೀಕರ ಸಂಘವು ವಿವಿಧ ಸಂಘಟನೆಗಳೊಂದಿಗೆ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. ಲಾರಿ, ಆಟೊ, ಟ್ಯಾಕ್ಸಿ, ಹಾಗೂ ಇತರ ವಾಣಿಜ್ಯ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಪ್ರತಿಭಟನೆಯ ನಿಮಿತ್ತ ಸಂಘಟನೆಯ ಪ್ರಮುಖರು ಹಾಗೂ ಸಾರ್ವಜನಿಕರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಹೆದ್ದಾರಿಯಲ್ಲಿ ಧರಣಿ ಕೂತು ಕೆಲ ಕಾಲ ರಸ್ತೆ ತಡೆದರು. ನಂತರ ದರ ಏರಿಕೆಯ ವಿರುದ್ಧ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿ ಆವರಣಕ್ಕೆ ನಡೆದರು.

ಈ ಸಂದರ್ಭದಲ್ಲಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಮಹೇಶ್ ನಾಯ್ಕ, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಗಜು ಪಟಗಾರ, ಬಸವೇಶ್ವರ ಲಗೇಜ್ ಆಟೊ ಚಾಲಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಭಗತ್‌ಸಿಂಗ್ ಟ್ಯಾಕ್ಸಿ ಮತ್ತು ಆಟೊರಿಕ್ಷಾ ಮಾಲೀಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದರು.

ತಹಶೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮಾರುಕಟ್ಟೆಯಲ್ಲಿ ದಿನೇದಿನೇ ಅಧಿಕಗೊಳ್ಳುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ತಕ್ಷಣ ಇಳಿಸಿ, ಅದನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಬೇಕು, ಟೋಲ್ ಚಾರ್ಜ್ ಮತ್ತು ಫಾಸ್ಟ್‌ಟ್ಯಾಗ್‌ ಇಲ್ಲದಿದ್ದಲ್ಲಿ ಟೋಲ್ ಗೇಟ್‌ಗಳಲ್ಲಿ ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿದ್ದು, ಈ ಹಗಲು ದರೋಡೆಯನ್ನು ನಿಲ್ಲಿಸಬೇಕು, ವಿಮಾ ಕಂತುಗಳ ದರವನ್ನು ಇಳಿಸಬೇಕು, ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಕೈಬಿಡಬೇಕು, ಇದೀಗ ಜಾರಿಗೊಳಿಸಲಾದ ಗೀನ್ ಟ್ಯಾಕ್ಸ್ ನಿಯಮ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ವಿನಾಯಕ ಗುತ್ತಲ, ರಾಜು ಮೆಂಡನ್, ಅಶೋಕ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಖ್ವಾಜಾ ಮನವಿ ಪತ್ರ ವಾಚಿಸಿದರು. ನವೀನ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸತೀಶ ನಾಯ್ಕ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.