ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಬ್ಬಿಯ ಅಬ್ಬರಕ್ಕೆ ದೇವಬಾಗ್ ತತ್ತರ

ದೇವಬಾಗ್‌ನಲ್ಲಿ ಆಳೆತ್ತರದ ಅಲೆಗಳ ರೌದ್ರಾವತಾರ: ಕಾಂಕ್ರೀಟ್ ರಸ್ತೆ ಕಬಳಿಸುತ್ತಿದೆ ಸಮುದ್ರ
Last Updated 3 ಆಗಸ್ಟ್ 2019, 12:54 IST
ಅಕ್ಷರ ಗಾತ್ರ

ಕಾರವಾರ: ಅರಬ್ಬಿ ಸಮುದ್ರದ ಬೃಹತ್ ಅಲೆಗಳ ಅಬ್ಬರಕ್ಕೆ ಮಾಜಾಳಿ ಸಮೀಪದ ದೇವಬಾಗ್ ಕಡಲ ಕಿನಾರೆ ಸಮುದ್ರ ಪಾಲಾಗುತ್ತಿದೆ. ಸಮುದ್ರ ದಂಡೆಯುದ್ದಕ್ಕೂ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆ ಕುಸಿದು ಬೀಳುವ ಹಂತ ತಲುಪಿದೆ.

ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ಗಾತ್ರದ ಅಲೆಗಳು ಕಾಣಿಸಿಕೊಂಡಿವೆ.ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಲಾದ ಶಾಶ್ವತ ತಡೆಗೋಡೆಯ ಕಲ್ಲುಗಳು ಈಗಾಗಲೇ ಕುಸಿದು ಸಮುದ್ರ ಪಾಲಾಗಿವೆ. ಇದರಿಂದದೇವಬಾಗ, ಬಾವಳ, ಹಿಪ್ಲಿ, ನವೀನಬಾಗ ಹಾಗೂ ದಾಂಡೇಬಾಗ ಮಜರೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಪ್ರದೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಮನೆಗಳಿದ್ದು, ಮೀನುಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬಸ್ ಸಂಚಾರ ಮೊಟಕು:ಮಜರೆಗಳಿಗೆ ಸಂಪರ್ಕ ಕಲ್ಪಿಸಿದ ಸಿಮೆಂಟ್ ರಸ್ತೆಯವರೆಗೂ ಕಡಲು ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿದೆ. ಒಂದು ವಾರದ ಅವಧಿಯಲ್ಲಿ ಅಲೆಗಳು ಸುಮಾರು 20 ಮೀಟರ್‌ಗಳಷ್ಟು ಒಳಗೆ ಬರುತ್ತಿವೆ.ಇದರಿಂದ ರಸ್ತೆಯ ತಳಭಾಗದಲ್ಲಿದ್ದ ಮರಳು ಮಿಶ್ರಿತ ಮಣ್ಣು ಕೊಚ್ಚಿಕೊಂಡು ಹೋಗಿದೆ. ಈಗಾಗಲೇ ಈ ರಸ್ತೆಯಲ್ಲಿ ಸಾರಿಗೆ ಬಸ್ ಅರ್ಧದಷ್ಟು ದೂರ ಮಾತ್ರ ಬಂದು ಅಲ್ಲಿಂದಲೇ ವಾಪಸಾಗುತ್ತಿದೆ. ಹಾಗಾಗಿ ಬಾವಳ ಪ್ರದೇಶದ ಜನರು ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಹೋಗಿ ಮನೆ ಸೇರುತ್ತಿದ್ದಾರೆ.

‘ಇದೇರೀತಿ ಅಲೆಗಳು ಅಪ್ಪಳಿಸುತ್ತಿದ್ದರೆ ಇನ್ನೊಂದೆರಡು ದಿನಗಳಲ್ಲಿ ನಮ್ಮ ಮನೆಗಳೂ ಸಮುದ್ರ ಸೇರುತ್ತವೆ. ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಸಮಸ್ಯೆಯನ್ನು ಕೇಳಲು ಬರುವುದೇ ಇಲ್ಲ. ಚುನಾವಣೆಯ ನಂತರ ಇಲ್ಲಿಗೆ ಯಾರೂ ಬಂದಿಲ್ಲ. ಒಂದುವೇಳೆ, ಬಂದರೂ ನಮಗೆ ಯಾರಿಗೂ ಮಾಹಿತಿ ನೀಡದೇ ಅವರಷ್ಟಕ್ಕೇ ನೋಡಿ ಹೋಗುತ್ತಿದ್ದಾರೆ. ನಮಗಿಲ್ಲಿ ಬದುಕುವುದೇ ಕಷ್ಟವಾಗಿದೆ’ ಎಂದು ಸ್ಥಳೀಯ ನಿವಾಸಿ ಸಾಕ್ಷಿ ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ದಿನವೂ ಸಂಚರಿಸುವ ರಸ್ತೆಯೇ ಕರಗಿ ಹೋಗುತ್ತಿದೆ. ಇದರಿಂದ ಶಾಲಾ ಮಕ್ಕಳಿಗೆ, ಮಹಿಳೆಯರಿಗೆಭಾರಿ ತೊಂದರೆಯಾಗುತ್ತದೆ. ಮೀನುಗಾರರೇ ಇಲ್ಲಿ ವಾಸ ಮಾಡುತ್ತಿದ್ದಾರೆ. ನಮ್ಮ ಸಮಸ್ಯೆ ಜನಪ್ರತಿನಿಧಿಗಳಿಗೆ ಅರ್ಥವೇ ಆಗುತ್ತಿಲ್ಲ. ಕೇವಲ ಶಾಶ್ವತ ಪರಿಹಾರದ ಭರವಸೆಯೇ ನಮಗೆ ಶಾಶ್ವತವಾಗಿದೆ. ಆದರೆ, ಕಾಮಗಾರಿ ಜಾರಿಯ ಬಗ್ಗೆ ಈವರೆಗೂ ಏನೂ ಕ್ರಮವಾಗಿಲ್ಲ’ ಎಂದು ಮತ್ತೊಬ್ಬ ನಿವಾಸಿಪ್ರಶಾಂತ್ ದೂರಿದರು.

‘ಅನುದಾನ ಮಂಜೂರಾದರೆ ಕಾಮಗಾರಿ’:ಕಡಲ್ಕೊರೆತವಾದ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಸ್ಥಳೀಯ ನಿವಾಸಿಗಳು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದಬಂದರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜಕುಮಾರ ಹೆಡೆ, ಪರಿಸ್ಥಿತಿ ಅವಲೋಕಿಸಿದರು.

ಇದೇವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇಲ್ಲಿ ತಡೆಗೋಡೆ ನಿರ್ಮಾಣಕ್ಕೆ ಒಂದು ವಾರದ ಹಿಂದೆ ₹ 65 ಲಕ್ಷ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಬಂದರು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಅನುದಾನ ಮಂಜೂರಾದರೆ ಕಾಮಗಾರಿ ಹಮ್ಮಿಕೊಳ್ಳಬಹುದು. ಅಲ್ಲಿವರೆಗೆ ಅಗತ್ಯವಾದ ತುರ್ತು ಕಾಮಗಾರಿ ಮಾಡಬಹುದು’ ಎಂದು ತಿಳಿಸಿದರು.

ಸ್ಥಳಕ್ಕೆತಹಶೀಲ್ದಾರ್ ರಾಮಚಂದ್ರ ಕಟ್ಟಿ,ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿ ಡಾ.ಆನಂದಕುಮಾರ, ಬಂದರು ಇಲಾಖೆಯಕಿರಿಯ ಸಹಾಯಕ ಎಂಜಿನಿಯರ್ಮಂಜುನಾಥ ನಾಮಧಾರಿ, ಜಿಲ್ಲಾ ಪಂಚಾಯ್ತಿ ಸದಸ್ಯ ಕೃಷ್ಣ ಮೇಥಾ ಹಾಗೂ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT