ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಹಾನಿ: ಮುಖ್ಯಮಂತ್ರಿ ಬಳಿಗೆ ನಿಯೋಗ

ಪರಿಹಾರ ಕಾಮಗಾರಿಗಳ ಪರಿಶೀಲನೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ
Last Updated 1 ಅಕ್ಟೋಬರ್ 2019, 14:02 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ನೆರೆಯಿಂದ ಆಗಿರುವ ಹಾನಿಯ ಬಗ್ಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ವಿವರಿಸಲಾಗುವುದು. ಪರಿಹಾರ ಕಾರ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ಬಗ್ಗೆಅವರ ನೇತೃತ್ವದಲ್ಲಿ ನಿರ್ಧರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸಚಿವರಾದ ಬಳಿಕ ಮಂಗಳವಾರ ಇದೇ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿ ಅವರು, ಪ್ರವಾಹದ ಪರಿಹಾರ ಸಂಬಂಧ ಸಭೆ ಹಮ್ಮಿಕೊಂಡರು.

‘ಶತಮಾನದಲ್ಲೇ ಕಂಡು ಕೇಳರಿಯದಂಥ ಪ್ರವಾಹ ಈ ವರ್ಷವಾಗಿದೆ.ಅನುಭವದ ಕೊರತೆಯ ನಡುವೆಯೂ ಪ್ರಾಕೃತಿಕ ವಿಕೋಪವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಸಮರ್ಪಕವಾಗಿ ನಿಭಾಯಿಸಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

ಜನರಿಗೆ ತೊಂದರೆಯಾಗದಿರಲಿ:‘ನೆರೆಯಿಂದ ಹಲವು ಅನಧಿಕೃತ ಮನೆಗಳಿಗೂ ಹಾನಿಯಾಗಿದೆ. ಅವರಿಗೂ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ಗಮನ ಸೆಳೆದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಇದಕ್ಕೆ ಕಾನೂನು ತೊಡಕು ಉಂಟಾಗುತ್ತದೆ.ಒತ್ತುವರಿ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡವರುಜಿಲ್ಲಾಡಳಿತ ತೋರಿಸಿದ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ₹ 5 ಲಕ್ಷ ನೀಡಲಾಗುತ್ತದೆ’ ಎಂದರು.

ಸಚಿವೆ ಶಶಿಕಲಾ ಮಾತನಾಡಿ, ‘ಸಂತ್ರಸ್ತರಿಗೆ ನೋವಾಗಬಾರದು, ಕಾನೂನು ಉಲ್ಲಂಘನೆ ಕೂಡ ಆಗಬಾರದು. ಆ ರೀತಿಯಲ್ಲಿ ಕೆಲಸ ಮಾಡೋಣ’ ಎಂದು ಸಲಹೆ ನೀಡಿದರು.

‘ಭಯದ ಅಗತ್ಯವಿಲ್ಲ’:‘ಒತ್ತುವರಿ ಜಮೀನಿನಲ್ಲಿ ಮನೆಯಿದ್ದವರಿಂದ ಅಫಿಡವಿಟ್ ಪಡೆದುಕೊಂಡು ಅವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಬಹುದು. ಈ ಮೂಲಕ ಅವರಿಗೆ ₹ 5 ಲಕ್ಷ ನೀಡಲು ಅವಕಾಶವಿದೆ.ಅಫಿಡವಿಟ್ ನೀಡಿದರೆ ತಮ್ಮನ್ನು ಮುಂದೊಂದು ದಿನ ತೆರವು ಮಾಡುತ್ತಾರೆ ಎಂಬ ಯಾವುದೇ ಭಯ ಬೇಡ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಮಾತನಾಡಿ, ‘ಈ ಬಾರಿ ಮಳೆ, ನೀತಿ ಸಂಹಿತೆಗಳ ಕಾರಣದಿಂದ ಯಾವುದೇ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ₹ 5 ಲಕ್ಷದ ಒಳಗಿನ ತುರ್ತು ಕಾಮಗಾರಿಗಳನ್ನು ಟೆಂಡರ್ ಕರೆಯದೇ ಮಾಡಲು ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು.

‘ಉನ್ನತ ಮಟ್ಟದ ತನಿಖೆಯಾಗಲಿ’:‘ಕದ್ರಾ ಅಣೆಕಟ್ಟೆಯಿಂದ ಏಕಾಏಕಿ ನೀರು ಬಿಟ್ಟಾಗಲೇ ಗಂಗಾವಳಿ ನದಿಯಲ್ಲೂ ಪ್ರವಾಹವಾಗಿದೆ. ಇಷ್ಟು ವರ್ಷದಲ್ಲಿ ಆಗದ್ದು ಈ ವರ್ಷಯಾಕಾಗಿದೆ? ಈ ಬಗ್ಗೆ ತನಿಖೆಯಾಗಬೇಕು’ ಎಂದು ರೂಪಾಲಿ ನಾಯ್ಕ ಆಗ್ರಹಿಸಿದರು.

ಕೆಪಿಸಿಎಲ್ಅಧಿಕಾರಿಗಳು ಮಾತನಾಡಿ, ‘ತಜ್ಞರ ತಂಡ ಬಂದು ಅಣೆಕಟ್ಟೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದು,ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಅವರು ಸೂಚಿಸಿದಂತೆ ನಿರ್ವಹನೆ ಮಾಡುತ್ತಿದ್ದೇವೆ’ ಎಂದರು.

ಇದೇವೇಳೆ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ‘ಅಣೆಕಟ್ಟೆಗಳಿರುವ ಪ್ರದೇಶದ ನದಿಪಾತ್ರದ ಗ್ರಾಮಗಳಲ್ಲಿ ನದಿಗೆ ನೀರು ಹರಿಸುವ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಕೆಪಿಸಿಎಲ್ ಅಳವಡಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶದೇವರಾಜು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT