ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಗ್ರಾಮಕ್ಕೆ ನೆಟ್‌ವರ್ಕ್ ಸಮಸ್ಯೆ!

ಕಾರವಾರದ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಗದ ಮೊಬೈಲ್ ಫೋನ್ ಸಿಗ್ನಲ್
Last Updated 5 ಅಕ್ಟೋಬರ್ 2020, 14:55 IST
ಅಕ್ಷರ ಗಾತ್ರ

ಕಾರವಾರ: ಈ ಗ್ರಾಮಗಳಲ್ಲಿ ಆನ್‌ಲೈನ್ ತರಗತಿಗಾಗಿ ಕೆಲವು ವಿದ್ಯಾರ್ಥಿಗಳು ಬೆಳಿಗ್ಗೆ ತಮ್ಮ ಊರಿನಿಂದ ಐದಾರು ಕಿ.ಮೀ ನಡೆದುಕೊಂಡು ಬರುತ್ತಾರೆ. ಮತ್ತೆ ಕೆಲವರು ಸೈಕಲ್ ತುಳಿಯುತ್ತಾರೆ. ಗ್ರಾಮ ಕೇಂದ್ರ ತಲುಪಿದ ಬಳಿಕ ಅಲ್ಲಿನ ಬಸ್ ತಂಗುದಾಣ, ಅಂಗಡಿ, ತಮ್ಮ ಸ್ನೇಹಿತರ ಮನೆಯಲ್ಲಿ ಕುಳಿತು ಪಾಠ ಕೇಳಿಸಿಕೊಳ್ಳುತ್ತಾರೆ.

ಮೊಬೈಲ್ ನೆಟ್‌ವರ್ಕ್‌ನಿಂದ ವಂಚಿತವಾಗಿರುವ ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗೆ, ಶಿರ್ವೆ, ಹಾಗೂ ಕೋವೆ ಗ್ರಾಮಗಳ ವಿದ್ಯಾರ್ಥಿಗಳು ನಿತ್ಯವೂ ಅನುಭವಿಸುತ್ತಿರುವ ಗೋಳು ಇದು.

ಕಾರವಾರದಿಂದ 28 ಕಿ.ಮೀ ದೂರದಲ್ಲಿರುವ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂಟು ಗ್ರಾಮಗಳಿವೆ. ಅವುಗಳಲ್ಲಿ ಐದು ಗ್ರಾಮಗಳಿಗೆ ನೆಟ್‌ವರ್ಕ್ ಸಂಪರ್ಕವಿದೆ. ಆದರೆ, ದೇವಳಮಕ್ಕಿ ಸಮೀಪವೇ ಇರುವ ನಗೆ, ಶಿರ್ವೆ, ಕೋವೆ ಗ್ರಾಮಗಳಿಗೆ ಈವರೆಗೆ ಸಂಪರ್ಕ ಏರ್ಪಟ್ಟಿಲ್ಲ.

ಅನಿವಾರ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಈ ಗ್ರಾಮಸ್ಥರು ಬಹಳ ತೊಂದರೆ ಎದುರಿಸುತ್ತಿದ್ದಾರೆ. ದೇವಳಮಕ್ಕಿ ಗ್ರಾಮದಲ್ಲೂ ಬಿ.ಎಸ್.ಎನ್.ಎಲ್ ಹೊರತಾಗಿ ಯಾವುದೇ ನೆಟ್‌ವರ್ಕ್‌ ಪೂರೈಕೆದಾರರ ಟವರ್‌ಗಳಿಲ್ಲ. ಮೂರು ಗ್ರಾಮಗಳಲ್ಲಿ ಒಟ್ಟು 260 ಮನೆಗಳಿದ್ದು, 1,500ಕ್ಕಿಂತ ಹೆಚ್ಚು ಜನರಿದ್ದಾರೆ. 150ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಆನ್‌ಲೈನ್ ತರಗತಿಗೆ ಕೂಡ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಸುತ್ತಮುತ್ತ ಚಾರಣಕ್ಕೆ ಸೂಕ್ತವಾದ ಹಲವು ಗುಡ್ಡಗಳಿವೆ. ಹಾಗಾಗಿ ಪ್ರವಾಸಿಗರೂ ಬರುತ್ತಿರುತ್ತಾರೆ. ಆದರೆ, ಅವರಿಗೆ ಮೊಬೈಲ್ ನೆಟ್‌ವರ್ಕ್ ಸಿಗದೇ ಸಮಸ್ಯೆಯಾದ ಉದಾಹರಣೆಗಳಿವೆ. ಈ ಎಲ್ಲ ಕಾರಣಗಳಿಂದ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಅಭಿವೃದ್ಧಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.

‘ಶೈಕ್ಷಣಿಕ ಪ್ರಗತಿಗೆ ಹಿನ್ನಡೆ’:

‌‘ಈ ಮೂರೂ ಗ್ರಾಮಗಳ ಪಾಲಕರು ಬಡತನದ ನಡುವೆಯೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಹಿಂದೇಟು ಹಾಕಿಲ್ಲ. ಆನ್‌ಲೈನ್ ತರಗತಿಗಾಗಿ ಮಕ್ಕಳಿಗೆ ಸಾವಿರಾರು ರೂಪಾಯಿ ವ್ಯಯಿಸಿ ಹೊಸ ಮೊಬೈಲ್ ಫೋನ್‌ಗಳನ್ನು ಖರೀದಿಸಿ ಕೊಟ್ಟಿದ್ದಾರೆ. ಆದರೆ, ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಬಾರದ ಕಾರಣ ಮೊಬೈಲ್ ಫೋನ್ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಹಿನ್ನಡೆಯಾಗುತ್ತಿದೆ’ ಎಂದು ದೇವಳಮಕ್ಕಿಯ ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್ ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT