ಕಾರವಾರ: ಗಂಗಾವಳಿ ನದಿಯ ಪ್ರವಾಹವುರಾಮನಗುಳಿಮತ್ತು ಗುಳ್ಳಾಪುರ ಸುತ್ತಮುತ್ತಲಿನ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ನೆರೆಯಲ್ಲಿ ಸಮವಸ್ತ್ರಗಳೂ ಕೊಚ್ಚಿಕೊಂಡು ಹೋಗಿ 15 ದಿನಗಳಿಂದ ಶಾಲೆಗಳಿಗೆ ತೆರಳಲು ಸಮಸ್ಯೆಯಾಗಿದೆ.
ಒಂದು ವಾರದ ಬಿಡದೇ ಕಾಡಿದ್ದಪ್ರವಾಹದಿಂದ ನದಿ ತೀರದ ಹತ್ತಾರು ಮನೆಗಳು ಕುಸಿದಿವೆ. ರಾಮನಗುಳಿ, ಗುಳ್ಳಾಪುರ ಭಾಗದಲ್ಲಿ ಕೂಲಿಕಾರರೇ ಜಾಸ್ತಿ ವಾಸವಿದ್ದಾರೆ. ನೆರೆ ಇಳಿದ ಬಳಿಕ ಅವರಿಗೆ ಕುಸಿದ ಮನೆಗಳಲ್ಲಿ ಅಳಿದುಳಿದ ವಸ್ತುಗಳನ್ನು ಜೋಡಿಸಿಕೊಳ್ಳುವುದು, ಮನೆಯಿದ್ದರೂ ನೀರಿನಲ್ಲಿ ಕೊಚ್ಚಿಕೊಂಡು ಹೋದ ವಸ್ತುಗಳನ್ನುಹುಡುಕುವುದೇ ದೊಡ್ಡ ಕೆಲಸವಾಗಿದೆ. ಹಾಗಾಗಿ ಮನೆ ಮಂದಿಗೆ ಮಕ್ಕಳೂ ಸಹಕರಿಸುತ್ತಿದ್ದಾರೆ.
‘ನಾನು ಗಮನಿಸಿದಂತೆ 12 ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ಮನೆಯಲ್ಲಿದ್ದ ಬಟ್ಟೆಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ಶಾಲೆಗೆ ಹೋಗಲಾಗದೇ ತೊಂದರೆಗೆ ಒಳಗಾಗಿದ್ದಾರೆ. ನದಿಯ ಒಂದು ಭಾಗದ ವಿದ್ಯಾರ್ಥಿಗಳು ಮತ್ತೊಂದು ಭಾಗದಲ್ಲಿರುವ ಕಲ್ಲೇಶ್ವರದ ಶಾಲೆಗೆ ಹೋಗುತ್ತಾರೆ. ಮಧ್ಯದಲ್ಲಿ ಹರಿಯುತ್ತಿರುವ ನದಿಯನ್ನು ದಾಟಲೂ ಸಮಸ್ಯೆಯಾಗುತ್ತಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಯಮುನಾ ಗಾಂವ್ಕರ್ ತಿಳಿಸಿದರು.
‘ನದಿಯನ್ನು ದಾಟಲು ದೋಣಿಯ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಡಳಿತ ತಿಳಿಸಿದೆ. ನೆರೆಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಆಗುವವರೆಗೂ ದೋಣಿಯಲ್ಲಿ ಉಚಿತವಾಗಿ ಪ್ರಯಾಣಾವಕಾಶ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ಭಾಗದಲ್ಲಿ ಬಡವರೇ ಜಾಸ್ತಿಯಿರುವ ಕಾರಣ ಇದು ತೀರಾ ಅಗತ್ಯವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ವಿದ್ಯಾರ್ಥಿಗಳಿಗೆ ಒತ್ತಡ ಹೇರುವಂತಿಲ್ಲ’:‘ನೆರೆಯಿಂದ ಹಲವು ವಿದ್ಯಾರ್ಥಿಗಳ ಸಮವಸ್ತ್ರಗಳು ಹಾಳಾಗಿವೆ. ಹಾಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನೇ ಧರಿಸುವಂತೆ ಯಾವುದೇ ಕಾರಣಕ್ಕೂ ಒತ್ತಡ ಹೇರಬಾರದು ಎಂದು ಆದೇಶಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಅಂಕೋಲಾ ತಾಲ್ಲೂಕಿನಲ್ಲಿ 248 ಮಕ್ಕಳ ನೋಟ್‌ಬುಕ್‌ಗಳು ಹಾಗೂ ಪಠ್ಯಪುಸ್ತಕಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ಬಗ್ಗೆಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಪಟ್ಟಿ ನೀಡಲಾಗಿದೆ. ರೋಟರಿ ಸಂಸ್ಥೆಯವರು ಮಕ್ಕಳಿಗೆ ನೋಟ್‌ಬುಕ್ ನೀಡುವುದಾಗಿ ತಿಳಿಸಿದ್ದು, ಆ.20ರಿಂದ ವಿತರಣೆ ಮಾಡಲಿದ್ದಾರೆ. ನೆರೆ ಪೀಡಿತ ಗ್ರಾಮಗಳಿಂದ ಯಾವುದೇ ಶಾಲೆಗಳಿಗೆ ಮಕ್ಕಳು ಹೋಗುತ್ತಿದ್ದರೂ ಅವರಿಗೆ ಪುಸ್ತಕಗಳನ್ನು ನೀಡಲಾಗುವುದು. ಈ ರೀತಿ ಜಿಲ್ಲೆಯಲ್ಲಿ 786 ಮಕ್ಕಳ ಪಟ್ಟಿ ಮಾಡಲಾಗಿದೆ’ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.