ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರ ಮಕ್ಕಳ ಕೆರೆ ಕಾಳಜಿ

ಜಲ ದಿನದಂದು ಜಾಥಾ ನಡೆಸುವ ಉತ್ಸಾಹದಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆ
Last Updated 23 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ವಿಶ್ವ ಜಲ ದಿನಾಚರಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ತಿಗಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಊರಿನ ಕೆರೆಗಳ ಸಮೀಕ್ಷೆ ನಡೆಸಿದ್ದಾರೆ. ಕೆರೆಯಲ್ಲಿ ಹೂಳು ತುಂಬಿರುವ ಕಾರಣ ಪ್ರಾಣಿ–ಪಕ್ಷಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುವ ಸತ್ಯವನ್ನು ಮನಗಂಡಿರುವ ಮಕ್ಕಳು, ಈ ಸಂಗತಿಯನ್ನು ಊರವರ ಗಮನಕ್ಕೆ ತಂದಿದ್ದಾರೆ.

ತಿಗಣಿ ಶಾಲೆಯ ಕದಂಬ ಇಕೊ ಕ್ಲಬ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮಾರ್ಚ್ ತಿಂಗಳ ಆರಂಭದಲ್ಲಿ, ಶಾಲೆಯ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಭೀಮರೆಡ್ಡಿ ಕೆರೆ, ಸಣ್ಣ ಕೆರೆ, ಹಾಲಬಾವಿ ಕೆರೆ, ಬೆಂಡೆಗಟ್ಟೆ ಕೆರೆ, ಬೋಳಗಟ್ಟೆ ಕೆರೆ, ಹುಚ್ಚಿಕುಂಡಿ, ಶಿಂಗ್ಡಿಕಟ್ಟೆ, ಹೊಸಕೆರೆ ಸೇರಿದಂತೆ 14 ಕೆರೆಗಳ ಸಮೀಕ್ಷೆ ನಡೆಸಿದರು. ಮಕ್ಕಳ ಜೊತೆ ಗ್ರಾಮ ಪಂಚಾಯ್ತಿ ಸದಸ್ಯರೂ ಸೇರಿಕೊಂಡರು.

‘ಇಕೊ ಕ್ಲಬ್ ವಾರ್ಷಿಕ ಕ್ರಿಯಾಯೋಜನೆ ಅಡಿಯಲ್ಲಿ, ಕೆರೆಗಳಿಗೆ ಭೇಟಿ ನೀಡಿದಾಗ 12 ಕೆರೆಗಳಲ್ಲಿ ಹೂಳು ತುಂಬಿರುವುದು ಕಂಡುಬಂತು. ಎರಡು ಕೆರೆಗಳನ್ನು ಕಳೆದ ವರ್ಷ ಮನುವಿಕಾಸ ಸಂಸ್ಥೆ ಹೂಳೆತ್ತಿದೆ. ಹೂಳೆತ್ತಿರುವ ಕೆರೆಗಳಲ್ಲಿ ಜಲ ಸಂಗ್ರಹವಿದೆ. ಆದರೆ, ಹೂಳು ತುಂಬಿರುವ ಕೆರೆಗಳಲ್ಲಿ ನೀರು ತಳಕಚ್ಚಿದೆ. ರಕ್ಷಿತ ಅರಣ್ಯದ ಅಂಚಿಗೆ ಇರುವ ಈ ಕೆರೆಗಳು ಕಾಡುಪ್ರಾಣಿಗಳಾದ ನವಿಲು, ಕಾನಕುರಿ, ಕಾಡುಹಂದಿ, ಕಾಡುಬೆಕ್ಕು, ನರಿ ಇವುಗಳಿಗೆ ಬಾಯಾರಿಕೆ ನೀಗಿಸಿಕೊಳ್ಳುವ ತಾಣಗಳು’ ಎನ್ನುತ್ತಾರೆ ಸಮೀಕ್ಷೆಯ ನೇತೃತ್ವ ವಹಿಸಿದ್ದ ಶಿಕ್ಷಕ ಮಾರುತಿ ಉಪ್ಪಾರ.

‘ಊರಿನಲ್ಲಿ ಸುಮಾರು 350 ಕುಟುಂಬಗಳಿವೆ. ಊರಿನ ಬಾವಿಗಳು ಬೇಸಿಗೆಯಲ್ಲಿ ಬತ್ತುತ್ತವೆ. ನೀರಿನ ತೀವ್ರ ಬರ ಎದುರಾದಾಗ ಕೆಲವರು ಕುಡಿಯುವ ನೀರಿಗೆ ಶಾಲೆ ಬಾವಿಯ ನೀರನ್ನು ಆಶ್ರಯಿಸುತ್ತಾರೆ. ಕೃಷಿ ಪ್ರಧಾನವಾಗಿರುವ ಊರಿನಲ್ಲಿ 1000ಕ್ಕೂ ಅಧಿಕ ಜಾನುವಾರುಗಳಿವೆ. ಇವು ದಾಹ ಇಂಗಿಸಿಕೊಳ್ಳಲು, ಬೇಸಿಗೆಯಲ್ಲಿ ಕೆರೆ ಬರುತ್ತವೆ. ಕಳೆದ ವರ್ಷ ಮಳೆಯಾಗಿರುವ ಕಾರಣ ಈಗ ಕೆರೆಯಲ್ಲಿ ಸ್ವಲ್ಪ ನೀರಿದೆ. ಇಲ್ಲವಾದಲ್ಲಿ ಪ್ರತಿವರ್ಷ ಮಾರ್ಚ್ ಹೊತ್ತಿಗೆ ಕೆರೆ ಬತ್ತಿಹೋಗಿ, ಜಾನುವಾರುಗಳಿಗೆ ಕುಡಿಯುವ ನೀರಿನ ತತ್ವಾರವಾಗುತ್ತದೆ’ ಎಂದು ಅವರು ವಿವರಿಸಿದರು.

ಈ ಎಲ್ಲ ಸಂಗತಿಗಳನ್ನು ದಾಖಲಿಸಿ, ಭಾಶಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. ಊರಿನ ಜಲಮೂಲ ಸಮೃದ್ಧಿಯಾದರೆ, ಜನರ ಜೀವನ ಹಸನಾಗುತ್ತದೆ ಎಂಬ ಆಶಯದಿಂದ ಸಮೀಕ್ಷೆ ನಡೆಸಲಾಗಿದೆ. ಶಾಲಾ ಮಕ್ಕಳು ಇದೇ ಕೆರೆಗಳ ದಂಡೆಯ ಮೇಲೆ ಮಳೆಗಾಲದಲ್ಲಿ ಬೀಜದುಂಡೆ ಬಿತ್ತಿ, ಭೂಮಿ ಹಸಿರಾಗಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮುಖ್ಯ ಶಿಕ್ಷಕಿ ವನಿತಾ ನಾಯ್ಕ, ಶಿಕ್ಷಕ ಶಶಾಂಕ ಹೆಗಡೆ, ಊರಿನ ಪ್ರಮುಖರಾದ ಬಿ.ಎನ್.ಗೌಡ, ಅರುಣ ಗೌಡ, ಕಂಠೀರವ ಗೌಡ, ಗಣಪತಿ ಚೆನ್ನಯ್ಯ ಕೂಡ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಎಲ್ಲ ಕೆರೆಗಳ ಸರ್ವೆ ನಡೆಸಬೇಕು. ಆದ್ಯತೆ ಮೇರೆಗೆ ಕೆರೆಗಳ ಹೂಳೆತ್ತಿದರೆ, ಕೃಷಿಗೆ ಅನುಕೂಲವಾಗುತ್ತದೆ ಎಂಬುದು ರೈತರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT