ಇಂದಿರಾ ನಗರದ ಈ ರಸ್ತೆಗೆ ಕಿಡಿಗೇಡಿಗಳೇ ಶಾಪ‍ !

ಸೋಮವಾರ, ಏಪ್ರಿಲ್ 22, 2019
33 °C
ಇಕ್ಕೆಲಗಳಲ್ಲಿ ಒಡೆದ ಬಾಟಲಿಗಳು, ಹರಕು ಬಟ್ಟೆ, ಹರಿದ ಚೀಲ, ಕೊಳೆತ ಆಹಾರ ಪದಾರ್ಥಗಳ ರಾಶಿ

ಇಂದಿರಾ ನಗರದ ಈ ರಸ್ತೆಗೆ ಕಿಡಿಗೇಡಿಗಳೇ ಶಾಪ‍ !

Published:
Updated:
Prajavani

ಶಿರಸಿ: ಇತ್ತೀಚೆಗಷ್ಟೇ ಮರುಡಾಂಬರೀಕರಣದಿಂದಾಗಿ ಹೊಸ ಅಂಗಿ ತೊಟ್ಟಿರುವ ಈ ರಸ್ತೆಗೆ ಕಿಡಿಗೇಡಿಗಳು ಶಾಪವಾಗಿದ್ದಾರೆ. ವಿರಳ ಜನಸಂಚಾರ ಇರುವ ರಸ್ತೆಯು ತಾಜ್ಯ ಎಸೆಯುವ ಕೇಂದ್ರವಾಗಿ ಮಾರ್ಪಟ್ಟಿದೆ.

ಇಲ್ಲಿನ ಇಂದಿರಾ ನಗರದ ಕೊನೆಯ ರಸ್ತೆಯು ಎಪಿಎಂಸಿ ಗೇಟ್, ಹುಬ್ಬಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯ ಒಂದು ಪಕ್ಕದಲ್ಲಿ ಎಪಿಎಂಸಿ ಆವರಣದ ಕಚೇರಿಗಳಿದ್ದು, ಇವುಗಳ ಹಿಂಭಾಗಕ್ಕೆ ಭದ್ರವಾದ ಆವರಣಗೋಡೆಯೂ ಇದೆ. ಇನ್ನೊಂದು ಭಾಗದಲ್ಲಿ ಖಾಲಿ ನಿವೇಶನವಿದೆ. ಹೀಗೆ ರಸ್ತೆಯ ಎರಡೂ ಕಡೆ ಜನವಸತಿ ಇಲ್ಲದ ಕಾರಣ ದುರ್ವ್ಯಸನಿಗಳು, ಅಕ್ರಮ ಚಟುವಟಿಕೆ ನಡೆಸುವವರು ಸಂಜೆಯ ವೇಳೆ ಈ ರಸ್ತೆಯಲ್ಲಿ ಕಾಣಸಿಗುತ್ತಾರೆ.

ಅಂದಾಜು 150 ಮೀಟರ್ ಉದ್ದದ ರಸ್ತೆಯಲ್ಲಿ ನಾಲ್ಕು ಕಂಬಗಳಿಗೆ ಬೀದಿದೀಪ ಅಳವಡಿಸಲಾಗಿದೆ. ಆದರೆ, ಇಲ್ಲಿ ಹೊಸ ದೀಪ ಹಾಕಿದ ಎರಡು ದಿನಗಳಲ್ಲಿ ಅದು ಒಡೆದಿರುತ್ತದೆ ! ‘ದೀಪವಿದ್ದರೆ ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳುತ್ತದೆ ಎಂದು ಕಿಡಿಗೇಡಿಗಳು ಅದನ್ನು ಒಡೆದುಹಾಕುತ್ತಾರೆ. ಈ ರಸ್ತೆಯಲ್ಲಿ ಓಡಾಡುವಾಗ ಕಣ್ಣು, ಮೂಗು ಕಟ್ಟಿಕೊಂಡೇ ಹೋಗಬೇಕಾದ ಪರಿಸ್ಥಿತಿಯಿದೆ. ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗುವ ಮಾರ್ಗದ ನೆನಪಾಗುತ್ತದೆ. ಅಷ್ಟು ದುರ್ವಾಸನೆ ಹಾಗೂ ತ್ಯಾಜ್ಯಗಳು ರಸ್ತೆ ಬದಿಯಲ್ಲಿ ಬಿದ್ದಿರುತ್ತವೆ’ ಎನ್ನುತ್ತಾರೆ ಸ್ಥಳೀಯರು.

‘ನಗರಸಭೆ ಸ್ವಚ್ಛಗೊಳಿಸಿದರೆ, ಎರಡು ದಿನಗಳಲ್ಲಿ ಮತ್ತದೇ ಸ್ಥಿತಿಗೆ ಬರುತ್ತದೆ. ಒಡೆದ ಮದ್ಯದ ಬಾಟಲಿಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹರಕು ಬಟ್ಟೆ, ಹರಿದ ಚೀಲ, ಕೊಳೆತುನಾರುವ ತಿನಿಸುಗಳನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿ ತಂದು ರಾತ್ರಿ ವೇಳೆ ಎಸೆದು ಹೋಗುತ್ತಾರೆ. ಇಂಥವರನ್ನು ನಗರಸಭೆ ಹಿಡಿದು, ದಂಡ ಹಾಕಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ನಗರಸಭೆಯ ತ್ಯಾಜ್ಯ ಸಂಗ್ರಹ ವಾಹನವು ಪ್ರತಿ ಮನೆ, ಕಚೇರಿಗೆ ಭೇಟಿ ನೀಡಿ ಕಸ ಸಂಗ್ರಹಿಸುತ್ತದೆ. ಹೀಗಿದ್ದಾಗ ಈ ರೀತಿ ರಸ್ತೆ ಬದಿಯಲ್ಲಿ ಕಸ ಹಾಕಿ ಯಾಕೆ ಅನಾಗರಿಕ ವರ್ತನೆ ತೋರುತ್ತಾರೆ ಎಂದು ಅರ್ಥವಾಗುವುದಿಲ್ಲ. ಈ ರೀತಿ ಕಸ ಎಸೆದರೆ, ನಗರಸಭೆಗೆ ಹೊರೆಯಾಗುತ್ತದೆ. ಅದನ್ನು ಸಂಗ್ರಹಿಸಿ, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಬೇಕಾಗುತ್ತದೆ. ಸಾರ್ವಜನಿಕರು ವಾಹನಕ್ಕೆ ಕಸ ನೀಡಬೇಕು’ ಎಂದು ನಗರಸಭೆ ಆರೋಗ್ಯ ನಿರೀಕ್ಷಕ ಆರ್.ಎಂ.ವೆರ್ಣೇಕರ್ ಪ್ರತಿಕ್ರಿಯಿಸಿದರು.

* ಈ ರೀತಿ ತ್ಯಾಜ್ಯ ಎಸೆಯುವ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು. ಕಸ ಎಸೆಯುವವರಿಗೆ ದಂಡ ವಿಧಿಸಿ, ಕಾನೂನು ಕ್ರಮಕ್ಕೆ ಯೋಚಿಸಬೇಕಾಗುತ್ತದೆ

-ಆರ್.ಎಂ.ವೆರ್ಣೇಕರ್, ನಗರಸಭೆ ಆರೋಗ್ಯ ನಿರೀಕ್ಷಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !