ಬುಧವಾರ, ಸೆಪ್ಟೆಂಬರ್ 23, 2020
23 °C
ಬಿಗಡಾಯಿಸಿದ ವಿದ್ಯುತ್ ಸಮಸ್ಯೆ: ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಆರೋಪ

ದಾಸನಕೊಪ್ಪ ಗ್ರಿಡ್ ಕಾರ್ಯ ವೈಫಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ದಾಸನಕೊಪ್ಪದಲ್ಲಿ ₹ 3ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೆಸ್ಕಾಂ ಗ್ರಿಡ್‌ನಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯುತ್ ಸಮಸ್ಯೆ ಬಿಗಡಾಯಿಸಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಮತ್ತು ಸದಸ್ಯೆ ಪ್ರೇಮಾ ಬೇಡರ್ ಆರೋಪಿಸಿದರು.

ಶುಕ್ರವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಹೊಸ ಗ್ರಿಡ್ ಜನರ ಸಮಸ್ಯೆ ನಿವಾರಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ, ಗ್ರಿಡ್ ಆದ ಮೇಲೆ ಸಮಸ್ಯೆ ಹೆಚ್ಚಾಗಿದೆ. ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿರುವ ಶಂಕೆ ವ್ಯಕ್ತವಾಗುತ್ತಿದೆ. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಹೆಸ್ಕಾಂ ಸಾಕಷ್ಟು ಸಾಮಗ್ರಿಗಳು ಬರುತ್ತಿವೆ. ಆದರೂ, ವಿದ್ಯುತ್ ಅವಘಡಗಳು ಕಡಿಮೆಯಾಗಿಲ್ಲ. ಗುತ್ತಿಗೆ ಆಧಾರಿತ ಸಿಬ್ಬಂದಿಗೆ ಗ್ಲೌಸ್ ಕೂಡ ಸರಿಯಾಗಿ ಕೊಡುತ್ತಿಲ್ಲ. ತೀರಾ ಇತ್ತೀಚೆಗೆ ಪ್ರವಹಿಸುತ್ತಿದ್ದ ವಿದ್ಯುತ್ ಲೈನ್ ಹರಿದು ಬಿದ್ದು ಮೂರು ಜಾನುವಾರು ಮೃತಪಟ್ಟಿವೆ ಎಂದು ಸದಸ್ಯ ದೂರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾಹಿತಿ ನೀಡಿ, ‘ಶಾಲೆಗಳಿಗೆ ಉಚಿತವಾಗಿ ನೀಡುವ 2450 ಹಾಗೂ ಮಾರಾಟದ 600 ಪಠ್ಯಪುಸ್ತಕಗಳು ಬರಬೇಕಾಗಿವೆ. ಸಮವಸ್ತ್ರ ಇನ್ನೂ ಬಂದಿಲ್ಲ. ತಾಲ್ಲೂಕಿಗೆ 2450 ಸೈಕಲ್‌ಗಳು ಬಂದಿವೆ. ಜೋಡಣೆ ಕಾರ್ಯ ನಡೆಯುತ್ತಿದ್ದು, ಒಂದು ತಿಂಗಳಲ್ಲಿ ವಿತರಣೆ ಆರಂಭಿಸಲಾಗುವುದು’ ಎಂದರು.

‘ತಾಲ್ಲೂಕಿನ ಪೂರ್ವಭಾಗದಲ್ಲಿ 2700 ಹೆಕ್ಟೇರ್ ಭತ್ತ ಬಿತ್ತನೆ ಆಗಬೇಕಾಗಿತ್ತು. ಮಳೆಯ ಕೊರತೆಯಿಂದ 1100 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಈ ವರ್ಷ ಈವರೆಗೆ 477 ಮಿ.ಮೀ ಮಳೆಯಾಗಿದೆ. ವಾಡಿಕೆ ಮಳೆ 685 ಮಿ.ಮೀ ಇದ್ದು, ಎಲ್ಲ ಹೋಬಳಿಗಳು ಮಳೆಯ ಕೊರತೆಯನ್ನು ಅನುಭವಿಸುತ್ತಿವೆ’ ಎಂದು ಕೃಷಿ ಅಧಿಕಾರಿ ವಸಂತ ಬೆಳಗಾಂವಕರ ಹೇಳಿದರು.

‘ಜಿಲ್ಲೆಯಾದ್ಯಂತ ಆನ್‌ಲೈನ್ ಮೋಸ ಹೆಚ್ಚುತ್ತಿದೆ. ಇದಕ್ಕಾಗಿ ಭಟ್ಕಳದಲ್ಲಿ ಠಾಣೆಯೊಂದನ್ನು ತೆರೆಯಲಾಗಿದೆ. ಶಿರಸಿ ಹಾಗೂ ಬನವಾಸಿ ಮಾರ್ಗದಲ್ಲಿ ಪೊಲೀಸ್ ಬೀಟ್ ನಡೆಸಲಾಗುತ್ತಿದೆ. ಇದಕ್ಕಾಗಿಯೇ ವಾಟ್ಸ್‌ಆ್ಯಪ್ ಗ್ರೂಪ್ ಮಾಡಲಾಗಿದ್ದು, ಅದರಲ್ಲಿ ಜನರಿಗೆ ಮಾಹಿತಿ ನೀಡಲಾಗುತ್ತದೆ’ ಎಂದು ಪಿಎಸ್‌ಐ ಶಶಿಕುಮಾರ್ ಮಾಹಿತಿ ನೀಡಿದರು.

ಭೈರುಂಬೆ, ಸಹಸ್ರಲಿಂಗ ಭಾಗದಲ್ಲಿ ಸಂಜೆಯ ವೇಳೆಗೆ ಮದ್ಯಸೇವನೆ ಮಾಡಿಕೊಂಡು ಕುಳಿತುಕೊಳ್ಳುವ ಕೆಲ ಯುವಕರು, ಮಹಿಳೆಯರಿಗೆ ಕೀಟಲೆ ನೀಡುತ್ತಿರುವ ಬಗ್ಗೆ ದೂರು ಬಂದಿದೆ ಎಂದು ಶ್ರೀಲತಾ ಕಾಳೇರಮನೆ ಹೇಳಿದರು.

ಜಲಾಮೃತ ಯೋಜನೆಯಡಿ ತಾಲ್ಲೂಕಿನಲ್ಲಿ ಐದು ಕೆರೆಗಳ ಹೂಳೆತ್ತಲಾಗುವುದು ಎಂದು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ರಾಮಚಂದ್ರ ಗಾಂವಕರ ಹೇಳಿದರು. ‘ಸುಪ್ರಸನ್ನ ನಗರದಲ್ಲಿ ಖಾಸಗಿ ಜಾಗದಲ್ಲಿ ₹ 12 ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಜಾಗದ ಮಾಲೀಕರು ಮಣ್ಣು ತೆಗೆದಿರುವುದರಿಂದ ಟ್ಯಾಂಕ್ ಅಪಾಯದಲ್ಲಿದೆ. ಈಗ ಮತ್ತೆ ಇದನ್ನು ಸ್ಥಳಾಂತರಿಸಿದರೆ, ಹೊಸ ಪ್ರಸ್ತಾವ ಸಲ್ಲಿಸಿ, ಅನುದಾನ ಪಡೆಯಬೇಕು. ಸರ್ಕಾರದ ಹಣ ಅನಗತ್ಯವಾಗಿ ನಷ್ಟವಾಗುತ್ತದೆ’ ಎಂದು ಸ್ಥಾಯಿ ಸಮಿತಿ ಸದಸ್ಯ ರವಿ ಹಳದೋಟ ದೂರಿದರು. ಆಯುಷ್ ಇಲಾಖೆಯಡಿ ಐದು ಶಾಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಆಯುಷ್ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ ತಿಳಿಸಿದರು.

ಕಳೆದ ವರ್ಷ ನೀಡಿರುವ ಅಡಿಕೆ ಕೊಳೆ ರೋಗದ ಪರಿಹಾರ ಮೊತ್ತ ಕೆಲವು ಪಂಚಾಯ್ತಿಗಳಿಗೆ ಮಾತ್ರ ಬಂದಿಲ್ಲ. ಕಂದಾಯ ಇಲಾಖೆ ಸಿಬ್ಬಂದಿ ದಾಖಲೆ ಪೂರೈಕೆಯಲ್ಲಿ ಮಾಡಿರುವ ವ್ಯತ್ಯಾಸದಿಂದ ಹೀಗಾಗಿದೆ ಎಂದು ರವಿ ಹಳದೋಟ, ಸದಸ್ಯ ನರಸಿಂಹ ಹೆಗಡೆ ಆರೋಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು