ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಗುತ್ತಿಗೆದಾರರ ₹ 200 ಕೋಟಿ ಬಿಲ್ ಬಾಕಿ

ಸರ್ಕಾರದ ನಿರ್ಲಕ್ಷ್ಯಕ್ಕೆ ಗುತ್ತಿಗೆದಾರರ ಅಸಮಾಧಾನ; ಪ್ರತಿಭಟಿಸುವ ಎಚ್ಚರಿಕೆ
Last Updated 15 ಜೂನ್ 2020, 20:00 IST
ಅಕ್ಷರ ಗಾತ್ರ

ಶಿರಸಿ: ಜಿಲ್ಲೆಯಲ್ಲಿ ರಸ್ತೆ, ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿರುವ ಸಿವಿಲ್ ಗುತ್ತಿಗೆದಾರರಿಗೆ ಹಲವಾರು ತಿಂಗಳುಗಳಿಂದ ಬಿಲ್ ಬಾಕಿ ಉಳಿದಿದೆ. ಅತ್ತ ಕೆಲಸವೂ ಇಲ್ಲದೇ, ಇತ್ತ ಬಿಲ್‌ ಹಣ ದೊರೆಯದೇ ಗುತ್ತಿಗೆದಾರರು ಕಂಗಾಲಾಗಿದ್ದಾರೆ.

2019-20ನೇ ಸಾಲಿನಡಿ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳು, ಸಣ್ಣ ನೀರಾವರಿ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಡಿಯಲ್ಲಿ ಕೈಗೊಂಡಿರುವ 500ಕ್ಕೂ ಹೆಚ್ಚು ಕಾಮಗಾರಿ ಆರ್ಥಿಕ ವರ್ಷದ ಅಂತ್ಯಕ್ಕೆ ಪೂರ್ಣಗೊಂಡಿವೆ. ಈ ಕಾಮಗಾರಿಗಳ ಗುತ್ತಿಗೆ ಪಡೆದಿದ್ದ 100ಕ್ಕೂ ಹೆಚ್ಚು ಗುತ್ತಿಗೆದಾರರಿಗೆ ಬಿಲ್ ಪಾವತಿ ವಿಳಂಬವಾಗಿದೆ.

‘ಗುತ್ತಿಗೆದಾರರಿಗೆ ಬರಬೇಕಾಗಿರುವ ಅಂದಾಜು ₹ 200 ಕೋಟಿ ಬಿಲ್ ಬಾಕಿಯಿದೆ. ಸಾಮಾನ್ಯವಾಗಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಶೇ 50ರಷ್ಟು ಅನುದಾನ ಡಿಸೆಂಬರ್ ಅಂತ್ಯದೊಳಗೆ ಬಂದರೆ, ಉಳಿದ ಶೇ 25ರಷ್ಟು ಅನುದಾನ ಫೆಬ್ರವರಿಯೊಳಗಾಗಿ ಬಿಡುಗಡೆಯಾಗುತ್ತದೆ. ಕೊನೆಯ ಹಂತದ ಶೇ 25ರಷ್ಟು ಅನುದಾನ ಮಾರ್ಚ್‌ 10ರ ನಂತರ ಜಮಾ ಆಗುತ್ತದೆ. ಗುತ್ತಿಗೆದಾರರು ಮುಗಿಸಿದ ಕಾಮಗಾರಿಗಳ ಮೆಸರ್‌ಮೆಂಟ್ ಬಿಲ್ (ಎಂ.ಬಿ) ಸಿದ್ದಪಡಿಸಿದ ಮೇಲೆ ಅದು ಹಿರಿಯ ಅಧಿಕಾರಿಗಳ ಅಂಕಿತದೊಂದಿಗೆ ಖಜಾನೆಗೆ ತಲುಪುತ್ತದೆ. ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್‌ ಹೇರಿದ ಕಾರಣ, ಬಿಲ್ ಪಾವತಿಗೆ ಮಾರ್ಚ್ 23 ಕೊನೆಯ ದಿನವಾಗಿತ್ತು. ಕೊನೆಕ್ಷಣದಲ್ಲಿ ಬಿಲ್ ಖಜಾನೆಗೆ ಹೋಗಿದ್ದರೂ, ಸಾಫ್ಟ್‌ವೇರ್‌ ತೊಂದರೆಯಿಂದ ಎಲ್ಲ ಬಿಲ್‌ಗಳು ತಿರಸ್ಕೃತಗೊಂಡಿದ್ದವು’ ಎನ್ನುತ್ತಾರೆ ಗುತ್ತಿಗೆದಾರರೊಬ್ಬರು.

‘ಅವಧಿ ಮೀರಿದ ಕಾರಣ ಈ ಹಣ ಸರ್ಕಾರ ವಾಪಸ್ಸಾಗಿರುತ್ತದೆ. ಹಿಂದೊಮ್ಮೆ ಇಂತಹುದೇ ಸಮಸ್ಯೆ ಎದುರಾದಾಗ, ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದು, ವಿಳಂಬವಾಗಿ ಹಣ ಬಂದಿತ್ತು. ಆದರೆ, ಈ ಬಾರಿ ಕೊರೊನಾ ಸಂದರ್ಭದಲ್ಲಿ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವಾಗ, ನಮ್ಮ ಬಿಲ್ ಯಾವಾಗ ಬರಬಹುದು ಎಂಬ ಚಿಂತೆ ಎದುರಾಗಿದೆ’ ಎನ್ನುತ್ತಾರೆ ಅವರು.

‘ಗುತ್ತಿಗೆದಾರರು ಸಾಲ ಮಾಡಿ ಕಾಮಗಾರಿ ನಡೆಸಿರುತ್ತಾರೆ. ಇದರ ಬಡ್ಡಿಯೇ ಲಕ್ಷಾಂತರ ರೂಪಾಯಿ ತಲುಪಿದೆ. ಈಗ ಕೆಲಸವೂ ಇಲ್ಲದೇ, ಗುತ್ತಿಗೆದಾರರ ಜೀವನ ಕಷ್ಟವಾಗಿದೆ. ಸಣ್ಣ ಗುತ್ತಿಗೆದಾರರಂತೂ ತೀವ್ರ ತೊಂದರೆಯಲ್ಲಿದ್ದಾರೆ. ’ ಎನ್ನುತ್ತಾರೆ ಗುತ್ತಿಗೆದಾರ ರಮೇಶ ನಾಯ್ಕ.

‘ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ ಪಾವತಿಸದೇ ತೊಂದರೆ ನೀಡುತ್ತಿರುವುದು ಸರ್ಕಾರದ ಬೇಜವಾಬ್ದಾರಿಯಾಗುತ್ತದೆ. ಸರ್ಕಾರದ ನಿರ್ದೇಶನದಂತೆ ನಾವು ಲಾಕ್‌ಡೌನ್ ಸಂದರ್ಭದಲ್ಲಿಯೂ ಕೆಲಸಗಾರರಿಗೆ ಅರ್ಧದಷ್ಟು ಕೂಲಿ ಪಾವತಿಸಿದ್ದೇವೆ. ಈಗಾಗಲೇ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ಈ ವಿಷಯವನ್ನು ತಿಳಿಸಲಾಗಿದೆ. ಸಂಬಂಧಪಟ್ಟ ಸಚಿವರಿಗೂ ಪತ್ರ ಬರೆದು ಗಮನಕ್ಕೆ ತರಲಾಗಿದೆ. ಸರ್ಕಾರ ಖಜಾನೆಯನ್ನು ತೆರೆದು ಗುತ್ತಿಗೆದಾರರ ಬಿಲ್ ಪಾವತಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ಯಾಮಸುಂದರ ಭಟ್ಟ ಆಗ್ರಹಿಸಿದರು.

ಸರ್ಕಾರ ಬಾಕಿ ಉಳಿದಿರುವ ಬಿಲ್‌ ಮೊತ್ತವನ್ನು ಒಂದು ವಾರದ ಒಳಗೆ ಪಾವತಿಸದಿದ್ದಲ್ಲಿ ಪ್ರತಿ ತಾಲ್ಲೂಕಿನಲ್ಲಿ ಗುತ್ತಿಗೆದಾರರು ಪ್ರತಿಭಟನೆ ನಡೆಸಲಿದ್ದಾರೆ ಎಂದುಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷಶ್ಯಾಮಸುಂದರ ಭಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT