ಭಾನುವಾರ, ಜುಲೈ 3, 2022
24 °C
ಕಾರವಾರ ತಾ.ಪಂ. ಕೆ.ಡಿ.ಪಿ ಸಭೆಯಲ್ಲಿ ಸಮಸ್ಯೆ ವಿವರಿಸಿದ ವಿದ್ಯಾರ್ಥಿಗಳು

‘ತರಗತಿಯ ಸಮಯಕ್ಕೆ ಬಸ್ ಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ತಿಂಗಳ ಪ್ರಗತಿ ಪರಿಶೀಲನಾ ಸಭೆಯು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಿತು. ಕೆರವಡಿ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳೇ ಸಭೆಯಲ್ಲಿ ಅಳಲು ತೋಡಿಕೊಂಡರು.

ಸಭೆಯಲ್ಲಿ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ‘ಬಸ್‌ಗಳ ಸಮಯ ಬದಲಾಗಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ರವೀಂದ್ರ ಪಾತ್ರಪೇಕರ್, ‘ಬಸ್‌ಗಳ ಸಮಯದಲ್ಲಿ ಬದಲಾವಣೆ ಮಾಡಿಲ್ಲ’ ಎಂದರು. ಆಗ ವಿದ್ಯಾರ್ಥಿಗಳನ್ನೇ ಸಭೆಗೆ ಕರೆಯಿಸಿದ ಪ್ರಮೀಳಾ ನಾಯ್ಕ, ಸಮಸ್ಯೆಗಳನ್ನು ವಿವರಿಸುವಂತೆ ಸೂಚಿಸಿದರು.

‘ಮಲ್ಲಾಪುರದಿಂದ ಬೆಳಿಗ್ಗೆ 6.15ಕ್ಕೆ ಬರುವ ಬಸ್, ದೇವಳಮಕ್ಕಿಗೆ ಬರುವಷ್ಟರಲ್ಲೇ ಭರ್ತಿಯಾಗುತ್ತದೆ. ಅಲ್ಲದೇ ಮಕ್ಕಳನ್ನು ಬಿಟ್ಟು ಸಾರ್ವಜನಿಕ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ. ಅಲ್ಲದೇ ಆ ಬಸ್‌ನಲ್ಲಿ ಬಂದರೆ ತರಗತಿ ಆರಂಭಕ್ಕೆ ಮೂರು ತಾಸು ಕಾಯಬೇಕು. ಆದ್ದರಿಂದ 7.15ಕ್ಕೆ ಕೆರವಡಿಗೆ ಬರುವಂತೆ ಬಸ್ ಸಂಚಾರ ಆರಂಭಿಸಬೇಕು’ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

‘ನಗರದ ಪಾಲಿಟೆಕ್ನಿಕ್ ಕಾಲೇಜಿನವರೆಗೆ ಮಾತ್ರ ಪಾಸ್ ಕೊಡಲಾಗುತ್ತದೆ. ಆದರೆ, ಅಲ್ಲಿ ಬಸ್ ನಿಲ್ಲಿಸುವುದಿಲ್ಲ. ಹಾಗಾಗಿ ಕಾರವಾರ ಬಸ್ ನಿಲ್ದಾಣದಲ್ಲಿ ಮಾರ್ಗ ಬದಲಾವಣೆಗೆ ಪಾಸ್‌ನಲ್ಲಿ ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎನ್.ಗುಡಿಗಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಹನಿ ನೀರಾವರಿಯ ಸ್ಪ್ರಿಂಕ್ಲರ್‌ಗೆ ಬೇಡಿಕೆ ಕಡಿಮೆಯಿದೆ. ತಾಡಪಾಲು ಹಂಚಿಕೆ ಶುರುವಾಗಿದೆ. ಹೆಚ್ಚುವರಿಯಾಗಿ 2,700 ತಾಡಪಾಲಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಾತನಾಡಿ, ‘ತಾಲ್ಲೂಕಿನಲ್ಲಿ ಹೆಚ್ಚಿನವರು ಗೇಣಿ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಜಮೀನಿನ ಮಾಲೀಕರು ಪಹಣಿ ಪತ್ರ ನೀಡಲು ಒಪ್ಪುತ್ತಿಲ್ಲ. ಮಾಲೀಕರಲ್ಲದವರಿಗೆ ಹನಿ ನೀರಾವರಿ ಪದ್ಧತಿಯಡಿ ಸಹಾಯಧನ ನೀಡಲು ಅವಕಾಶವಿಲ್ಲ. ಹಾಗಾಗಿ ಈ ಬಾರಿ ಯಾರೂ ಅರ್ಜಿ ಸಲ್ಲಿಸಿಲ್ಲ’ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೆಶಕ ಎಸ್.ವಿ.ನಾಯ್ಕ ಮಾತನಾಡಿ, ‘ಹೊಸ ಬಿ.ಪಿ.ಎಲ್ ಪಡಿತರ ಚೀಟಿಗೆ ಇನ್ನೂ ಅರ್ಜಿ ಸಲ್ಲಿಸಲು ಆರಂಭವಾಗಿಲ್ಲ. ಉಳಿದಂತೆ, ಚೀಟಿಯಲ್ಲಿ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅವಕಾಶವಿದೆ’ ಎಂದರು.

‘ಮೀಟರ್ ಅಳವಡಿಕೆ ಉಚಿತ’:

‘ತಾಲ್ಲೂಕಿನಲ್ಲಿ ಹೆಸ್ಕಾಂನಿಂದ ಹೊಸ ವಿದ್ಯುತ್ ಮಾಪಕಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದೆ. ಇದಕ್ಕೆ ಗ್ರಾಹಕರು ಹಣ ಪಾವತಿಸಬೇಕಿಲ್ಲ’ ಎಂದು ಹೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶೇಬಣ್ಣನವರ್ ಸ್ಪಷ್ಟಪಡಿಸಿದರು.

‘ಮೀಟರ್ ಅಳವಡಿಸಿದವರು ₹ 100, ₹ 200 ಕೇಳುತ್ತಿದ್ದಾರೆ ಎಂಬ ಬಗ್ಗೆ ದೂರುಗಳು ಬರುತ್ತಿವೆ. ಆದರೆ, ಇದು ಹೆಸ್ಕಾಂ ಕಾರ್ಯಕ್ರಮವಾಗಿದ್ದು, ಸಂಪೂರ್ಣವಾಗಿ ಉಚಿತವಾಗಿದೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ರವೀಂದ್ರ ಪವಾರ್ ವೇದಿಕೆಯಲ್ಲಿದ್ದರು.

––––––––––

ಸಭೆಯ ಇತರ ಪ್ರಮುಖಾಂಶಗಳು:

* ಕಾರವಾರ ತಾಲ್ಲೂಕು ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಫೆ.10 ಮತ್ತು 12ರಂದು: ಇ.ಒ ಡಾ.ಆನಂದಕುಮಾರ ಬಾಲಪ್ಪನವರ.

* ಸಾಗರಮಾಲಾ ಯೋಜನೆ ಬಗ್ಗೆ ಹೈಕೋರ್ಟ್‌ನಲ್ಲಿ ಫೆ.15ಕ್ಕೆ ಕೊನೆಯ ವಿಚಾರಣೆ: ಬಂದರು ಅಧಿಕಾರಿ.

* ಗಂಟಲುದ್ರವ ಸಂಗ್ರಹದಲ್ಲಿ ಜಿಲ್ಲೆಗೆ ಕಾರವಾರ ತಾಲ್ಲೂಕು ಮುಂಚೂಣಿಯಲ್ಲಿ: ಆರೋಗ್ಯ ಇಲಾಖೆ ಅಧಿಕಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು