ಸೋಮವಾರ, ಫೆಬ್ರವರಿ 17, 2020
30 °C
ಸೌಲಭ್ಯ ವಂಚಿತ ಮಕ್ಕಳು, ಬಾಡಿಗೆ ಕಟ್ಟಡದಲ್ಲಿ ಶಾಲೆಗಳು

ಶಿರಸಿ: ವಸತಿ ಶಾಲೆಗಳೆಡೆಗೆ ನಿರ್ಲಕ್ಷ್ಯ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿರುವ ಜಿಲ್ಲೆಯ ವಸತಿ ಶಾಲೆಗಳು ಮೂಲ ಸೌಕರ್ಯದಿಂದ ವಂಚಿತವಾಗಿವೆ. ಬಹುತೇಕ ಶಾಲೆಗಳು ಸ್ವಂತ ಕಟ್ಟಡವಿಲ್ಲದೇ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಪ್ರಾರಂಭವಾಗಿರುವ ಶಾಲೆಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಇವೆ. ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಇಂದಿರಾ ಗಾಂಧಿ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಹೀಗೆ ನಾನಾ ಹೆಸರುಗಳಲ್ಲಿ ಒಟ್ಟು 23 ವಸತಿ ಶಾಲೆಗಳಿವೆ. ಅವುಗಳಲ್ಲಿ ನಾಲ್ಕೈದು ಹೊರತುಪಡಿಸಿ, ಇನ್ನುಳಿದವು ಬಾಡಿಗೆ ಕಟ್ಟಡದಲ್ಲಿವೆ.

‘ಬಾಡಿಗೆ ಕಟ್ಟಡದಲ್ಲಿರುವ ಶಾಲೆಗಳಿಗೆ ವಾರ್ಷಿಕ ₹5ರಿಂದ ₹7 ಲಕ್ಷದವರೆಗೆ ಬಾಡಿಗೆ ನೀಡಬೇಕಾಗುತ್ತದೆ. ಹಲವಾರು ವರ್ಷಗಳಿಂದ ಈ ಶಾಲೆಗಳು ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿವೆ. ಇಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದರೂ ಅನಿವಾರ್ಯವಾಗಿ ಇಲ್ಲಿಯೇ ಶಾಲೆ ನಡೆಸಬೇಕಾಗಿದೆ. ಹೆಚ್ಚುವರಿ ಕೊಠಡಿ ನೀಡಿದರೆ, ಬಾಡಿಗೆಯ ದರವೂ ಹೆಚ್ಚಾಗುತ್ತದೆ. ಹೀಗಾಗಿ ಇರುವ ವ್ಯವಸ್ಥೆಯಲ್ಲೇ ಮಕ್ಕಳು ಕಲಿಯುತ್ತಿದ್ದಾರೆ’ ಎನ್ನುತ್ತಾರೆ ಅಧಿಕಾರಿಗಳು.

‘ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲೆಂದು ವಸತಿ ಶಾಲೆಗೆ ಹಾಕಿದ್ದೇವೆ. ಆದರೆ ಮಕ್ಕಳಿಗೆ ಇನ್ನೂ ಸಮವಸ್ತ್ರ ದೊರೆತಿಲ್ಲ. ದೈನಂದಿನ ಆಹಾರಕ್ಕೆ ಅಗತ್ಯವಿರುಷ್ಟು ಧವಸ–ಧಾನ್ಯ ಕೂಡ ಪೂರೈಕೆಯಾಗುವುದಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಪಾಲಕರೊಬ್ಬರು ದೂರಿದರು.

ಶಿರಸಿ ತಾಲ್ಲೂಕಿನ ಇಸಳೂರು ಡೊಂಬೆಸರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಿದೆ. ಇಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್, ಬೆಂಚ್ ಸಹ ಇಲ್ಲ. ‘ಮಕ್ಕಳ ಶೌಚಾಲಯ ಸರಿಯಾಗಿಲ್ಲ. ವಸತಿ ಕೊಠಡಿಗಳು ಸಹ ದುರ್ಬಲವಾಗಿವೆ. ಶಿಕ್ಷಣಕ್ಕಾಗಿ ಮಕ್ಕಳನ್ನು ದೂರ ಕಳುಹಿಸಿರುವ ನಮಗೆ ಚಿಂತೆ ಕಾಡುತ್ತಿದೆ’ ಎಂದು ಈ ಶಾಲೆಯ ಪಾಲಕರೊಬ್ಬರು ಅಳಲು ತೋಡಿಕೊಂಡರು.

ಸ್ಥಳೀಯವಾಗಿ ಅಧಿಕಾರಿ ಇಲ್ಲ: ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ವಿಶೇಷ ಅಧಿಕಾರ, ಅನುದಾನ ನೀಡದಿದ್ದರೂ, ಉಸ್ತುವಾರಿಯನ್ನು ಮಾತ್ರ ಈ ಇಲಾಖೆಗೆ ನೀಡಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್. ಪುರುಷೋತ್ತಮ ಅವರನ್ನು ಸಂಪರ್ಕಸಿದಾಗ, ‘ವಸತಿ ಶಾಲೆಯ ಎಲ್ಲ ಕುಂದುಕೊರತೆಗಳನ್ನು ನೇರವಾಗಿ ಕೇಂದ್ರ ಕಚೇರಿಗೆ ತಿಳಿಸಬೇಕಾಗುತ್ತದೆ. ಶಾಲೆಯ ಅಭಿವೃದ್ಧಿ, ಅಲ್ಲಿನ ಬೇಡಿಕೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಬೆಂಗಳೂರಿನಿಂದಲೇ ನಡೆಯುತ್ತವೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು