ಭಾನುವಾರ, ನವೆಂಬರ್ 28, 2021
19 °C
ಆರು ತಿಂಗಳಿನಿಂದ ಸಂಚಾರ ಅಸ್ತವ್ಯಸ್ತ: ವಿದ್ಯಾರ್ಥಿಗಳಿಗೆ ಸಮಸ್ಯೆ

ಅರೆಬರೆಯಾದ ಆನಗೋಡಕೊಪ್ಪ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯ್ತಿಯ ಆನಗೋಡಕೊಪ್ಪ–ಬಿಸಲಕೊಪ್ಪ ಸಂಪರ್ಕಿಸುವ ರಸ್ತೆ ನಿರ್ಮಾಣ ನನೆಗುದಿಗೆ ಬಿದ್ದಿದೆ. ಅರೆಬರೆಯಾಗಿ ಉಳಿದ ರಸ್ತೆಯಲ್ಲಿ ಸೈಕಲ್ ತುಳಿಯಲಾಗದೆ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದಾರೆ.

ಕರ್ನಾಟಕ ನೀರಾವರಿ ನಿಗಮದ ₹55 ಲಕ್ಷ ಅನುದಾನದಲ್ಲಿ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಎರಡು ವರ್ಷದ ಹಿಂದೆಯೆ ರಸ್ತೆಗೆ ಭೂಮಿಪೂಜೆ ಮಾಡಲಾಗಿತ್ತು. ಕಳೆದ ಮಾರ್ಚ್ ಹೊತ್ತಿಗೆ ಕೆಲಸ ಆರಂಭಿಸಿದ್ದ ಗುತ್ತಿಗೆದಾರ ಕಚ್ಚಾರಸ್ತೆಗೆ ಜಲ್ಲಿ ಹಾಸಿದ್ದಾರೆ. ಆ ಬಳಿಕ ಕೆಲಸ ಮುಂದುವರೆಸಿಲ್ಲ.

ಐದು ಕಿ.ಮೀ ಉದ್ದದ ರಸ್ತೆಯ ಪೈಕಿ 875 ಮೀ.ನಷ್ಟು ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ಕೆಲಸ ನಡೆಯಬೇಕಿದೆ. ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮ ಮುಖ್ಯರಸ್ತೆಯಲ್ಲಿ ಸಂಚಾರ ಸವಾಲಾಗಿದೆ.

ಆನಗೊಡಕೊಪ್ಪ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಬಿಸಲಕೊಪ್ಪಕ್ಕೆ ತೆರಳಲು ಇದೇ ರಸ್ತೆ ಅವಲಂಬಿಸಿದ್ದಾರೆ. ಅಲ್ಲದೆ ಮುಡೇಬೈಲ್, ಬಾಳೆಕೊಪ್ಪ, ಉಲ್ಲಾಳ ಭಾಗದ ಜನರೂ ಈ ರಸ್ತೆ ಬಳಸುವುದು ಹೆಚ್ಚು.

‘ಮುಡೇಬೈಲ್ ಗ್ರಾಮಸ್ಥರು ಆರೇಳು ತಿಂಗಳಿನಿಂದ ಸಂಚಾರಕ್ಕೆ ಉತ್ತಮ ರಸ್ತೆ ಇಲ್ಲ ಎಂದು ದೂರುತ್ತಿದ್ದಾರೆ. ಇಷ್ಟರೊಳಗೆ ಕೆಲಸ ಮುಗಿಸಬೇಕಿತ್ತು.ಆದರೆ ಸಂಬಂಧಪಟ್ಟವರು ಗಂಭೀರತೆ ವಹಿಸದೆ ಸಮಸ್ಯೆ ಆಗಿದೆ’ ಎಂದು ಆರೋಪಿಸುತ್ತಾರೆ ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯ ವಿದ್ಯಾಧರ ಭಟ್.

‘ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೇ ಮಾರ್ಗ ಬಳಸಿ ನಿಸಲಕೊಪ್ಪ ಹೈಸ್ಕೂಲ್‍ಗೆ ಬರುತ್ತಾರೆ. ಸೈಕಲ್ ತುಳಿಯುವಾಗ ಇದೇ ರಸ್ತೆಯಲ್ಲಿ ಬಿದ್ದು ಇಬ್ಬರು ವಿದ್ಯಾರ್ಥಿನಿಯರು ಈಚೆಗೆ ಗಾಯಗೊಂಡಿದ್ದರು. ಆ ಬಳಿಕ ಬಹುತೇಕ ಎಲ್ಲರೂ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ’ ಎಂದು ಸಮಸ್ಯೆ ವಿವರಿಸಿದರು.

‘ರಸ್ತೆ ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ತ್ವರಿತವಾಗಿ ಕೆಲಸ ಪೂರ್ಣಗೊಳಿಸಲು ಈಗಾಗಲೇ ಅವರಿಗೆ ಸೂಚನೆ ನೀಡಿದ್ದೇವೆ’ ಎಂದು ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್ ಸತೀಶ್ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು