ಗುರುವಾರ , ಏಪ್ರಿಲ್ 22, 2021
30 °C
10ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ‘ಪಿಚ್ಚರ್ ಬಾಬು’ ಪುತ್ರ ಸುನೀಲ ಸಿದ್ಧಿ

ನಟನಾರಂಗದಲ್ಲಿ ಸಿದ್ಧಿ ಯುವಕನ ಮಿಂಚು

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ತಂದೆಯ ನಟನೆಯಿಂದ ಪ್ರೇರಣೆ ಪಡೆದ ಯುವಕ, ತಾನೂ ಚಂದನವನದಲ್ಲಿ ಮಿಂಚಬೇಕೆಂದು ಪಣ ತೊಟ್ಟಿದ್ದಾರೆ. ಕಟ್ಟಿಗೆ ಕಡಿಯುವ ಕೆಲಸವನ್ನು ಮಾಡುತ್ತಲೇ ನಟನಾರಂಗದತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಮಂಗಳೂರಿನ ‘ಕಲಾಕೃತಿ’ಯಲ್ಲಿ ನಟನಾ ತರಬೇತಿ ಪಡೆದುಕೊಂಡು, 10ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ತಾಲ್ಲೂಕಿನ ಮೈನಳ್ಳಿಯ ಸುನೀಲ ಸಿದ್ಧಿ ಭರವಸೆ ಮೂಡಿಸಿರುವ ಯುವ ನಟನಾಗಿದ್ದಾರೆ. 30 ವರ್ಷಗಳ ಹಿಂದೆ ‘ಭೂತಯ್ಯನ ಮಗ ಅಯ್ಯು’ ಚಲನಚಿತ್ರದಲ್ಲಿ ‘ನೀಗ್ರೊ ಬಾಬು’ ಪಾತ್ರ ಮಾಡಿದ್ದ ದಿ.ಅಂತೋನಿ ಸಿದ್ಧಿ ಅವರ ಪುತ್ರನಾಗಿದ್ದಾರೆ.

ಸದ್ಯ ಪುನಿತ್ ರಾಜಕುಮಾರ್ ಅಭಿನಯದ ‘ಯುವರತ್ನ’ದಲ್ಲಿ ವಿದ್ಯಾರ್ಥಿ ಮುಖಂಡನ (ಪೋಕ್ರಿ) ಪಾತ್ರ ನಿರ್ವಹಿಸುತ್ತಿದ್ದಾರೆ. ಧಾರವಾಡದಲ್ಲಿ ಈ ಚಿತ್ರದ ಐದನೇ ಶೆಡ್ಯೂಲ್‌ನಲ್ಲಿ ಶೂಟಿಂಗ್ ಕೆಲಸ ನಡೆಯುತ್ತಿದ್ದು, 13 ದಿನ ಚಿತ್ರೀಕರಣ ನಡೆಯಲಿದೆ.

ತಮ್ಮ ನಟನೆಯ ಹಾದಿಯ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸುನೀಲ ಸಿದ್ಧಿ, ‘30 ವರ್ಷಗಳ ಹಿಂದೆ ತೆರೆಕಂಡಿದ್ದ ಭೂತಯ್ಯನ ಮಗ ಅಯ್ಯು ಬಗ್ಗೆ ಜನರು ಈಗಲೂ ಮಾತನಾಡಿಕೊಳ್ಳುತ್ತಾರೆ. ಕೇವಲ ಒಂದೇ ಚಿತ್ರದಲ್ಲಿ ನನ್ನ ತಂದೆ ನಟಿಸಿದರೂ ಜನರು ‘ಪಿಚ್ಚರ್ ಬಾಬು’ ಅಂತ ಅವರನ್ನು ಗುರುತಿಸುತ್ತಿದ್ದರು. ತಂದೆಯ ಪಾತ್ರವೇ ನಟನಾರಂಗಕ್ಕೆ ಬರಲು ನನಗೆ ಸ್ಫೂರ್ತಿ ನೀಡಿತು’ ಎಂದರು.

‘ಮಂಗಳೂರಿನಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತ, ಸಂಜೆ ವೇಳೆಗೆ ಎರಡು ತಾಸು ನಾಟಕ ತರಬೇತಿ ಪಡೆಯುತ್ತಿದ್ದೆ. ಎರಡು ವರ್ಷ ದುಬೈಯಲ್ಲಿ ಸೆಕ್ಯುರಿಟಿ ಆಫೀಸರ್ ಆಗಿ ಕೆಲಸ ಮಾಡಿ, ಮರಳಿ ಬಂದ ನಂತರ ನಟನೆಯತ್ತ ಹೆಚ್ಚು ಆಸಕ್ತಿವಹಿಸಿದೆ’ ಎಂದು ನಟನಾ ರಂಗದ ಆರಂಭಿಕ ದಿನಗಳನ್ನು ನೆನಪಿಸಿದರು.

‘ನನ್ನ ಮೊದಲ ಚಿತ್ರ ಗೆಳೆಯರು ಗೆಳತಿಯರು. ಆದರೆ, ಅದು ಬಿಡುಗಡೆ ಆಗಲಿಲ್ಲ. ಇಲ್ಲಿಯವರೆಗೆ 10 ಚಲನಚಿತ್ರ, ಎರಡು ಕಿರುಚಿತ್ರ ಹಾಗೂ ಒಂದು ಧಾರಾವಾಹಿಯಲ್ಲಿ ಅಭಿನಯಿಸಿದ್ದೇನೆ. ಹುತ್ತದ ಸುತ್ತ, ಜೀವನಯಜ್ಞ, ಮಹಿರ, ಭೈರಾದೇವಿ, ಝಾನ್ಸಿ, ಸಲಾಂ ಬೆಂಗಳೂರು, ಯುವರತ್ನ, ವಿದ್ಯಾವಂತರು, ಬಿರಿಯಾನಿ ಇದರಲ್ಲಿ ಪ್ರಮುಖವಾದವು’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು