ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವತ್ವ ಕಾಣುವ ಪ್ರವೃತ್ತಿ ಸಮಾಜದಲ್ಲಿ ಬೆಳೆಯಲಿ

29ನೇ ಚಾತುರ್ಮಾಸ್ಯ ವ್ರತ ಸಂಕಲ್ಪದಲ್ಲಿ ಸ್ವರ್ಣವಲ್ಲಿ ಶ್ರೀ ಅಭಿಮತ
Last Updated 16 ಜುಲೈ 2019, 13:03 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಮಂಗಳವಾರ ವೇದವ್ಯಾಸರ ಪೂಜೆ ನಡೆಸುವ ಮೂಲಕ 29ನೇ ಚಾತುರ್ಮಾಸ್ಯ ವ್ರತಾಚರಣೆಯ ಸಂಕಲ್ಪ ಕೈಗೊಂಡರು.

ಇದರ ಅಂಗವಾಗಿ ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಸುಧೀರ ಹೆಗಡೆ ಅವರನ್ನು ಶ್ರೀಗಳು ಸನ್ಮಾನಿಸಿದರು. ತಂದೆ–ತಾಯಿ, ಗುರುವಿನಲ್ಲಿ ದೈವತ್ವದ ಚಿಂತನೆ ಕಾಣಬೇಕು. ಹಾಗಾದಾಗ ಅವರೆಡೆಗೆ ಶ್ರದ್ಧೆ ಬೆಳೆಯುತ್ತದೆ. ಇಂದಿನ ಸಮಾಜ ದೈವತ್ವ ಕಾಣುವ ಪ್ರವೃತ್ತಿಯೆಡೆಗೆ ಸಾಗಬೇಕು ಎಂದು ಶ್ರೀಗಳು ಹೇಳಿದರು.

ಶ್ರದ್ಧೆಯಿಂದ ಮನೋರೋಗ ನಿವೃತ್ತಿಯಾದರೆ, ಕಲಹ ನಿಯಂತ್ರಣವಾಗುತ್ತದೆ, ಅನೈತಿಕತೆ ದೂರವಾಗುತ್ತದೆ. ಮಾನವೀಯ ಸಂಬಂಧಗಳಿಗೆ ಶಕ್ತಿ ಬರುತ್ತದೆ. ಆ ಮೂಲಕ ಸಮಾಜದಲ್ಲಿ ನೈತಿಕತೆ ದೃಢವಾಗುತ್ತದೆ. ಇದೇ ಕಾರಣಕ್ಕೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ದೈವತ್ವದ ಚಿಂತನೆ ಕಾಣುವಂತಾಗಬೇಕು. ಇದಕ್ಕೆ ಗುರು ಪೂರ್ಣಿಮೆ ನಾಂದಿಯಾಗಬೇಕು ಎಂದು ನುಡಿದರು.

ಅಶೋಕ ಲೇಲ್ಯಾಂಡ್ ಲಿಮಿಟೆಡ್ ಉಪಾಧ್ಯಕ್ಷ ನರಸಿಂಹ ಹೆಗಡೆ ಬಾಳೇಗದ್ದೆ ಮಾತನಾಡಿ, ‘ಶಿಷ್ಯರ ನಡೆ ಸನ್ಮಾರ್ಗದಲ್ಲಿದ್ದರೆ ಗುರುಗಳಿಗೆ ಸಾರ್ಥಕ ಭಾವ ಉಂಟಾಗುತ್ತದೆ. ಈ ಸಾರ್ಥಕತೆ ಶಿಷ್ಯರ ಏಳ್ಗೆಗೆ ಪೂರಕವಾಗುತ್ತದೆ. ಆರ್ಥಿಕ ನಿಶ್ಶಕ್ತಿಯಿಂದ ಉತ್ತಮ ಶಿಕ್ಷಣ ಮರೀಚಿಕೆಯಾಗಿದೆ. ಮಠಗಳ ನೇತೃತ್ವದಲ್ಲಿ ಬಡ ವರ್ಗಗಳ ಆರ್ಥಿಕ ಸಬಲತೆಯ ಮಾರ್ಗ ಸೃಷ್ಟಿಯಾಗಬೇಕು’ ಎಂದರು. ಕೇಂದ್ರ ಮಾತೃ ಮಂಡಳಿಯ ಅಧ್ಯಕ್ಷೆ ವೇದಾ ಹೆಗಡೆ, ರಾಮ ಕ್ಷತ್ರೀಯ ಸಮಾಜದ ಎಸ್.ಕೆ.ನಾಯ್ಕ ಇದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಸ್ವಾಗತಿಸಿದರು. ಆರ್.ಎನ್.ಭಟ್ಟ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT