ಶನಿವಾರ, ಜುಲೈ 31, 2021
27 °C
ಸೋಂಕುಮುಕ್ತರಾದ 73 ವರ್ಷದ ಹಿರಿಯರ ಅನುಭವದ ಮಾತುಗಳು

ಮುಂಡಗೋಡ: ‘ಕೋವಿಡ್‌ ಗುಣವಾಗುತ್ತದೆ, ನಾನೇ ಸಾಕ್ಷಿ’

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

prajavani

ಮುಂಡಗೋಡ: ‘ಪಾಸಿಟಿವ್ ಅಂತ ಬಂದಾಗ ಮೊದಲಿಗೆ ಆತಂಕ ಆಗಿತ್ತು. ವಯಸ್ಸು ಆಗಿದೆ ಮುಂದೇನು ಎಂದು ಹೆದರಿದ್ದಾಗ, ಕುಟುಂಬಸ್ಥರು, ವೈದ್ಯರು ಧೈರ್ಯ ತುಂಬಿದರು. ದೇವರ ಮೇಲೆ ಭಾರ ಹಾಕಿ ಆಂಬುಲೆನ್ಸ್ ಹತ್ತಿದೆ. ಎಂಟು ದಿನಗಳಲ್ಲಿ ಗುಣಮುಖನಾಗಿ ಮನೆಗೆ ಬಂದಿದ್ದೇನೆ..'

ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವ ಪಟ್ಟಣದ ಇಂದಿರಾನಗರದ 73 ವರ್ಷದ ಪುಟ್ಟಪ್ಪ ಕುಸನೂರು ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡರು.

‘ಹೃದಯ ಸಂಬಂಧಿ ಕಾಯಿಲೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ಕಾಲು ನೋವು ಸಹ ಇತ್ತು. ಅಲ್ಲಿನ ವೈದ್ಯರ ಸೂಚನೆಯಂತೆ ‘ಕಿಮ್ಸ್’ನಲ್ಲಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕೊಡಲಾಗಿತ್ತು. ಸೋಂಕಿನ ಯಾವುದೇ ಗುಣಲಕ್ಷಣಗಳು ಇರಲಿಲ್ಲ. ಅಲ್ಪ ಪ್ರಮಾಣದಲ್ಲಿ ಕಫ ಇತ್ತು. ಉಳಿದಂತೆ ದೇಹದಲ್ಲಿ ಹೆಚ್ಚೇನೂ ವ್ಯತ್ಯಾಸ ಆಗುತ್ತಿರಲಿಲ್ಲ’ ಎಂದು ವಿವರಿಸಿದರು.

‘ಕಾರವಾರದ ‘ಕ್ರಿಮ್ಸ್’ನಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಬಂದ ನಂತರ ಮನೆಯಲ್ಲಿ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡುತ್ತಿರುವೆ. ಕೊರೊನಾ ಮೊದಲಿಗೆ ಹೆದರಿಸುತ್ತದೆ. ಆದರೆ, ಅದರಿಂದ ಗುಣಮುಖರಾಗಬಹುದು. ಅದಕ್ಕೆ ನಾನೇ ಸಾಕ್ಷಿ’ ಎಂದು ಹೇಳಿದರು.

‘ಹುಬ್ಬಳ್ಳಿ ಆಸ್ಪತ್ರೆಗೆ ಹೋಗಿ ಬಂದ ಎರಡು ದಿನಗಳ ಬಳಿಕ ಅಂದರೆ, ಜುಲೈ 2ರಂದು ಕೋವಿಡ್ ಪಾಸಿಟಿವ್ ಇರುವ ಕುರಿತು ವೈದ್ಯರಿಂದ ಕರೆ ಬಂದಿತ್ತು. ತಂದೆಯ ವಯಸ್ಸು ನಮ್ಮ ಕುಟುಂಬದವರ ಆತಂಕ ಹೆಚ್ಚಲು ಕಾರಣವಾಗಿತ್ತು. ಗಂಟಲು ದ್ರವದ ವರದಿ ಬರುವರೆಗೂ ತಂದೆಯು ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಯೇ ಇರುತ್ತಿದ್ದರು. ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರ ಹೆಚ್ಚು ಕ್ರಿಯಾಶೀಲರಾಗಿದ್ದು, ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡುತ್ತಿದ್ದಾರೆ’ ಎಂದು ಅವರ ಪುತ್ರ ಮಲ್ಲಿಕಾರ್ಜುನ ಹೇಳಿದರು.

ಇತರರಿಗೆ ಧೈರ್ಯದ ಮಾತು: ‘ಕೋವಿಡ್ ಸೋಂಕು ಖಚಿತಗೊಂಡ ದಿನಗಳಲ್ಲಿ ಓಣಿಯಲ್ಲಿ ಎಲ್ಲರೂ ಹೆದರಿದ್ದರು. ಮನೆಯಿಂದ ಹೊರಬರಲೂ ಹಿಂಜರಿದಿದ್ದರು. ಗುಣಮುಖನಾಗಿ ಬಂದ ನಂತರ, ಜನರೂ ಅಚ್ಚರಿ ಹಾಗೂ ಸಂತಸದಿಂದ ದೂರದಲ್ಲಿ ನಿಂತು ತಂದೆಯ ಆರೋಗ್ಯ ವಿಚಾರಿಸುತ್ತಿದ್ದಾರೆ. ಅಂಥವರಿಗೆ, ನಾನೇ ಗೆದ್ದು ಬಂದಿರುವೆ, ಕೊರೊನಾ ದೊಡ್ಡ ರೋಗವಲ್ಲ. ಹೆದರಬಾರದು ಎಂದು ಧೈರ್ಯದ ಮಾತುಗಳನ್ನು ಹೇಳುತ್ತಿರುತ್ತಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು