ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಬಳಕೆಯೇ ಯಶಸ್ಸಿನ ಗುಟ್ಟು: ಕೃಷಿಯಲ್ಲಿ ಹೊಸ ಪ್ರಯೋಗ ನಡೆಸುವ ರಾಮಚಂದ್ರ

Last Updated 26 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಶಿರಸಿ: ಆಧುನಿಕ ಕೃಷಿ ತಂತ್ರಜ್ಞಾನವನ್ನು ವಿಭಿನ್ನವಾಗಿ ಬಳಸಿಕೊಂಡು ಕೃಷಿಯಲ್ಲಿ ಯಶಸ್ಸು ಕಂಡವರು ತಾಲ್ಲೂಕಿನ ಕೊಪ್ಪದ ಕೃಷಿಕ ರಾಮಚಂದ್ರ ಕೋಡಸಿಂಗೆ.

ಕೃಷಿ ಕೂಲಿಕಾರ್ಮಿಕರ ಕೊರತೆಯ ಇಂದಿನ ದಿನಗಳಲ್ಲಿ ಅವರು, ಲಭ್ಯ ಉಪಕರಣವನ್ನೇ ಕ್ರಿಯಾಶೀಲವಾಗಿ ಬಳಸಿಕೊಂಡಿದ್ದಾರೆ. ವೀಡ್‌ ಕಟರ್‌ ಕೇವಲ ಕಳೆ ತೆಗೆಯಲು ಮಾತ್ರವಲ್ಲ, ಭತ್ತದ ಗೊಣವೆ ಹಾಕಲು, ಗದ್ದೆಯ ಹಾಳಿ ಮಾಡಲು, ಕರಿಮೆಣಸನ್ನು ಬೋಳಕಾಳು ಮಾಡಲು ಬಳಸಬಹುದೆಂದು ತೋರಿಸಿದ್ದಾರೆ ರಾಮಚಂದ್ರ. ‘10 ವರ್ಷಗಳ ಹಿಂದೆಯೇ ಈ ಪ್ರಯೋಗ ಮಾಡಿದ್ದೆ. ಆಗ ಹೊಂಡಾ ಕಂಪನಿಯ ಯಂತ್ರ ನನ್ನ ಬಳಿಯಿತ್ತು. ಕಂಪನಿಯ ಪ್ರಮುಖರು ಮನೆಗೆ ಬಂದು ವೀಕ್ಷಿಸಿ, ಅವರ ನಿಬ್ಬೆರಗಾಗಿದ್ದರು. ಇದು ಹೊಸ ಮಾದರಿಯ ಬಳಕೆ ಎಂದು ಪ್ರಶಂಸಿಸಿದ್ದರು’ ಎನ್ನುತ್ತಾರೆ ಅವರು.

ದಶಕದ ಹಿಂದೆಯೇ ಅವರು, ಈಗಿನ ಶ್ರೀ ಪದ್ಧತಿಯ ಮಾದರಿಯಲ್ಲಿ ‘ನಿಬಿಡ ನಾಟಿ’ಯಲ್ಲಿ ಭತ್ತ ಬೆಳೆದಿದ್ದರು. ‘ಒಂದು ಎಕರೆಗೆ ನಾಲ್ಕು ಕೆ.ಜಿ ಸ್ಥಳಿಯ ಜಾತಿಯ ಭತ್ತದ ಬೀಜ ಬಳಸಿ ಉತ್ತಮ ಇಳುವರಿ ಪಡೆದಿದ್ದೇನೆ. ಎಕರೆಗೆ 22 ಚೀಲದವರೆಗೂ ಭತ್ತ ಬಂದಿದೆ. ಮನೆಯಲ್ಲಿಯೇ ತಯಾರಿಸಿದ ವನಸ್ಪತಿ ಕಷಾಯವನ್ನು ಭತ್ತಕ್ಕೆ ಸಿಂಪರಣೆ ಮಾಡಿದರೆ, ಗಿಡದ ಬೆಳವಣಿಗೆ ಉತ್ತಮವಾಗುವ ಜತೆಗೆ ಕೀಟದ ಹಾವಳಿ ತಪ್ಪುತ್ತದೆ. ರಾಸಾಯನಿಕ ಮುಕ್ತ ಆಹಾರ ಅನ್ನ ಊಟ ಮಾಡಬಹುದು’ ಎಂಬುದು ಅವರು ನೀಡುವ ಸಲಹೆ.

ಕಳೆದ ವರ್ಷ ಎರಡು ಎಕರೆಯಲ್ಲಿ ಶುಗರ್‌ಕ್ವೀನ್ ತಳಿಯ ಕಲ್ಲಂಗಡಿ ಬೆಳೆದು ಉತ್ತಮ ಇಳುವರಿ ಪಡೆದಿದ್ದರು ರಾಮಚಂದ್ರ. ನಂತರ ಅದೇ ಬಳ್ಳಿಯ ಪುನರ್ಬಳಕೆ ಬಗ್ಗೆ ಯೋಚಿಸಿ ಪ್ರಯೋಗಾರ್ಥವಾಗಿ (ಕೂಳೆ ಬೆಳೆ) 30 ಬಳ್ಳಿಗಳನ್ನು ಆಯ್ದುಕೊಂಡು, ಮತ್ತೊಂದು ಬೆಳೆ ತೆಗೆದು ದಾಖಲೆ ಮಾಡಿದ್ದಾರೆ. ತೋಟಗಾರಿಕಾ ವಿಜ್ಞಾನಿಗಳು ಸಹ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಬ್ಬನ್ನು ಬೆಳೆಯುವ ಅವರು ವರ್ಷಕ್ಕೆ 80ಡಬ್ಬಿಯಷ್ಟು ಬೆಲ್ಲ ತಯಾರಿಸುತ್ತಾರೆ. ಅತಿಕ್ರಮಣ ಭೂಮಿಯಲ್ಲಿ ಕಾಡು ಬೆಳೆಸಿ, ಅಲ್ಲಿ ಕಾಳುಮಣಸು ಬಳ್ಳಿ ಬೆಳೆಸಲು ಮುಂದಾಗಿದ್ದಾರೆ. 10 ವರ್ಷಗಳಿಂದ ಯಾವುದೇ ಔಷಧ, ಗೊಬ್ಬರ ಕಾಣದ ಅರ್ಧ ಎಕರೆ ತೋಟ ಕೊಳೆರೋಗ, ಬೇರು ಕೊಳೆಯಿಂದ ಮುಕ್ತವಾಗಿದೆ.

‘ಕಬ್ಬಿನ ಗದ್ದೆ, ಅನಾನಸ್‌ ಗದ್ದೆಗೆ ಪವರ್‌ ಟಿಲ್ಲರ್ ಮೂಲಕ ಮಣ್ಣು ಹಾಕುತ್ತೇನೆ. ಇದರಿಂದ ಕೆಲಸಗಾರರಿಗೆ ಕಾಯುವ ಕೆಲಸವಿಲ್ಲ. ಸಂಬಂಧಿಕರ ಮನೆ ಮದುವೆಯಲ್ಲಿ ಗಿಡ ಉಡುಗೊರೆ ಕೊಡುವುದನ್ನು ರೂಢಿಸಿಕೊಂಡಿದ್ದೇನೆ. ಹಸಿರು ಬೆಳೆಸಲು ಇದೊಂದು ಸಣ್ಣ ಪ್ರಯತ್ನ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT