ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿಜೀವದ ಜೀವನ ದುಃಖಾಂತ್ಯ; ಕೊನೆಗೂ ಮಗ ಬರಲಿಲ್ಲ

Last Updated 12 ಜುಲೈ 2019, 19:30 IST
ಅಕ್ಷರ ಗಾತ್ರ

ಶಿರಸಿ: ಸೊರಬ ಬಸ್‌ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದು, ಸುದ್ದಿಯಾಗಿದ್ದ ವೃದ್ಧರೊಬ್ಬರ ಜೀವನ ದುಃಖಾಂತ್ಯವಾಗಿದೆ. ಗುರುತು ಪತ್ತೆಯಾದರೂ, ಕುಟುಂಬ ಸೇರುವ ಮುನ್ನವೇ ಅವರು ಇಹಲೋಕ ಯಾತ್ರೆ ಮುಗಿಸಿದರು.

ವಾರದ ಹಿಂದೆ ಶಿವಮೊಗ್ಗ ಜಿಲ್ಲೆ ಸೊರಬದ ಬಸ್ ನಿಲ್ದಾಣದಲ್ಲಿ ಅನಾಥ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ವೃದ್ಧರೊಬ್ಬರನ್ನು ಅಲ್ಲಿನ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಭಾವಚಿತ್ರದೊಂದಿಗೆ ಈ ವ್ಯಕ್ತಿಯ ಸಂಬಂಧಿಕರನ್ನು ಪತ್ತೆ ಹಚ್ಚುವಂತೆ ವಿನಂತಿಸಿದ್ದ ಸಂದೇಶವೊಂದು ವಾಟ್ಸ್‌ಆ್ಯಪ್ ಮೂಲಕ ಎಲ್ಲೆಡೆ ಹರಿದಾಡಿತ್ತು.

ಅಷ್ಟರಲ್ಲಿ ಪೊಲೀಸರು, ಸಿದ್ದಾಪುರದ ಪ್ರಚಲಿತ ಆಶ್ರಯಧಾಮದ ಮುಖ್ಯಸ್ಥ ನಾಗರಾಜ ನಾಯ್ಕ ಅವರನ್ನು ಸಂಪರ್ಕಿಸಿ, ಆಶ್ರಮಕ್ಕೆ ಸೇರಿಸಿಕೊಳ್ಳುವಂತೆ ವಿನಂತಿಸಿದ್ದರು. ನಾಗರಾಜ ನಾಯ್ಕ ಅವರು ಆ ವ್ಯಕ್ತಿಯನ್ನು ಕರೆತಂದು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಿತ್ರಾಣಗೊಂಡಿದ್ದ ಅವರು ಕೊಂಚ ಸುಧಾರಿಸಿಕೊಂಡ ಮೇಲೆ, ತಾನು ಮುರಳೀಧರ ವಜೆ ಎಂದು ಹೇಳಿಕೊಂಡಿದ್ದರು.

‘ಶಿರಸಿ ಮಾರಿಗುಡಿ ಸಮೀಪ ನಮ್ಮ ಮನೆಯಿದೆ. ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ದಾವಣಗೆರೆ, ಚನ್ನಗಿರಿ ಶಾಖೆಯಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದೇನೆ. ನಾಲ್ಕೈದು ತಿಂಗಳ ಹಿಂದೆ ಹೆಂಡತಿ ಮೃತಪಟ್ಟಿದ್ದಾಳೆ. ಮಗ ಚೆನ್ನೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾನೆ. ಪತ್ನಿ ತೀರಿಕೊಂಡ ಮೇಲೆ ಮೊಬೈಲ್ ನಂಬರ್ ಬದಲಾಯಿಸಿರುವ ಮಗ, ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದು ಅವರು ನನ್ನ ಬಳಿ ಹೇಳಿದ್ದರು. ಅವರ ಮಗ ಮಾನಸ್‌ ಅವರನ್ನು ಸಂಪರ್ಕಿಸಿ, ತಂದೆಯನ್ನು ನೋಡಲು ಬರುವಂತೆ ತಿಳಿಸಿದ್ದೆವು. ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಕೂಡ ಮಾನಸ್ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಅವರು ತಂದೆಯನ್ನು ನೋಡಿಕೊಳ್ಳಲು ಒಪ್ಪಿಕೊಂಡಿದ್ದರು. ಆದರೆ, ಅಪ್ಪ–ಮಗನ ಭೇಟಿಯ ಕ್ಷಣ ಕೂಡಿಬರಲೇ ಇಲ್ಲ’ ಎಂದು ನಾಗರಾಜ ನಾಯ್ಕ ತಿಳಿಸಿದ್ದಾರೆ.

‘ಶಿರಸಿಯ ರಕ್ತದಾನಿ ಡಾನಿ ಡಿಸೋಜಾ ಅವರ ಸಹಾಯದಿಂದ ಮುರಳೀಧರ್ ಅವರಿಗೆ ರಕ್ತ ನೀಡಲಾಗಿತ್ತು. ಸೋಮವಾರ ಅವರ ಮಗ ಬರುವುದೆಂದು ನಿಗದಿಯಾಗಿತ್ತು. 20 ವರ್ಷಗಳ ನಂತರ ತಂದೆ–ಮಗ ಮುಖಾಮುಖಿಯಾಗುವ ಕ್ಷಣಕ್ಕೆ ನಾವು ಸಹ ಕಾತರರಾಗಿದ್ದೆವು. ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು. ಮುರಳೀಧರ ಅವರು, ಶುಕ್ರವಾರ ಬೆಳಿಗ್ಗೆ ಮೃತರಾದರು’ ಎಂದು ಅವರು ಹೇಳಿದ್ದಾರೆ.

ಮೃತರ ಅಂತ್ಯಕ್ರಿಯೆ ಇಲ್ಲಿನ ವಿದ್ಯಾನಗರ ರುದ್ರಭೂಮಿಯಲ್ಲಿ ನೆರವೇರಿತು. ನಾಗರಾಜ ನಾಯ್ಕ ಜೊತೆಗೆ ರುದ್ರಭೂಮಿ ಸಮಿತಿಯ ವಿ.ಪಿ.ಹೆಗಡೆ ವೈಶಾಲಿ ಹಾಗೂ ಒಂದಿಬ್ಬರು ಸೇರಿ ಈ ಕಾರ್ಯ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT