ಭಾನುವಾರ, ಆಗಸ್ಟ್ 25, 2019
21 °C
ಪ್ರವಾಹಪೀಡಿತ ಪ್ರದೇಶದ ಜನರು ಬದುಕು ದುಸ್ತರ

ಮೂರು ದಶಕದ ಕನಸು 3 ದಿನದಲ್ಲಿ ನುಚ್ಚುನೂರು

Published:
Updated:
Prajavani

ಶಿರಸಿ: ಗಂಗಾವಳಿಯ ಆರ್ಭಟಕ್ಕೆ ಶಿರಸಿ ಹಾಗೂ ಅಂಕೋಲಾ ತಾಲ್ಲೂಕುಗಳ ಗಡಿಯಲ್ಲಿರುವ ಹೆಗ್ಗಾರ, ವೈದ್ಯ ಹೆಗ್ಗಾರ, ಕಲ್ಲೇಶ್ವರ, ಕೋನಾಳ ಗ್ರಾಮಗಳು ತತ್ತರಿಸಿವೆ. ನಾಗರಿಕ ಸಂಪರ್ಕ ಕಳೆದುಕೊಂಡಿದ್ದ ಗ್ರಾಮಗಳಲ್ಲಿ ನದಿಯ ನೆರೆ ಇಳಿಯುತ್ತಿದ್ದಂತೆ, ಕೆಲವು ಮನೆಗಳು ಪುರಾತನ ಪಳೆಯುಳಿಕೆಯಂತೆ ಕಾಣುತ್ತಿವೆ.

ಮನೆ, ತೋಟ, ಗದ್ದೆಗಳನ್ನು ಆವರಿಸಿದ್ದ ನದಿ ಮತ್ತೆ ತನ್ನ ಗಡಿಯೊಳಗೆ ಸೇರಿಕೊಂಡಿದೆ. ಆದರೆ, ನದಿಗೆ ಬಂದಿದ್ದ ಪ್ರವಾಹ ಅಲ್ಲಿನ ಜನರ ಬದುಕನ್ನು ಕಸಿದಿದೆ. ‘ಕೊಡಸಳ್ಳಿ ಅಣೆಕಟ್ಟು ನಿರ್ಮಾಣದ ವೇಳೆ ನಿರಾಶ್ರಿತರಾಗಿ 30 ವರ್ಷಗಳ ಇಲ್ಲಿಗೆ ಬಂದು ಉಳಿದಿದ್ದೆವು. ಮೂರು ದಶಕಗಳು ಕೂಡಿ ಕಟ್ಟಿದ್ದ ಕನಸಿನ ಸೌಧ ಮೂರು ದಿನಗಳಲ್ಲಿ ನೀರು ಪಾಲಾಗಿದೆ’ ಎನ್ನುತ್ತಾರೆ ಹೆಗ್ಗಾರಿನ ಪ್ರಶಾಂತ.

‘ನಾಗರ ಪಂಚಮಿಯ ದಿನ ಬೆಳಗಿನ ಜಾವ 5.30ರ ಸುಮಾರಿ ಮನೆ ಸಮೀಪದ ರಸ್ತೆಯಲ್ಲಿ ಎರಡು ಅಡಿ ನೀರು ಹರಿದಿತ್ತು. ಆಗ, ಕುಟುಂಬದವರೆಲ್ಲ ಎತ್ತರದ ಪ್ರದೇಶಕ್ಕೆ ಹೋಗಿ ಬಚಾವಾಗಿದ್ದೆವು. ಮತ್ತೆ ಗುರುವಾರ ನಡುರಾತ್ರಿ ಗಂಗಾವಳಿ ಅಬ್ಬರಿಸಿತು. ತಕ್ಷಣ ಮನೆಯ ಸಾಮಗ್ರಿಗಳನ್ನೆಲ್ಲ ಕಟ್ಟಿ, ಎತ್ತರದಲ್ಲಿಟ್ಟು ಬೀಗ ಹಾಕಿ ಮೇಲಿನ ಪ್ರದೇಶ ಮನೆಯೊಳಗೆ ಸೇರಿದ್ದೆವು. ನೆರೆ ಇಳಿದ ಮೇಲೆ ಬಂದು ನೋಡಿದರೆ ಏನೂ ಉಳಿದಿಲ್ಲ’ ಎನ್ನುತ್ತಾರೆ ಯೋಗೇಶ ಭಟ್ಟ.

’ಬೀಗ ಹಾಕಿಟ್ಟಿದ್ದ ಬಾಗಿಲನ್ನು ಒಡೆದ ನದಿ ನೀರು, ಒಳಗಿದ್ದ ಟಿವಿ, ಫ್ರಿಜ್, ಸೋಫಾ, ಕುರ್ಚಿ, ಪಾತ್ರೆಗಳನ್ನೆಲ್ಲ ದಾರಿಗೆ ತಂದು ಚೆಲ್ಲಿ ಹೋಗಿದೆ. ಹಗ್ಗ ಕಟ್ಟಿ ನಿಲ್ಲಿಸಿ ಬಂದಿದ್ದ ಕಾರಿನೊಳಗೆ ಮರಳು ಮಿಶ್ರಿತ ಮಣ್ಣು ಸೇರಿದೆ. ಮನೆಯ ಅವಶೇಷಗಳು ಮಾತ್ರ ಉಳಿದಿವೆ. ಆ ಜಾಗಕ್ಕೆ ಹೋಗಬೇಕೆನ್ನಿಸುವುದೇ ಇಲ್ಲ’ ಎಂದು ಅವರು ವಿವರಿಸಿದರು.

ಯುವಕರ ಉತ್ಸಾಹ: ಕಲ್ಲೇಶ್ವರ, ಹೆಗ್ಗಾರಿನ ಜನರು ಕಷ್ಟದಲ್ಲಿರುವ ವಿಷಯ ತಿಳಿದ ಇಲ್ಲಿನ ಒಂಬತ್ತು ಯುವಕರ ತಂಡ ಶನಿವಾರ ಹರಸಾಹಸ ನಡೆಸಿ, ಅಲ್ಲಿಗೆ ತಲುಪಿ, ಒಂದಿಷ್ಟು ಔಷಧ, ಆಹಾರ ಸಾಮಗ್ರಿಗಳನ್ನು ತಲುಪಿಸಿ ಬಂದಿದೆ. ‘ಶಿರಸಿಯಿಂದ ವಾನಳ್ಳಿ, ಮುಸ್ಕಿ ಮಾರ್ಗವಾಗಿ ಕನಕನಹಳ್ಳಿ ತಲುಪಿದ್ದೇ ನಿಟ್ಟುಸಿರು ಬಿಟ್ಟೆವು. ಬಳಕೆಯಿಲ್ಲದ ದಾರಿಯದು. ಮೂರು ವರ್ಷಗಳಿಂದ ಈ ದಾರಿಯಲ್ಲಿ ಯಾರೂ ಓಡಾಡಿಲ್ಲವಂತೆ. ನಾವಯ ಒಂಬತ್ತು ಜನರು ಬೈಕ್ ಹಿಡಿದು ಹೊರಟಿದ್ದರೆ, ದಾರಿಯಲ್ಲಿ ಮುರಿದು ಬಿದ್ದಿರುವ ಮರಗಳು. ಅವನ್ನು ಕಡಿದು, ದುರ್ಗಮ ದಾರಿಯಲ್ಲಿ ಸಾಗಿ, ಅಂತೂ ಕಲ್ಲೇಶ್ವರದ ವರೆಗೆ ಹೋದೆವು. ಕೊಂಡೊಯ್ದಿದ್ದ ಔಷಧಗಳನ್ನು ಆಯಾ ಪ್ರದೇಶದ ಅಗತ್ಯಕ್ಕೆ ತಕ್ಕಷ್ಟು ವಿತರಿಸಿದೆವು’ ಎನ್ನುತ್ತಾರೆ ತಂಡದಲ್ಲಿದ್ದ ಗುರುಪ್ರಸಾದ ಶಾಸ್ತ್ರಿ.

‘ಕಲ್ಲೇಶ್ವರದಲ್ಲಿ ಒಂದು ಮನೆಗೆ ತೀವ್ರವಾಗಿ ಹಾನಿಯಾಗಿದ್ದನ್ನು ಕಂಡು ಬೆಚ್ಚಿದ್ದ ನಾವು, ಹೆಗ್ಗಾರಿನಲ್ಲಿ 11 ಮನೆಗಳು ನೆಲಸಮವಾಗಿದ್ದನ್ನು ನೋಡಿ ದಂಗಾದೆವು. ಊರಿನಲ್ಲಿ ಹಿರಿಯರೇ ಹೆಚ್ಚಿದ್ದಾರೆ. ನಡುವಯಸ್ಸಿನವರು ಕೆಲವರಿದ್ದಾರೆ. ಯುವ ಜನರು ತುಸು ಕಮ್ಮಿಯೇ. ವೈದ್ಯ ಹೆಗ್ಗಾರಿನಲ್ಲಿ ಒಂದಷ್ಟು ಮಹಿಳೆಯರು ವಸತಿ ಕೇಂದ್ರದಲ್ಲಿ ಉಳಿದಿದ್ದಾರೆ. ಅವರಿಗೆ ಬಟ್ಟೆಯ ಕೊರತೆ ಕಾಡುತ್ತಿದೆ. ಸ್ವರ್ಣವಲ್ಲಿ ಮಠ, ರಾಮಚಂದ್ರಾಪುರ ಮಠ, ಮುಂಡಗನಮನೆ ಸೊಸೈಟಿಯವರು, ಹೊರ ಊರಿನಲ್ಲಿ ಉದ್ಯೋಗದಲ್ಲಿರುವ ಸ್ಥಳೀಯರು ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ ಜೊತೆ ಅನುಭವ ಹಂಚಿಕೊಂಡರು. ಭೈರುಂಬೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಸಂತ ಹೆಗಡೆ, ಗುರುಪಾದ, ಸಚಿನ್ ವಾನಳ್ಳಿ, ಸುರೇಶ ಮುಸ್ಕಿ, ಗಣಪತಿ ಹಳ್ಳಿಗದ್ದೆ, ವೆಂಕಟರಮಣ ಮುಸ್ಕಿ, ನಾಗರಾಜ ಮಣ್ಕಣಿ ತಂಡದಲ್ಲಿದ್ದರು.

Post Comments (+)