ಶನಿವಾರ, ಜುಲೈ 2, 2022
22 °C
ಅಕಾಲಿಕ ಮಳೆ: 145 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ

ತೆನೆ ಬಂದರೂ ಕೈಸೇರದ ಜೋಳ: ಬೆಳೆ ಕಸಿದ ನಿರಂತರ ಮಳೆ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ತಾಲ್ಲೂಕಿನಲ್ಲಿ 145 ಹೆಕ್ಟೇರಗೂ ಅಧಿಕ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ನಷ್ಟವಾಗಿದೆ.

ಬೇಸಿಗೆ ಅವಧಿಯಲ್ಲಿ ನೀರಾವರಿ ಸೌಲಭ್ಯವಿರುವ ಅಜ್ಜರಣಿ, ತಿಗಣಿ, ಭಾಶಿ, ಅಂಡಗಿ, ಬದನಗೋಡ ಮುಂತಾದ ಗ್ರಾಮಗಳ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಮೇ ಅಂತ್ಯದ ವೇಳೆಗೆ ಫಸಲು ಕಟಾವಿಗೆ ಬರುತ್ತವೆ.

ಕೆಲವು ರೈತರು ಜೋಳದ ಕಟಾವು ಮುಗಿಸಿ ಕಾಳುಗಳನ್ನು ಒಣಗಲು ಹರವಿದ್ದರು. ಬಹುತೇಕ ರೈತರ ಗದ್ದೆಗಳಲ್ಲಿ ಫಸಲು ಗಿಡದಲ್ಲೇ ಉಳಿದಿತ್ತು. ಈಗ ಅವು ಮಳೆ ನೀರಿನಲ್ಲಿ ನೆನೆದು ಹಾಳಾಗಿವೆ. ಕಾಳುಗಳು ಮೊಳಕೆ ಒಡೆದು ಉಪಯೋಗಕ್ಕೆ ಬರದಂತಾಗಿದೆ.

‘ಮುಂಗಾರು ಅವಧಿಯಲ್ಲಿ ಭತ್ತ ಬೆಳೆದ ಗದ್ದೆಯಲ್ಲಿ ಹಿಂಗಾರು ಅವಧಿಯಲ್ಲಿ ಜೋಳ ಬಿತ್ತನೆ ಮಾಡಿದ್ದೆವು. ಐದು ತಿಂಗಳ ಬಳಿಕ ಬೆಳೆಯೂ ಕಟಾವಿಗೆ ಬಂದಿತ್ತು. ಕೊನೆ ಕ್ಷಣದಲ್ಲಿ ಅಕಾಲಿಕ ಮಳೆಯಿಂದ ಅವೆಲ್ಲವೂ ಹಾಳಾಗಿವೆ’ ಎನ್ನುತ್ತಾರೆ ತಿಗಣಿ ಗ್ರಾಮದ ಪ್ರದೀಪ ಗೌಡರ್.

‘ಪ್ರತಿ ಎಕರೆ ಜೋಳ ಬೆಳೆಯಲು 15–20 ಸಾವಿರ ಖರ್ಚು ಮಾಡಿದ್ದೇವೆ. ಈ ಬಾರಿ ದರವೂ ಉತ್ತಮವಿದ್ದ ಕಾರಣ ನಿರೀಕ್ಷಿತ ಆದಾಯ ಗಳಿಕೆಯ ಖುಷಿಯಲಿದ್ದೆವು. ಈಗ ಸಾಲ ಮಾಡಿ ಬೆಳೆದದ್ದೂ ನೀರು ಪಾಲಾಗಿದೆ. ಸಾಲದ ಕಂತು ಭರಿಸುವುದೇ ಚಿಂತೆಯಾಗಿದೆ’ ಎಂದು ಅಜ್ಜರಣಿಯ ಪರಶುರಾಮ ಚೆನ್ನಯ್ಯ ಬೇಸರಿಸಿದರು.

‘ಹವಾಮಾನ ವೈಪರಿತ್ಯದ ಪರಿಣಾಮ ರೈತರಿಗೆ ನಷ್ಟವಾಗಿದೆ. ಪ್ರತಿ ಹೆಕ್ಟೇರ್ ಬೆಳೆ ನಷ್ಟಕ್ಕೆ ಹಿಂದಿನಂತೆ ಪರಿಹಾರ ನೀಡಿದರೆ ಸಾಲದು. ಸಾಲಸೋಲ ಮಾಡಿ ಕೃಷಿ ಮಾಡುವ ರೈತರು ಬೆಳೆನಷ್ಟದಿಂದ ಕಂಗೆಡುತ್ತಿದ್ದಾರೆ. ಹೀಗಾಗಿ ಬೆಳೆನಷ್ಟಕ್ಕೆ ಮಾರುಕಟ್ಟೆಯ ಈಗಿನ ದರ ಆಧರಿಸಿ ಪರಿಹಾರ ನೀಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ವೀರಭದ್ರ ಗೌಡರ್ ಒತ್ತಾಯಿಸಿದರು.

‘ಪ್ರಾಥಮಿಕ ಸಮೀಕ್ಷೆ ಪ್ರಕಾರ ತಾಲ್ಲೂಕಿನಲ್ಲಿ 145 ಹೆಕ್ಟೇರನಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ, 5 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಷ್ಟವಾಗಿದೆ. ಹಾನಿಯ ನಿಖರ ವಿವರ ಕಲೆಹಾಕಲಾಗುತ್ತಿದ್ದು ಈ ಪ್ರಮಾಣ ಇನ್ನಷ್ಟು ಹೆಚ್ಚಲೂಬಹುದು’ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಟಿ.ಎಚ್.ನಟರಾಜ್ ಪ್ರತಿಕ್ರಿಯಿಸಿದರು.

ಶುಂಠಿ ಬೆಳೆಗಾರರಿಗೂ ನಷ್ಟ:

ಬನವಾಸಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತದೆ. ಈ ಬಾರಿ ಅಕಾಲಿಕ ಮಳೆಯಿಂದ ಮಾರುಕಟ್ಟೆ ಕಂಡುಕೊಳ್ಳಲು ಪರದಾಡುವಂತಾಗಿದೆ. ನೂರಾರು ರೈತರು ಇನ್ನೂ ಬೆಳೆಯನ್ನು ಕಿತ್ತಿಲ್ಲ. ಮಳೆಯ ಕಣ್ಣಾಮುಚ್ಚಾಲೆಯ ಪರಿಣಾಮ ಶುಂಠಿ ಖರೀದಿಗೆ ವ್ಯಾಪಾರಸ್ಥರು ಹಿಂದೇಟು ಹಾಕಿದ್ದರು. ಹೀಗಾಗಿ ಬೆಳೆ ಇದ್ದರೂ ಅದಕ್ಕೆ ಮಾರುಕಟ್ಟೆ ಕಂಡುಕೊಳ್ಳಲು ರೈತರಿಗೆ ಸಾಧ್ಯವಾಗಿಲ್ಲ. ಮಳೆಯೂ ಎಡೆಬಿಡದೆ ಸುರಿಯುತ್ತಿರುವ ಪರಿಣಾಮ ರೈತರು ಚಿಂತೆಗೀಡಾಗಿದ್ದಾರೆ.

***

ಬೆಳೆನಷ್ಟದ ವಿವರ ಪಡೆದುಕೊಳ್ಳಲಾಗುತ್ತಿದ್ದು ಪೋರ್ಟಲ್ ಮೂಲಕ ಪರಿಹಾರಕ್ಕೆ ರೈತರ ಮಾಹಿತಿಯನ್ನು ಕಳುಹಿಸಲಾಗುತ್ತಿದೆ.

ಟಿ.ಎಚ್.ನಟರಾಜ್, ಕೃಷಿ ಇಲಾಖೆ ಉಪನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು