ಶುಕ್ರವಾರ, ನವೆಂಬರ್ 15, 2019
23 °C
ಬೆಳಗಾವಿ ವಿಭಾಗಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಟೂರ್ನಿ

ಬಾಲ್ ಬ್ಯಾಡ್ಮಿಂಟನ್: ಸಾಂಬ್ರಾಣಿ, ಹಾವೇರಿ ತಂಡ ರಾಜ್ಯಕ್ಕೆ

Published:
Updated:
Prajavani

ಕಾರವಾರ: ನಗರದಲ್ಲಿ ಮಂಗಳವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕರ ವಿಭಾಗದಲ್ಲಿ ಹಳಿಯಾಳದ ಸಾಂಬ್ರಾಣಿ ಸರ್ಕಾರಿ ಪ್ರೌಢಶಾಲೆಯ ತಂಡವು ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ಬಾಲಕಿಯರಲ್ಲಿ  ಹಾವೇರಿ ಜಿಲ್ಲಾ ತಂಡವು ಜಯ ಸಾಧಿಸಿತು.

ಫೈನಲ್ ಪಂದ್ಯದಲ್ಲಿ ಸಾಂಬ್ರಾಣಿ ಶಾಲಾ ತಂಡವು ಚಿಕ್ಕೋಡಿಯ ಮೂಡಲಗಿ ಪ್ರೌಢಶಾಲೆಯ ತಂಡದ ವಿರುದ್ಧ 35–23, 36–38, 35–25 ಪಾಯಿಂಟ್‌ಗಳಿಂದ ಜಯ ಸಾಧಿಸಿತು. 

ಬಾಲಕಿಯರ ವಿಭಾಗದಲ್ಲಿ ಹಾವೇರಿ ಜಿಲ್ಲಾ ತಂಡವು ಶಿರಸಿಯ ಆವೆ ಮಾರಿಯಾ ತಂಡದ ವಿರುದ್ಧ 30–35, 35–33, 35–25 ಪಾಯಿಂಟ್‌ಗಳಿಂದ ಗೆಲುವು ಪಡೆಯಿತು. ಟೂರ್ನಿಯಲ್ಲಿ ಒಂಭತ್ತು ಜಿಲ್ಲೆಗಳ ತಂಡಗಳು ಭಾಗವಹಿಸಿದ್ದವು. 40 ನಿರ್ಣಾಯಕರು ಕಾರ್ಯ ನಿರ್ವಹಿಸಿದರು. ರಾಜ್ಯಮಟ್ಟದ ಪಂದ್ಯಾವಳಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಟೂರ್ನಿಯನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕ್ರೀಡೆಯು ವಿದ್ಯಾರ್ಥಿಗಳ ಕೌಶಲವನ್ನು ಹೆಚ್ಚಿಸುವುದಲ್ಲದೇ ಸ್ಪರ್ಧಾ ಮನೋಭಾವ ಬೆಳೆಸುತ್ತದೆ. ಸೋಲಿಗೆ ಹತಾಶೆ ಪಡದೇ ಕ್ರೀಡಾಸ್ಫೂರ್ತಿ ಮೆರೆಯುವವನು ಉತ್ತಮ ಕ್ರೀಡಾಪಟು ಆಗುತ್ತಾನೆ’ ಎಂದು ತಂಡಗಳನ್ನು ಪ್ರೋತ್ಸಾಹಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯೆ ನಂದಿನಿ ಗುನಗಿ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ದೈಹಿಕ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಾಜು ನಾಯ್ಕ, ಪ್ರಕಾಶ ಶಿರಾಲಿ ಇದ್ದರು.

ಪ್ರತಿಕ್ರಿಯಿಸಿ (+)