ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಪುನಶ್ಚೇತನಕ್ಕೆ ಒತ್ತು ನೀಡಲಿ: ದೀಪಕ ದೊಡ್ಡೂರು

ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವಗಾಂಧಿ ಸ್ಮರಣೆ
Last Updated 21 ಮೇ 2020, 13:46 IST
ಅಕ್ಷರ ಗಾತ್ರ

ಶಿರಸಿ: ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ಪ್ರಾದೇಶಿಕ ಪುನಶ್ಚೇತನಕ್ಕೆ ಒತ್ತು ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೀಪಕ ದೊಡ್ಡೂರು ಒತ್ತಾಯಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನ ಮಂತ್ರಿ ಘೋಷಿಸಿರುವ ₹ 20ಲಕ್ಷ ಕೋಟಿ ಪ್ಯಾಕೇಜ್ ಕೈಗೆಟುಕದ ನಕ್ಷತ್ರದಂತೆ ಕಾಣುತ್ತದೆ. ಈ ಪ್ಯಾಕೇಜ್‌ ಅನ್ನು ಶೀಘ್ರ ಅನುಷ್ಠಾನಗೊಳಿಸಿದಲ್ಲಿ ಮಾತ್ರ ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಬರುತ್ತದೆ. ಅನೇಕ ಕ್ಷೇತ್ರಗಳು ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿವೆ’ ಎಂದರು.

ಸರ್ಕಾರದ ಶೂನ್ಯ ಬಡ್ಡಿದರದ ಸಾಲ ಯೋಜನೆಯಡಿ ಬೆಳೆಸಾಲ ಪಡೆದವರಿಗೆ ಅಂತಿಮ ಗಡುವನ್ನು ಮೇ 31ಕ್ಕೆ ನಿಗದಿಪಡಿಸಲಾಗಿದೆ. ಉಳಿದೆಲ್ಲ ಸಾಲ ಭರಣಕ್ಕೆ ಜೂನ್ ಅಂತ್ಯದವರೆಗೆ ಅವಕಾಶ ನೀಡಿರುವಾಗ, ಬೆಳೆಸಾಲಕ್ಕೂ ಈ ಅವಧಿ ವಿಸ್ತರಿಸಬೇಕು. ಬೆಳೆಸಾಲ ಮನ್ನಾದ ₹ 57 ಕೋಟಿ ಮೊತ್ತ ಜಿಲ್ಲೆಗೆ ಬರುವುದು ಬಾಕಿ ಇದೆ ಎಂದು ಆರೋಪಿಸಿದರು.

ಸರ್ಕಾರದಿಂದ ಆದೇಶ ಬಂದಿದ್ದರೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆಯನ್ನು ಪರಿಷ್ಕೃತ ದರದಲ್ಲೇ ಆಕರಣೆ ಮಾಡಲಾಗುತ್ತಿದೆ. ಜನರು ಕಷ್ಟದಲ್ಲಿರುವ ಸಂದರ್ಭದಲ್ಲಿ ಈ ಕ್ರಮ ಮುಂದುವರಿದರೆ, ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಗುವುದು. ಕಾರ್ಮಿಕ ಇಲಾಖೆ ಯೋಜನೆಯಡಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಿಟ್ ವಿತರಿಸಲಾಗುತ್ತಿದೆ. ಆದರೆ ಆ ಕಿಟ್‌ಗಳ ಮೇಲೆ ಆಯಾ ಕ್ಷೇತ್ರದ ಶಾಸಕರ ಭಾವಚಿತ್ರ ಬಳಸಲಾಗಿದೆ. ಇದು ಜನರು ನೀಡಿರುವ ತೆರಿಗೆಯ ಹಣದಿಂದ ವಿತರಿಸಿದ ಕಿಟ್ ಆಗಿದೆ. ಇದಕ್ಕೆ ಶಾಸಕರ ಭಾವಚಿತ್ರ ಹಾಕಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಪ್ರಮುಖರಾದ ಜಿ.ಎನ್.ಹೆಗಡೆ, ಬಸವರಾಜ ದೊಡ್ಮನಿ, ಜಗದೀಶ ಗೌಡ, ಪ್ರದೀಪ ಶೆಟ್ಟಿ, ಶ್ರೀಕಾಂತ ತಾರೀಬಾಗಿಲು, ರವೀಂದ್ರ ನಾಯ್ಕ, ರಮೇಶ ದುಬಾಶಿ, ಸೂರ್ಯಪ್ರಕಾಶ ಹೊನ್ನಾವರ, ಪ್ರಸನ್ನ ಶೆಟ್ಟಿ, ಸುಮಾ ಉಗ್ರಾಣಕರ, ಶೈಲೇಶ್ ಗಾಂಧಿ, ಸತೀಶ ನಾಯ್ಕ, ಜಬಿಉಲ್ಲಾ ಖಾನ್, ಶ್ರೀನಿವಾಸ ನಾಯ್ಕ ಇದ್ದರು.

ಯುವ ಕಾಂಗ್ರೆಸ್‌ನಿಂದ ಧನ ಸಹಾಯ
ಮಾಜಿ ಪ್ರಧಾನಿ ರಾಜೀವಗಾಂಧಿ ಪುಣ್ಯತಿಥಿ ಅಂಗವಾಗಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ 29 ಕೂಲಿ ಕಾರ್ಮಿಕರಿಗೆ ₹ 200ರಂತೆ ಧನ ಸಹಾಯ ನೀಡಲಾಯಿತು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು ರಾಜೀವಗಾಂಧಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ನಂತರ ಧನ ಸಹಾಯ ವಿತರಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಶೆಟ್ಟಿ ಮಾತನಾಡಿ, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ‘ನ್ಯಾಯ’ ಯೋಜನೆ ರೂಪಿಸಿತ್ತು. ಬಡವರಿಗೆ ತಿಂಗಳಿಗೆ ₹ 6000 ಅಂದರೆ ದಿನಕ್ಕೆ ₹ 200 ನೀಡುವ ಯೋಜನೆ ಇದಾಗಿತ್ತು. ಇದೇ ಮಾದರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷರ ಆದೇಶದಂತೆ ಒಂದು ದಿನದ ನ್ಯಾಯ ಯೋಜನೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT