ಬುಧವಾರ, ಜುಲೈ 6, 2022
22 °C
ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಶಾಲೆ: ಶಿಕ್ಷಕರಿಂದ ಆತ್ಮೀಯ ಸ್ವಾಗತ

ಶಾಲಾವರಣದಲ್ಲಿ ಮತ್ತೆ ಮಕ್ಕಳ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೋವಿಡ್ ಕಾರಣದಿಂದ ಎರಡು ವರ್ಷ ಹಿನ್ನಡೆ ಕಂಡಿದ್ದ ಶೈಕ್ಷಣಿಕ ಚಟುವಟಿಕೆಗಳು, ಸೋಮವಾರ ತರಗತಿಗಳು ಪುನಃ ಆರಂಭವಾಗುವ ಮೂಲಕ ಮತ್ತೆ ಗರಿಗೆದರಿವೆ. ಬೇಸಿಗೆ ರಜೆಯನ್ನು ಕಡಿತಗೊಳಿಸಿ ಬಾಗಿಲು ತೆರೆದಿರುವ ಶಾಲೆಗಳಲ್ಲಿ ಮಕ್ಕಳನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದ್ದು ಕಂಡುಬಂತು.

ನಗರದ ಸರ್ಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಕೆಲವು ದಿನಗಳ ಹಿಂದಿನಿಂದಲೇ ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲಾಗಿತ್ತು. ಶಾಲೆಯ ಆವರಣವನ್ನು ಸ್ವಚ್ಛಗೊಳಿಸಲಾಗಿತ್ತು. ಸೋಮವಾರ ಬೆಳಿಗ್ಗೆಯೇ ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯಾರ್ಥಿಗಳನ್ನು ಹೂ, ಸಿಹಿ ನೀಡಿ ಬರಮಾಡಿಕೊಳ್ಳಲಾಯಿತು.

ರಜಾ ಅವಧಿಯನ್ನು ಪೂರ್ಣಗೊಳಿಸಿ ಶಾಲೆಗೆ ಮರಳಿದ ಮಕ್ಕಳು, ಶಿಕ್ಷಕರು, ಶಿಕ್ಷಕಿಯರಿಗೆ ನಮಸ್ಕರಿಸಿ ಮುಗುಳ್ನಗುತ್ತ ತರಗತಿಗಳಿಗೆ ಹೆಜ್ಜೆ ಹಾಕಿದರು. ತಮ್ಮ ಗೆಳೆಯರನ್ನು ಆಲಂಗಿಸಿ ಸಂಭ್ರಮಿಸಿದರು. ಮಕ್ಕಳನ್ನು ಶಾಲೆಯ ಬಳಿ ಬಿಡಲು ಬಂದಿದ್ದ ಪಾಲಕರು ಕುತೂಹಲದಿಂದ ನೋಡುತ್ತಿದ್ದರು.

ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಹರೀಶ ಗಾಂವ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಸೇರಿದಂತೆ ವಿವಿಧ ಅಧಿಕಾರಿಗಳು ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮೊದಲ ದಿನ ಕಡಿಮೆ ಹಾಜರಾತಿ: ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಮೊದಲ ದಿನವಾದ ಸೋಮವಾರ, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸ್ವಲ್ಪ ಕಡಿಮೆಯಿತ್ತು. ವಿದ್ಯಾರ್ಥಿ ನಿಲಯಗಳು ಇನ್ನಷ್ಟೇ ಆರಂಭವಾಗಬೇಕಿದೆ. ಹಾಗಾಗಿ ಪಾಲಕರು ತಕ್ಷಣ ಮಕ್ಕಳನ್ನು ಶಾಲೆಗೆ ಕಳುಹಿಸಲು ಆಸಕ್ತಿ ತೋರಿಲ್ಲ. ಹಾಸ್ಟೆಲ್‌ಗಳು ತೆರೆದ ಬಳಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು