ಮಾರುಕಟ್ಟೆಗೆ ಬಂತು ‘ಗುಜ್ಜೆ ಹಲಸು’

ಶುಕ್ರವಾರ, ಮೇ 24, 2019
23 °C
ಕದಂಬ ಮಾರ್ಕೆಟಿಂಗ್‌ನಲ್ಲಿ ಲಭ್ಯ

ಮಾರುಕಟ್ಟೆಗೆ ಬಂತು ‘ಗುಜ್ಜೆ ಹಲಸು’

Published:
Updated:
Prajavani

ಶಿರಸಿ: ಹಿತ್ತಲಿನಲ್ಲಿ ಬೆಳೆಯುತ್ತಿದ್ದ ಹಲಸಿನ ಕಾಯಿಯನ್ನು ಮನೆಗೆ ತಂದು, ಕೈಗೆ ಮೇಣ ಮೆತ್ತಿಕೊಂಡು ಬಿಡಿಸುವುದು ತುಸು ರಗಳೆಯ ಕೆಲಸ. ಇದನ್ನು ಸುಲಭಗೊಳಿಸಲು ಉದ್ಯಮಿಯೊಬ್ಬರು ಹಲಸಿನ ಗುಜ್ಜೆ ‘ರೆಡಿ ಟು ಕುಕ್’ ಪ್ಯಾಕ್ ಅನ್ನು ಸಿದ್ಧಪಡಿಸಿದ್ದಾರೆ.

ವ್ಯಾಕ್ಯೂಮ್ ಫ್ರೈಡ್ ಚಿಪ್ಸ್‌ ಸಿದ್ಧಪಡಿಸುವ ಮಾವಿನಕೊಪ್ಪದ ಮಂಜುನಾಥ ಹೆಗಡೆ ಅವರು, ಹಲಸಿನ ಗುಜ್ಜೆಯನ್ನು ನೀಟಾಗಿ ಪ್ಯಾಕ್ ಮಾಡಿ, ಇದಕ್ಕೊಂದು ವಾಣಿಜ್ಯಿಕ ಸ್ವರೂಪ ನೀಡಿದ್ದಾರೆ. ಕದಂಬ ಮಾರ್ಕೆಟಿಂಗ್‌ನಲ್ಲಿ ಈ ಎಳೆ ಹಲಸಿನ ಪ್ಯಾಕ್‌ಗಳು ಸಿಗುತ್ತವೆ.

‘ಹಲಸಿಗೆ ಮೇಣವೇ ದೊಡ್ಡ ಶತ್ರು. ಮೇಣದ ಕಾರಣಕ್ಕಾಗಿ ಅನೇಕರು ಹಲಸಿನ ಕಾಯಿಯನ್ನು ತಂದು, ಬಿಡಿಸಲು ಬೇಸರಿಸಿಕೊಳ್ಳುತ್ತಾರೆ. ಅದಕ್ಕಾಗಿ ಬಿಡಿಸಿದ ಹಲಸಿನ ಕಾಯಿಯನ್ನೇ ಮಾರಾಟಕ್ಕಿಟ್ಟರೆ, ಅಡುಗೆ ಮಾಡುವ ಗೃಹಿಣಿಯರಿಗೆ ಅನುಕೂಲವಾಗಬಹುದೆಂಬ ಯೋಚನೆ ಬಂತು. ಜತೆಗೆ ಈ ಹಿಂದೆ ಶಿರಸಿಯಲ್ಲಿ ನಡೆದ ಅನೇಕ ಹಲಸಿನ ಮೇಳಗಳಲ್ಲಿ ಗುಜ್ಜೆ ಹಲಸಿಗೆ ಬೇಡಿಕೆ ಅಧಿಕವಾಗಿತ್ತು. ಇವೆರಡೂ ಕಾರಣಗಳು ಗುಜ್ಜೆ ಹಲಸು ಮಾರಾಟಕ್ಕಿಡಲು ಪ್ರೇರಣೆಯಾಯಿತು’ ಎನ್ನುತ್ತಾರೆ ಮಂಜುನಾಥ ಹೆಗಡೆ. 

‘ಯಾವುದೇ ರಾಸಾಯನಿಕ ಬಳಸದೇ ಎಳೆ ಹಲಸನ್ನು ಪ್ಯಾಕ್ ಮಾಡುತ್ತೇವೆ. ಕಡಿ ಮಾಡಿದ ಹಲಸು ಕಂದುಬಣ್ಣಕ್ಕೆ ತಿರುಗುತ್ತದೆ. ಇದನ್ನು ತಪ್ಪಿಸಲು ಅದಕ್ಕೆ ಲಿಂಬು ರಸ ಹಚ್ಚಿ ಪ್ಯಾಕ್ ಮಾಡುತ್ತೇವೆ. ವ್ಯಾಕ್ಯೂಮ್ ಫ್ರೈಡ್ ಚಿಪ್ಸ್ ಮಾಡುವ ಸಂದರ್ಭದಲ್ಲಿ ಖರೀದಿಸಿದ್ದ ಫ್ರೀಝರ್ ಕೆಲವೇ ತಿಂಗಳು ಮಾತ್ರ ಬಳಕೆಯಾಗುತ್ತದೆ. ಈಗ ಗುಜ್ಜೆ ಹಲಸನ್ನು ಅದರಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು’ ಎನ್ನುತ್ತಾರೆ ಅವರು.

‘ಕದಂಬ ಮಾರ್ಕೆಟಿಂಗ್‌ನಲ್ಲೂ ಒಂದು ಫ್ರೀಝರ್ ಇದ್ದು, ಅಲ್ಲಿಯೂ ಎಳೆ ಹಲಸನ್ನು ಸಂಗ್ರಹಿಸಿಡುತ್ತೇವೆ. –18 ಡಿಗ್ರಿ ತಾಪಮಾನದಲ್ಲಿ ಒಂದು ವರ್ಷದವರೆಗೂ ಇದನ್ನು ಸಂಗ್ರಹಿಸಿಡಲು ಸಾಧ್ಯವಿದೆ. 200 ಗ್ರಾಂ ಪ್ಯಾಕ್‌ಗೆ ₹ 20, ಅರ್ಧ ಕೆ.ಜಿ ಪ್ಯಾಕ್‌ಗೆ ₹ 40 ದರ ನಿಗದಿಪಡಿಸಲಾಗಿದೆ. ದೊಡ್ಡ ಪ್ರಮಾಣದ ಬೇಡಿಕೆಯಿದ್ದಲ್ಲಿ ಮುಂಚಿತವಾಗಿ ತಿಳಿಸಿದರೆ, ಪೂರೈಕೆ ಮಾಡಲಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !