ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಸಂಘರ್ಷ ಪರಿಹಾರಕ್ಕೆ ಸೌಹಾರ್ದ ಮಾರ್ಗ ಸೂಕ್ತ: ಸಾಹಿತಿ ಕಾಳೇಗೌಡ ನಾಗವಾರ

Last Updated 2 ಮೇ 2022, 9:23 IST
ಅಕ್ಷರ ಗಾತ್ರ

ಅಂಕೋಲಾ: 'ಭಾಷೆಗಳ ನಡುವೆ ಸಣ್ಣಪುಟ್ಟ ಸಂಘರ್ಷಗಳು ಸಹಜ. ಭಾವೈಕ್ಯದ ಮೂಲಕ ದೇಶ ಕಟ್ಟಬೇಕು. ಭಾಷಾ ಸಂಘರ್ಷವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳುವುದು ಉತ್ತಮ ಮಾರ್ಗ' ಎಂದು ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಹೇಳಿದರು.

ಪಟ್ಟಣದ ನಾಡವರ ಸಭಾಭವನದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಜಿಲ್ಲಾ ಬರಹಗಾರರ ಸಮ್ಮಿಲನ ಉದ್ಘಾಟಿಸಿ ಅವರು ಮಾತನಾಡಿದರು.

'ಉನ್ನತ ಸಾಹಿತ್ಯ ಪರಂಪರೆ ಹಾಗೂ ನಾಮಾಕಿಂತ ಸಾಹಿತಿಗಳನ್ನು ಹೊಂದಿದ್ದರೂ ಕನ್ನಡ ಭವನ ಇಲ್ಲದಿರುವುದೇ ಆಶ್ಚರ್ಯ. ದಿನಕರ ದೇಸಾಯಿ ಶಿಕ್ಷಣ ಪ್ರೇಮ ರಾಷ್ಟ್ರಕ್ಕೆ ಮಾದರಿ. ದಿನಕರರ ಕವಿತೆಗಳನ್ನು ಜಾನಪದ ಹಾಡುಗಳ ರೀತಿಯಲ್ಲಿ ಇಲ್ಲಿಯ ಜನರು ಹಾಡಿ ಸಂಭ್ರಮಿಸುತ್ತಾರೆ' ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ, 'ಅಜಿತ್ ಪವಾರ್ ಕನ್ನಡದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವುದರ ಕುರಿತು ನೀಡಿದ ಹೇಳಿಕೆಯನ್ನು ಖಂಡಿಸುತ್ತೇನೆ. ಮಹಾರಾಷ್ಟ್ರ ಅಸ್ತಿತ್ವಕ್ಕೆ ಬರುವ ಮೊದಲೇ ಕನ್ನಡ ಮಹಾರಾಷ್ಟ್ರದಲ್ಲಿ ಅಸ್ಮಿತೆಯನ್ನು ಹೊಂದಿತ್ತು. ಭಾಷಾ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಂಗದ ಮೇಲೆ ಗೌರವವಿಟ್ಟು ಸುಮ್ಮನಿದ್ದೇವೆ. ವಿನಾಕಾರಣ ಕನ್ನಡಿಗರನ್ನು ಕೆಣಕಬೇಡಿ' ಎಂದು ಹೇಳಿದರು.

'ಕನ್ನಡ ಶಾಲೆಗಳು ಕಡಿಮೆಯಾಗುತ್ತಿವೆ. ಕನ್ನಡ ಶಾಲೆ ಉಳಿದರೆ ಕನ್ನಡ ಉಳಿಯುತ್ತದೆ. ಶಾಲೆಗಳು ಮುಚ್ಚಿದರೆ ಕನ್ನಡ, ಕರ್ನಾಟಕ, ಸಾಹಿತ್ಯ ಪರಿಷತ್ತು ಎಲ್ಲವೂ ನಾಶವಾಗುತ್ತದೆ' ಎಂದರು

'ಜಿಲ್ಲೆಯೂ ಭೌಗೋಳಿಕವಾಗಿ ವಿಸ್ತಾರವಾಗಿದೆ. ರಾಜಕೀಯ ಕಾರಣವಲ್ಲ, ಪ್ರಗತಿ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಜನರ ಹಿತಕ್ಕಾಗಿ ಇನ್ನೊಂದು ಜಿಲ್ಲೆಯಾಗಬೇಕು. ವಿಭಜನೆಯಾಗುವ ಜಿಲ್ಲೆಯ ಕೇಂದ್ರವನ್ನು ಜನರು ನಿರ್ಧರಿಸಬೇಕು' ಎಂದರು.

ಆಶಯ ನುಡಿಗಳನ್ನಾಡಿದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ, 'ಜಿಲ್ಲೆಯಲ್ಲಿ ಸಾಹಿತ್ಯ ಸಭಾಭವನ ನಿರ್ಮಿಸಲು ಹಾಗೂ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ನೀಡಬೇಕು' ಎಂದು ಮನವಿ ಮಾಡಿದರು.

ಜಿಲ್ಲಾ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷರಾದ ಡಾ. ಆರ್.ಎನ್.ನಾಯಕ, ವಿಷ್ಣು ನಾಯ್ಕ, ಭಾಗೀರಥಿ ಹೆಗಡೆ, ಡಾ. ಝಮೀರುಲ್ಲಾ ಷರೀಫ್, ವಿ.ಗ.ನಾಯಕ ಹಾಗೂ ಕ.ಸಾ.ಪ ರಾಜ್ಯ ಕಾರ್ಯದರ್ಶಿಗಳಾದ ನೇ.ಭ ರಾಮಲಿಂಗ ಶೆಟ್ಟಿ, ಡಾ. ಬಿ.ಎಂ.ಪಟೇಲಪಾಂಡು, ಕ.ಸಾ.ಪ ಜಿಲ್ಲಾ ಘಟಕದ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಗೌರವಾಧ್ಯಕ್ಷ ಮರ್ತುಜಾ ಹುಸೇನ್ ವೇದಿಕೆಯಲ್ಲಿದ್ದರು.

ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಪಿ.ಆರ್.ನಾಯ್ಕ ಸ್ವಾಗತಿಸಿದರು. ತಾಲ್ಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ ವಂದಿಸಿದರು. ಹಿರಿಯ ಸಾಹಿತಿಗಳು, ಬರಹಗಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT