ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪು ನೀರು ತಡೆಗೆ ₹300 ಕೋಟಿ: ಬಜೆಟ್‌ನಲ್ಲಿ ಯೋಜನೆ ಘೋಷಣೆ

ಜಿಲ್ಲೆಯ ಕರಾವಳಿಯ ಬಹುದಿನಗಳ ಬೇಡಿಕೆಗೆ ಬಜೆಟ್‌ನಲ್ಲಿ ಯೋಜನೆ ಘೋಷಣೆ
Last Updated 8 ಮಾರ್ಚ್ 2021, 14:58 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಕರಾವಳಿಯ ಬಹುದಿನಗಳ ಬೇಡಿಕೆಯಾಗಿರುವ ಉಪ್ಪು ನೀರು ತಡೆಗೆ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಕೊನೆಗೂ ಮನಸ್ಸು ಮಾಡಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ಅದಕ್ಕಾಗಿ ₹ 300 ಕೋಟಿ ಘೋಷಿಸಿದ್ದಾರೆ.

ಕರಾವಳಿಯಲ್ಲಿ ಭಾರಿ ಪ್ರವಾಹವಾದಾಗ, ಸಮುದ್ರದಲ್ಲಿ ದೊಡ್ಡ ಅಲೆಗಳು ಅಪ್ಪಳಿಸಿದಾಗ, ಬೇಸಿಗೆಯಲ್ಲಿ ನದಿ ನೀರಿನ ಹರಿವು ಕಡಿಮೆಯಾದಾಗ ಉಪ್ಪು ನೀರು ಹಿಮ್ಮುಖವಾಗಿ ಹರಿಯುತ್ತದೆ. ಇದರಿಂದ ಕಡಲ ಕಿನಾರೆಯಿಂದ ಹತ್ತಾರು ಕಿಲೋಮೀಟರ್ ದೂರದವರೆಗೂ ಜಲಮೂಲಗಳಲ್ಲಿ ನೀರು ಬಳಕೆಗೆ ಸಿಗದಂತಾಗುತ್ತಿದೆ. ಅಲ್ಲದೇ ಸಾವಿರಾರು ಎಕರೆ ಕೃಷಿ ಭೂಮಿ ಬರಡಾಗುತ್ತಿದೆ. ಕಾರವಾರ ಮತ್ತು ಕುಮಟಾ ತಾಲ್ಲೂಕಿನಲ್ಲಿ ಈ ಸಮಸ್ಯೆ ಮಿತಿಮೀರಿದೆ.

ಇದನ್ನು ತಡೆಯಲು ಯೋಜನೆ ರೂಪಿಸಬೇಕು ಎಂದು ಜಿಲ್ಲೆಯ ನಾಗರಿಕರು ಜನಪ್ರತಿನಿಧಿಗಳ ಮೇಲೆ ನಿರಂತರ ಒತ್ತಡ ಹೇರುತ್ತಿದ್ದರು. ಮುಖ್ಯಮಂತ್ರಿ ಪ್ರಕಟಿಸಿದ, ‘ಫ್ಲ್ಯಾಪ್ ಗೇಟ್’ ಮೂಲಕ ‘ಖಾರ್ಲ್ಯಾಂಡ್ ಯೋಜನೆ’ಯ ಸ್ವರೂಪ ಹೇಗಿರುತ್ತದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ದಶಕಗಳ ಈ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಮನ್ನಣೆ ನೀಡಿರುವುದು ಜನರ ಸಂತಸಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕುಮಟಾ ತಾಲ್ಲೂಕಿನ ತುಂಬ್ಲೆಕಟ್ಟ ಹಾರನಗಜನಿಯ ಅಧ್ಯಕ್ಷ ಜಗನ್ನಾಥ ನಾಯ್ಕ, ‘ಅಘನಾಶಿನಿ ಹಿನ್ನೀರಿನಲ್ಲಿ ಏಳು ಕಿಲೋಮೀಟರ್‌ ಗಜನಿಗೆ ₹ 32 ಕೋಟಿ ವಿಶ್ವಬ್ಯಾಂಕ್ ನೆರವಿನಿಂದ ಮಂಜೂರಾಗಿದ್ದು, ಕಾಮಗಾರಿ ಶುರುವಾಗಿದೆ. ರಾಜ್ಯ ಸರ್ಕಾರ ಘೋಷಿಸಿದ ಹಣ ಇತರ ಕಾಮಗಾರಿಗಳಿಗೆ ನೆರವಾಗಲಿದೆ. ಇದನ್ನು ಜಾರಿ ಮಾಡುವ ಸಂದರ್ಭದಲ್ಲಿ ಸ್ಥಳೀಯ ರೈತರ ಜೊತೆ ಚರ್ಚಿಸುವುದು ಅಗತ್ಯ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪರಿಸರ ಪ್ರವಾಸೋದ್ಯಮ:

ಅಂಕೋಲಾದ ಸೀಬರ್ಡ್‌ ನೌಕಾ ವಾಯುನೆಲೆ ಸಮೀಪ ‘ಸಿವಿಲ್ ಎನ್‌ಕ್ಲೇವ್’ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಅದೇರೀತಿ, ತದಡಿಯಲ್ಲಿ 1,000 ಎಕರೆಗಳ ಪರಿಸರ ಪ್ರವಾಸೋದ್ಯಮ ಉದ್ಯಾನ ಅಭಿವೃದ್ಧಿಯನ್ನೂ ಘೋಷಿಸಿದ್ದು, ಅನುದಾನ ಮತ್ತು ಇತರ ಮಾಹಿತಿಗಳು ಕುತೂಹಲ ಮೂಡಿಸಿವೆ.

ಹಲವು ದಿನಗಳಿಂದ ಸುದ್ದಿಯಲ್ಲಿರುವ ಹೊನ್ನಾವರದ ಕಾಸರಕೋಡು ಬಂದರು ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿ 66ರಿಂದ ‘ಭಾರತಮಾಲಾ ಯೋಜನೆ’ಯಡಿ ಚತುಷ್ಪಥ ಸಂಪರ್ಕ ರಸ್ತೆ ನಿರ್ಮಿಸುವುದಾಗಿ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. ಇದಕ್ಕೆ ಅಂದಾಜು ₹ 100 ಕೋಟಿಯನ್ನು ಪ್ರಕಟಿಸಿದ್ದಾರೆ.

ನದಿ ಜೋಡಣೆಗೆ ಒಲವು:

ಬೇಡ್ತಿ ಮತ್ತು ವರದಾ ನದಿಗಳನ್ನು ಜೋಡಿಸಿದಾಗ ಲಭಿಸುವ 22 ಟಿ.ಎಂ.ಸಿ ಅಡಿ ನೀರನ್ನು ಬಳಸಿಕೊಳ್ಳಲು ಸಿದ್ಧತೆ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ‘ರಾಷ್ಟ್ರೀಯ ಮುನ್ನೋಟ ಯೋಜನೆ’ಯಡಿವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ‘ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಏಜೆನ್ಸಿ’ಗೆ ಮನವಿ ಮಾಡಲಿದೆ.

ಬಳಿಕ ತಾಂತ್ರಿಕ ಸಾಧ್ಯಾಸಾಧ್ಯತೆಗಳಿಗೆ ಅನುಗುಣವಾಗಿ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಯೋಜನೆಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಸರ್ಕಾರದ್ದಾಗಿದೆ.

ಜಿಲ್ಲೆಗೆ ಸಂಬಂಧಿಸಿದವು...:

* ಕಾಲುಸಂಕ ನಿರ್ಮಿಸಲು ‘ಗ್ರಾಮಬಂಧ ಸೇತುವೆ’ ಯೋಜನೆಗೆ ₹ 100 ಕೋಟಿ

* ಮೂಲ ಗೇಣಿದಾರರು, ಕುಮ್ಕಿ ಜಮೀನು, ಖಾನೇ, ಬಾನೇ, ಸ್ವಾಯತ್ತ ಅರಣ್ಯ ಸಾಗುವಳಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆ

* ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಮರು ‍ಪಾವತಿಸುವ ಬದಲು ತೆರಿಗೆ ರಹಿತವಾಗಿಯೇ ವಿತರಣೆ

* ‘ಪ್ರಧಾನಮಂತ್ರಿ ಮತ್ಸ್ಯ ಸಂಪದ’ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ₹ 62 ಕೋಟಿ ಅನುದಾನ

* ರಾಜ್ಯದಾದ್ಯಂತ ₹ 30 ಕೋಟಿ ವೆಚ್ಚದಲ್ಲಿ ಮೀನು ಮಾರಾಟ ಘಟಕಗಳು ಹಾಗೂ ಮತ್ಸ್ಯ ದರ್ಶಿನಿಗಳ ಸ್ಥಾಪನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT