ಮಂಗಳವಾರ, ಜೂನ್ 28, 2022
25 °C
ಎಪಿಎಂಸಿ ಪ್ರಾಂಗಣದಲ್ಲಿ ನೀರಿನಲ್ಲಿ ತೇಲಿ ಹೋದ ಬೆಳೆ

ಹಳಿಯಾಳ: ಅಕಾಲಿಕ ಮಳೆ, ಗೋವಿನಜೋಳಕ್ಕೆ ಹಾನಿ

ಸಂತೋಷ ಹಬ್ಬು Updated:

ಅಕ್ಷರ ಗಾತ್ರ : | |

Prajavani

ಹಳಿಯಾಳ: ನಿರಂತರ ಮಳೆಯ ಪರಿಣಾಮ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತಂದ ಗೋವಿನ ಜೋಳ ನೀರಿನಲ್ಲಿ ನೆನೆದು ಅಪಾರ ಪ್ರಮಾಣದ ಹಾನಿಯಾಗಿದೆ. ರೈತರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎರಡು ವಾರದಿಂದ ಗೋವಿನ ಜೋಳದ ಬೆಳೆಗಾರರು ಉತ್ಪನ್ನವನ್ನು ಪ್ರಾಂಗಣಕ್ಕೆ ತಂದು ಬಿಸಿಲಿನಲ್ಲಿ ಒಣಗಿಸಿ, ಶುಚಿಗೊಳಿಸಿ, ಮಾರಾಟಕ್ಕೆಂದು ಮೂಟೆಗಳಲ್ಲಿ ತುಂಬಿಟ್ಟಿದ್ದರು. ಮಾರಾಟಕ್ಕೆ ಸಿದ್ಧಪಡಿಸಿದ್ದ ಗೋವಿನ ಜೋಳವನ್ನು ಮಳೆಯಿಂದ ರಕ್ಷಿಸಲು ತಾಡಪತ್ರೆ ಮತ್ತಿತರ ಸಲಕರಣೆಗಳಿಂದ ಮುಚ್ಚಿದ್ದರು. ಆದರೆ, ಪ್ರತಿದಿನ ಸಂಜೆ ಮಳೆಯಾಗುತ್ತಿರುವುದರಿಂದ ಎಪಿಎಂಸಿ ಪ್ರಾಂಗಣದಲ್ಲಿ ನೀರು ನಿಂತು ರೈತರ ಉತ್ಪನ್ನ ನೀರಿನಲ್ಲಿ ನೆನೆದಿದೆ. ಒಣ ಹಾಕಿದ್ದ ಜೋಳ ತೇಲಿ ಹೋಗಿದೆ.

ಜೋಳ ಬಿತ್ತನೆಯ ವೇಳೆ ಮಳೆಯಾಗಿತ್ತು. ರೈತರು ರಸಗೊಬ್ಬರ ಹಾಕಿ ಕಷ್ಟಪಟ್ಟು ಬೆಳೆ ಬೆಳೆದಿದ್ದರು. ಕಳೆದ ಎರಡು ತಿಂಗಳು ಮಳೆಯಿಂದ ಇಳುವರಿ ಕಡಿಮೆಯಾಗಿತ್ತು. ಕೈಗೆ ಸಿಕ್ಕಿದ ಬೆಳೆಯನ್ನು ಮಾರಾಟಕ್ಕೆ ತರುವ ಹೊತ್ತಿಗೆ ಮತ್ತೆ ಮಳೆ ಬಂದಿದೆ. ಈ ವಾರದ ಪ್ರತಿ ಕ್ವಿಂಟಲ್ ಗೋವಿನ ಜೋಳಕ್ಕೆ ₹ 2000ದಿಂದ ₹ 2200ವರೆಗೆ ಇದೆ. ನೀರಿನಲ್ಲಿ ತೋಯ್ದ ಪರಿಣಾಮ ದರ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಖರೀದಿದಾರರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

‘60 ಕ್ವಿಂಟಲ್ ಜೋಳ ತಂದಿದ್ದೆ. ಶುಕ್ರವಾರ, ಶನಿವಾರ ಸುರಿದ ಮಳೆಗೆ ಒಣಗಿಸಿದ್ದ ಜೋಳ ನೆನೆದಿದೆ. ಒಂದಿಷ್ಟು ತೇಲಿ ಹೋಗಿದೆ. ಹಣ ವೆಚ್ಚ ಮಾಡಿ ಬೆಳೆಸಿದ ಬೆಳೆ ಕೈಗೆ ಬರದಂತಾಗಿದೆ. ಸಾಕಷ್ಟು ಖರ್ಚು ಮಾಡಿದ್ದ ರೈತರಿಗೆ ಈಗ ಮತ್ತೆ ಕೈಗೆ ಬಂದ ಬೆಳೆಯೂ ಸಿಗದಂತಾಗಿದೆ’ ಎಂದು ಬೆಳೆಗಾರ ತುಕಾರಾಮ ಜಾವಳ್ಳಿ ಹೇಳಿದರು.

*
ಆರು ಎಕರೆ ಜಮೀನಿನಲ್ಲಿ ₹ 50 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆದಿದ್ದೆ. ಶ್ರಮಪಟ್ಟು ಬೆಳೆದ ಬೆಳೆ ಫಸಲು ಕೊಡುವಾಗ ಮಳೆರಾಯ ಮುನಿಸು ತೋರಿದ.
-ಉದಯ ಮುನವಳ್ಳಿ, ಬೆಳೆಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು