ಸೋಮವಾರ, ಮಾರ್ಚ್ 30, 2020
19 °C

'ಸಪ್ತಪದಿ'ಯಲ್ಲಿ ಎಲ್ಲಾ ವರ್ಗದವರಿಗೆ ಮುಕ್ತ ಅವಕಾಶ: ಕೋಟಾ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘ಸಪ್ತಪದಿ’ ಕಾರ್ಯಕ್ರಮವು ಬಡವರು, ಮಧ್ಯಮ ವರ್ಗ, ಶ್ರೀಮಂತರು ಹೀಗೆ ಎಲ್ಲ ವರ್ಗದವರು ಸರಳವಾಗಿ ವಿವಾಹವಾಗಲು ಮುಕ್ತ ಅವಕಾಶ ಕಲ್ಪಿಸಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹಿಂದೂ ಧಾರ್ಮಿಕ ಸಂಸ್ಥೆಗಳು ಧರ್ಮದಾಯ ದತ್ತಿಗಳ ಇಲಾಖೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಇಲ್ಲಿನ ಮಾರಿಕಾಂಬಾ ದೇವಾಲಯದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಸಪ್ತಪದಿ’ ಕುರಿತು ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಳ ವಿವಾಹದಲ್ಲಿ ವಧು–ವರರ ನವ ಉಡುಗೆ, ತಾಳಿ ಸೇರಿ ಪ್ರತಿ ದಂಪತಿಗೆ ಸರ್ಕಾರ ₹ 55ಸಾವಿರ ವೆಚ್ಚ ಮಾಡುತ್ತದೆ. ಈ ವಿವಾಹವು ಬಡವರಿಗಷ್ಟೇ ಸೀಮಿತವಲ್ಲ. ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು. ಏ.26ರಂದು ನಡೆಯುವ ಮೊದಲ ಹಂತದ ವಿವಾಹಕ್ಕೆ ಅರ್ಜಿ ಸಲ್ಲಿಸಲು ಮಾ.27 ಕೊನೆಯ ದಿನವಾಗಿದೆ ಎಂದರು.

ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು. ‘ದೇಶದಲ್ಲೇ ಮೊದಲ ಬಾರಿಗೆ ಮುಜರಾಯಿ ಇಲಾಖೆ ಇಂತಹ ಕಾರ್ಯಕ್ರಮ ಸಂಘಟಿಸಿದ್ದು ಶ್ಲಾಘನೀಯ. ಸಮಾಜದಲ್ಲಿ ತುಳಿತಕ್ಕೊಳಗಾದವರು, ಕಷ್ಟಗಳನ್ನು ಎದುರಿಸಿದವರಿಗೆ ಮಾತ್ರ ಇಂತಹ ಕಾರ್ಯಕ್ರಮಗಳ ಕಲ್ಪನೆ ಮೂಡಲು ಸಾಧ್ಯ’ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಸರಳ ಸಾಮೂಹಿಕ ವಿವಾಹದಲ್ಲಿ ಸಾಧಕ -ಬಾಧಕ ಎರಡೂ ಇವೆ. ಕರಾವಳಿ ಭಾಗದಲ್ಲಿ ಸಾಮೂಹಿಕ ವಿವಾಹಕ್ಕೆ ಆಸಕ್ತಿ ತೋರುವವರು ಕಡಿಮೆ. ಕರಾವಳಿ ಜನರಲ್ಲಿ ಸಾಮೂಹಿಕ ಸರಳ ವಿವಾಹ ಉತ್ತೇಜಿಸಲು ಪ್ರಯತ್ನಿಸುತ್ತೇನೆ’ ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಮದುವೆಗಾಗಿ ಸಾಲ ಮಾಡಿ ಕಷ್ಟಪಡುವವರಿಗೆ ಸರಳ ವಿವಾಹ ಸಹಕಾರಿಯಾಗಲಿದೆ ಎಂದರು.
ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಮಾತನಾಡಿ, ಸರಳವಾಗಿ ಮದುವೆಯಾಗುವವರಿಗೆ ಸಾಮೂಹಿಕ ವಿವಾಹ ವೇದಿಕೆಯಾಗಲಿದೆ. ಇದು ಸಮಾಜಮುಖಿ ಕಾರ್ಯವಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷ ಸೂರ್ಯನಾರಾಯಣ ಭಟ್ಟ, ಕಾರ್ಯದರ್ಶಿ ರಾಮಚಂದ್ರ ಮಟ್ಟಿ, ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸ್ಮನಿ, ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು. ಧಾರ್ಮಿಕ ದತ್ತಿ ಇಲಾಖೆ ಉಪವಿಭಾಗಾಧಿಕಾರಿ ಪುರುಷೋತ್ತಮ ಎಸ್ ಸ್ವಾಗತಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು