ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರಣ್ಯ ರಕ್ಷಣೆ ಎಲ್ಲರ ಜವಾಬ್ದಾರಿ’

ಸಾಲುಮರದ ತಿಮ್ಮಕ್ಕ ಉದ್ಯಾನ ಉದ್ಘಾಟನೆ
Last Updated 30 ನವೆಂಬರ್ 2020, 16:29 IST
ಅಕ್ಷರ ಗಾತ್ರ

ಅಂಕೋಲಾ: ಅರಣ್ಯ ಕೇವಲ ಇಲಾಖೆಯ ಸ್ವತ್ತಲ್ಲ, ಅದು ತೆರೆದ ಖಜಾನೆ. ಇಂತಹ ಅರಣ್ಯ ರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದು ಸಚಿವ ಶಿವರಾಮ್ ಹೆಬ್ಬಾರ ಹೇಳಿದರು.

ಅರಣ್ಯ ಇಲಾಖೆ ವತಿಯಿಂದ ತಾಲೂಕಿನ ಹುಲಿದೇವರವಾಡದ ಬಳಿ ನಿರ್ಮಿಸಿದ ಸಾಲುಮರದ ತಿಮ್ಮಕ್ಕ ಉದ್ಯಾನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಮನುಷ್ಯರ ದುರಾಸೆಯಿಂದಾಗಿ ಅರಣ್ಯ ಸಂಪತ್ತು ಕಡಿಮೆಯಾಗುತ್ತಿದ್ದು, ಸಮತೋಲನ ತಪ್ಪುತ್ತಿದೆ. ಜಿಲ್ಲೆಯ ಜನರು ತಮ್ಮ ಮತ್ತು ಮಕ್ಕಳ ಜನ್ಮದಿನದಂದು ಒಂದೊಂದು ಗಿಡವನ್ನು ನೆಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ತಮ್ಮ ಮಕ್ಕಳ ಮೇಲಿನ ಪ್ರೀತಿಗೆ ಪೋಷಕರು ಗಿಡದ ಪೋಷಣೆಯನ್ನು ಸಹಜವಾಗಿ ಮಾಡುತ್ತಾರೆ. ಈ ಮೂಲಕ ಜಿಲ್ಲೆಯ ಜನರು ಅರಣ್ಯ ರಕ್ಷಣೆಯ ಹೊಸ ಪದ್ಧತಿಗೆ ನಾಂದಿ ಹಾಡಬೇಕು ಎಂದರು.

ಅರಣ್ಯ ಸಚಿವ ಆನಂದ ಸಿಂಗ್ ಹೊಸ ಹೊಸ ಯೋಜನೆ ರೂಪಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಕಾನೂನಿನ ಇತಿಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ ನಿಯಮಗಳನ್ನು ಪಾಲಿಸುವುದಷ್ಟೇ ಅಲ್ಲ, ಪ್ರೀತಿ ವಿಶ್ವಾಸದಿಂದ ಜನರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಬೇಕು. ಅರಣ್ಯ ರಕ್ಷಣೆಯ ಜವಾಬ್ದಾರಿಯನ್ನು ಜಂಟಿಯಾಗಿ ನಿಭಾಯಿಸಬೇಕು ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ತಾಲ್ಲೂಕಿನ ಉದ್ಯಾನದ ಕನಸು ನನಸಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ಅರಣ್ಯ ಇಲಾಖೆಯವರ ಸಹಕಾರ ಅಗತ್ಯವಿದೆ. ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರ ಹೆಸರನ್ನು ಉದ್ಯಾನವನಕ್ಕೆ ಇಡುವುದು ಸೂಕ್ತ ಎನ್ನುವ ಸ್ಥಳೀಯರ ಅಭಿಪ್ರಾಯ ಗಮನಕ್ಕೆ ಬಂದಿದೆ. ಸರ್ಕಾರದಿಂದ ರಾಜ್ಯದಾದ್ಯಂತ ಸಾಲುಮರದ ತಿಮ್ಮಕ್ಕ ಉದ್ಯಾನವನ ಅರಣ್ಯ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿದೆ ಎಂದರು.

ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ್ ಮಾತನಾಡಿ, ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ, ಅರಣ್ಯ ಅಧಿಕಾರಿ ಸುರೇಶ್ ನಾಯ್ಕ್ ಹಾಗೂ ಇಲಾಖೆಯ ಸಿಬ್ಬಂದಿ ಪರಿಶ್ರಮದಿಂದ ಅಸಾಧ್ಯವಾದ ಪ್ರದೇಶದಲ್ಲಿ ಸುಂದರ ಉದ್ಯಾನವನ ನಿರ್ಮಾಣವಾಗಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತ ಗಾಂವಕರ, ಪುರಸಭೆ ಸದಸ್ಯ ಜಗದೀಶ ನಾಯಕ, ರಾಜ್ಯ ಮೀನುಗಾರ ಪ್ರಕೋಷ್ಠದ ಸಂಚಾಲಕ ಗಣಪತಿ ಉಳ್ವೇಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT