ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಗಡಿ ಕೃಷಿ ತರಬೇತಿಗೆ ಹಣಕಾಸು ತೊಂದರೆ

ಕೌಶಲಾಭಿವೃದ್ಧಿ ಇಲಾಖೆಯಿಂದ ಕಾರವಾರದ ಸ್ನಾತಕೋತ್ತರ ಕೇಂದ್ರದಲ್ಲಿ ಒಂದು ವರ್ಷದ ಹಿಂದೆ ಉದ್ಘಾಟನೆ
Last Updated 10 ಜೂನ್ 2019, 19:30 IST
ಅಕ್ಷರ ಗಾತ್ರ

ಕಾರವಾರ: ನಗರದಕರ್ನಾಟಕ ವಿಶ್ವವಿದ್ಯಾಲಯದ ಕಡಲಜೀವ ವಿಜ್ಞಾನ ವಿಭಾಗದಲ್ಲಿ ಒಂದು ವರ್ಷದ ಹಿಂದೆ ಆರಂಭವಾದ ಸೀಗಡಿ ಕೃಷಿ ತರಬೇತಿ ಕೇಂದ್ರದಲ್ಲಿ ಚಟುವಟಿಕೆಗಳನ್ನು ಮುಂದುವರಿಸಲು ಹಣಕಾಸು ಕೊರತೆ ಅಡ್ಡಿಯಾಗಿದೆ.

ಕೇಂದ್ರ ಕೌಶಲಾಭಿವೃದ್ಧಿ ಸಚಿವಾಲಯದಿಂದ ಕಳೆದ ವರ್ಷ ಜೂನ್ 27ರಂದು ಈ ಕೇಂದ್ರವನ್ನು ಉದ್ಘಾಟಿಸಲಾಗಿತ್ತು. ಈ ಸಂಬಂಧಭಾರತೀಯ ಕೃಷಿ ಕೌಶಲ ಪರಿಷತ್ತಿನ (ಆಸ್ಕಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸತ್ಯೇಂದ್ರ ಆರ್ಯ ಮತ್ತುಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ (ಕೆಯುಡಿ) ಕುಲಪತಿ ಪ್ರೊ.ಪ್ರಮೋದ್ ಜಿ.ಗಾಯ್ ಒಪ್ಪಂದಕ್ಕೆ ಸಹಿ ಮಾಡಿದ್ದರು.

ಕರಾವಳಿ ಭಾಗದ ಪ್ರಮುಖ ಸಮುದಾಯವಾಗಿರುವ ಮೀನುಗಾರರಿಗೆ ಮೀನುಗಾರಿಕಾ ಚಟುವಟಿಕೆಗಳಲ್ಲಿ ಕೌಶಲ ವೃದ್ಧಿಸುವುದು, ಸೀಗಡಿ ಕೃಷಿ ಸೇರಿದಂತೆ ವಿವಿಧ ರಂಗಗಳಲ್ಲಿ ತರಬೇತಿ ನೀಡುವುದು ಇದರ ಉದ್ದೇಶವಾಗಿದೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಆರಂಭವಾದ ತರಬೇತಿಯ ಮೊದಲ ತಂಡಕ್ಕೆ 31 ಮಂದಿ ಹೆಸರು ನೋಂದಾಯಿಸಿದ್ದರು. ಆದರೆ, ವಿದ್ಯಾರ್ಹತೆ, ವಯೋಮಿತಿಯನಿರ್ಬಂಧಗಳಿರುವಕಾರಣಆರು ಮಂದಿ ಹಿಂದೆ ಸರಿದಿದ್ದರು. ಕೊನೆಗೆ 25 ಮಂದಿ ಒಂದು ತಿಂಗಳ ತರಬೇತಿ ಪಡೆದುಕೊಂಡಿದ್ದರು.

ಮೊದಲ ತಂಡದ ಬಳಿಕ ಈವರೆಗೆ ಎರಡನೇ ತಂಡಕ್ಕೆ ತರಬೇತಿ ನೀಡಲು ಸ್ನಾತಕೋತ್ತರ ಕೇಂದ್ರಕ್ಕೆ ಸಾಧ್ಯವಾಗಲೇ ಇಲ್ಲ. ಇಡೀ ದಿನ ತರಬೇತಿ ಪಡೆಯುವ ಮೀನುಗಾರರಿಗೆ ಕನಿಷ್ಠ ಉಪಾಹಾರ, ವಿದ್ಯಾರ್ಥಿ ವೇತನ, ತರಬೇತಿ ನೀಡುವವರಿಗೆ ವೇತನ ನೀಡಲು ತಿಂಗಳಿಗೆ ಸುಮಾರು ₹ 1 ಲಕ್ಷದವರೆಗೆ ಖರ್ಚಿದೆ. ಆದರೆ, ಅದನ್ನು ಕೊಡಲು ವಿಶ್ವವಿದ್ಯಾಲಯದ ಬಳಿಯೂ ಹೆಚ್ಚಿನ ಅನುದಾನವಿಲ್ಲ. ಇತ್ತ ಕೌಶಲಾಭಿವೃದ್ಧಿ ಸಚಿವಾಲಯವೂ ಹಣಕಾಸು ನೆರವು ನೀಡಿಲ್ಲ. ಇದರಿಂದ ಕೋರ್ಸ್‌ ಈಗ ಅತಂತ್ರ ಸ್ಥಿತಿಯಲ್ಲಿದೆ.

ಈಗಾಗಲೇ ಸೀಗಡಿ ಕೃಷಿ ಮಾಡುತ್ತಿರುವವರಿಗೆಸುಧಾರಿತ ತರಬೇತಿ ನೀಡುವುದು, ಕಪ್ಪೆ ಚಿಪ್ಪು ಬೆಳೆಯುವ ಬಗ್ಗೆ ಮಾಹಿತಿ ಕಾರ್ಯಾಗಾರ, ಸಾಕಿದ ಜಲಚರಗಳಿಗೆ ರೋಗ ಬಾಧಿಸಿದರೆ ಪರಿಶೀಲಿಸುವುದು ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸುವುದು ಈ ರೀತಿಯ ಹಲವು ಕೋರ್ಸ್‌ಗಳನ್ನು ಈ ಕೇಂದ್ರದಲ್ಲಿ ಮಾಡಲು ಅವಕಾಶವಿದೆ ಎನ್ನುತ್ತಾರೆ. ಆದರೆ, ಅದಕ್ಕೆ ಅಗತ್ಯವಾದ ಹಣಕಾಸು ಸೌಲಭ್ಯ ಒದಗಿಸಬೇಕು ಎಂಬುದು ಕೋರ್ಸ್ ಅಧ್ಯಯನ ಮಾಡಲು ಬಯಸುವವರ ಬೇಡಿಕೆಯಾಗಿದೆ.

‘ಈ ಕೇಂದ್ರವನ್ನು ಉದ್ಘಾಟನೆ ಮಾಡಿದ್ದ ಅಂದಿನ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ,ಇಲ್ಲಿನ ಮೀನುಗಾರರಿಗೆ ನಾನಾ ಕಾರಣಗಳಿಂದ ಸಮುದ್ರದಲ್ಲಿ ಮೀನು ಸಿಗುತ್ತಿಲ್ಲ. ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಅವರಿಗೆ ಜೀವನಕ್ಕೊಂದು ಆಸರೆ ಬೇಕು. ಹೀಗಾಗಿ ಹೊಸ ಅವಕಾಶಗಳನ್ನು ತೆರೆದಿಟ್ಟು, ಸ್ವಾವಲಂಬನೆ ಮೂಡಿಸುವುದೇ ಈ ತರಬೇತಿಯ ಉದ್ದೇಶವಾಗಿದೆ ಎಂದು ಹೇಳಿದ್ದರು. ಆದರೆ, ತರಬೇತಿ ಮುಂದುವರಿಸಲು ಬೇಕಾದ ಹಣಕಾಸು ವ್ಯವಸ್ಥೆಯನ್ನು ಸರ್ಕಾರ ಮಾಡದಿರುವುದು ಬೇಸರದ ಸಂಗತಿ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT