ಭಾನುವಾರ, ಮೇ 22, 2022
22 °C
ಕಾರ್ಮಿಕ ಇಲಾಖೆಯ ಯೋಜನೆಗಳ ಪ್ರಚಾರ

ಕಾರವಾರದಿಂದ ಬೆಂಗಳೂರಿಗೆ ಸ್ಕೇಟಿಂಗ್: 6ಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: 'ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡುವ ಸಲುವಾಗಿ ಮೇ 6ರಂದು 40 ಮಕ್ಕಳು ಜಿಲ್ಲಾಧಿಕಾರಿ ಕಚೇರಿಯಿಂದ ಬೆಂಗಳೂರಿಗೆ ಸ್ಕೇಟಿಂಗ್ ಮೂಲಕ ಸಾಗಲಿದ್ದಾರೆ' ಎಂದು ಕೈಗಾ ರೋಲರ್ ಸ್ಕೇಟಿಂಗ್ ಸಂಘದ ತರಬೇತುದಾರ ದಿಲೀಪ ಹಣಬರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಂದು ಬೆಳಿಗ್ಗೆ 10ಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಚಾಲನೆ ನೀಡುವರು. ಸ್ಕೇಟಿಂಗ್ ಮಾಡುವವರು ಯಲ್ಲಾಪುರ- ಶಿರಸಿ- ಸಾಗರ- ತಿಪಟೂರು- ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ಮೇ 12ರಂದು ತಲುಪಲಿದ್ದಾರೆ. ಅಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣ ಪತ್ರ ವಿತರಿಸಲಿದ್ದಾರೆ' ಎಂದರು. 

'ಒಟ್ಟು 610 ಕಿಲೋಮೀಟರ್ ದೂರವನ್ನು ಏಳು ದಿನಗಳಲ್ಲಿ ಕ್ರಮಿಸಲಿದ‌್ದಾರೆ. 8ರಿಂದ 20 ವಯೋಮಾನದ ಮಕ್ಕಳಿದ್ದು, ತಲಾ 10 ಮಂದಿಯ ನಾಲ್ಕು ತಂಡಗಳನ್ನು ಮಾಡಲಾಗಿದೆ. 15 ಬಾಲಕಿಯರೂ ತಂಡದಲ್ಲಿದ್ದಾರೆ. ಎಲ್ಲರೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಾಗೂ ರಾಜ್ಯ ತಂಡಕ್ಕೆ ಆಯ್ಕೆಯಾದವರಾಗಿದ್ದಾರೆ' ಎಂದು ತಿಳಿಸಿದರು.

'ದಾರಿಯುದ್ದಕ್ಕೂ 630 ಹಳ್ಳಿಗಳಲ್ಲಿ ಕಾರ್ಮಿಕ ಇಲಾಖೆಯ ಯೋಜನೆಗಳ ಬ್ಯಾನರ್, ಕರಪತ್ರಗಳನ್ನು ಹಂಚಲಿದ್ದಾರೆ. ದಿನಕ್ಕೆ ಆರು ತಾಸು ಸ್ಕೇಟಿಂಗ್ ಮಾಡುತ್ತ 100ರಿಂದ 110 ಕಿಲೋಮೀಟರ್ ಸಾಗಲಿದ್ದಾರೆ. ಪ್ರತಿ ವಿದ್ಯಾರ್ಥಿಗೆ ಸುಮಾರು 310 ಕಿ.ಮೀ.ಗಳಷ್ಟು ದೂರ ಸ್ಕೇಟಿಂಗ್ ಮಾಡಲಿದ್ದಾರೆ' ಎಂದು ಹೇಳಿದರು.

ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ ಮಾತನಾಡಿ, 'ಈ ಕಾರ್ಯಕ್ರಮವು ಇಲಾಖೆಯ ಯೋಜನೆಗಳ ಪ್ರಚಾರಕ್ಕೆ ಸಹಕಾರಿಯಾಗಲಿದೆ. 1.93 ಲಕ್ಷ ಕಟ್ಟಡ ಕಾರ್ಮಿಕರು ಜಿಲ್ಲೆಯಲ್ಲಿದ್ದಾರೆ. ಅವರಿಗೆ ಹಲವು ಯೋಜನೆಗಳಿವೆ. ಶ್ರಮಿಕ ಸಂಜೀವಿನಿಯಿದೆ. ಶಿಶು ಪಾಲನಾ ಕೇಂದ್ರವನ್ನು ಸದ್ಯವೇ ಜಾರಿ ಮಾಡಲಾಗುತ್ತದೆ' ಎಂದರು.

ಪ್ರಮುಖರಾದ ರಾಜನ್ ಬಾನಾವಳಿ, ಸತೀಶ ನಾಯ್ಕ, ಲಕ್ಷ್ಮಿಕಾಂತ ಭಟ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು