ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಅನಾರೋಗ್ಯ: 7 ಕಿ.ಮೀ ಹೊತ್ತು ಸಾಗಿದ ಯುವಕರು

ಕಾರವಾರ ತಾಲ್ಲೂಕಿನ ಕುಗ್ರಾಮ ಮಚ್ಚಳ್ಳಿಗೆ ರಸ್ತೆ ಸಂಪರ್ಕವಿಲ್ಲ
Last Updated 12 ಜೂನ್ 2021, 12:50 IST
ಅಕ್ಷರ ಗಾತ್ರ

ಕಾರವಾರ: ಊರಿಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ತಾಲ್ಲೂಕಿನ ಮಚ್ಚಳ್ಳಿಯ ಹಿರಿಯ ಮಹಿಳೆಯೊಬ್ಬರನ್ನು ಗ್ರಾಮಸ್ಥರು, ಶನಿವಾರ ಏಳು ಕಿಲೋಮೀಟರ್ ದೂರ ಹೆಗಲ ಮೇಲೆ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅನಾರೋಗ್ಯ ಪೀಡಿತ ನೇಮಿಗೌಡ ಎಂಬುವವರಿಗೆ ತಕ್ಷಣ ಚಿಕಿತ್ಸೆಯ ಅಗತ್ಯವಿತ್ತು. ಆದರೆ, ಬೆಟ್ಟದ ಮೇಲೆ, ಕಾಡಿನ ನಡುವೆ ಇರುವ ಕುಗ್ರಾಮಕ್ಕೆ ಕಾಲುದಾರಿ ಮಾತ್ರವಿದೆ. ಹಾಗಾಗಿ ಆಂಬುಲೆನ್ಸ್ ಸೇರಿದಂತೆ ಯಾವುದೇ ವಾಹನ ಬರುವುದಿಲ್ಲ. ಸಮೀಪದ ಊರು ಗ್ರಾಮ ಕೇಂದ್ರವಾಗಿರುವ ಅಮದಳ್ಳಿಗೆ 10 ಕಿಲೋಮೀಟರ್ ದೂರವಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಚಿಗೆ ಬರಲು ಏಳು ಕಿಲೋಮೀಟರ್ ನಡೆದು ಬರಬೇಕು.

ಹೀಗಾಗಿ, ಗ್ರಾಮಸ್ಥರು ಒಂದು ಪ್ಲಾಸ್ಟಿಕ್ ಕುರ್ಚಿಯನ್ನು ಗಟ್ಟಿಯಾದ ಕೋಲಿಗೆ ಜೋಕಾಲಿಯಂತೆ ಬಿಗಿದು ನೇಮಿಗೌಡ ಅವರನ್ನು ಅದರಲ್ಲಿ ಕೂರಿಸಿದರು. ನಂತರ ನಾಲ್ಕೈದು ಮಂದಿ ಸೇರಿ ಹೆಗಲು ಕೊಟ್ಟು ಹೆದ್ದಾರಿ ಅಂಚಿಗೆ ಕರೆದುಕೊಂಡು ಬಂದರು. ಅಲ್ಲಿಂದ ಅವರನ್ನು ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು.

ಮಚ್ಚಳ್ಳಿ ಸಣ್ಣ ಊರಾಗಿದ್ದು, ಕೇವಲ 13 ಮನೆಗಳಿವೆ. ಸುಮಾರು 60 ಜನಸಂಖ್ಯೆಯಿದೆ. ಅತ್ಯಂತ ದುರ್ಗಮವಾದ ಹಾದಿ ಇದ್ದು, ಮಳೆಗಾಲದಲ್ಲಿ ಇಲ್ಲಿಗೆ ಬರುವುದು ಸವಾಲಾಗಿದೆ. ಮೊಬೈಲ್ ನೆಟ್‌ವರ್ಕ್ ಕೂಡ ಸರಿಯಾಗಿ ಸಿಗುವುದಿಲ್ಲ.

‘ಪ್ರಜಾವಾಣಿ’ ಕಳೆದ ವರ್ಷ ಪ್ರಕಟಿಸಿದ ‘ಲೈಫ್‌ಡೌನ್ ಕಥೆಗಳು’ ಸರಣಿಯಲ್ಲಿ ‘ಬೆಟ್ಟದ ಜೀವಗಳ ಲಾಕ್‌ಡೌನ್‌ಗೆ 40 ವರ್ಷ’ ಎಂಬ ವಿಶೇಷ ವರದಿ (2020ರ ಜೂನ್ 16ರ ಸಂಚಿಕೆ) ಪ್ರಕಟವಾಗಿತ್ತು. ಆಗ ವರದಿಗೆ ಪ್ರತಿಕ್ರಿಯಿಸಿದ್ದ ಶಾಸಕಿ ರೂಪಾಲಿ ನಾಯ್ಕ, ಕುಗ್ರಾಮದಲ್ಲಿ ಮೂಲ ಸೌಕರ್ಯ ವೃದ್ಧಿಗೆ ಗಮನ ಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT