ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಗೆಡ್ಡೆ, ಗೆಣಸು ಮೇಳದ ಸಂಭ್ರಮ: ಜೊಯಿಡಾದಲ್ಲಿ 5ರಂದು ಆಯೋಜನೆ

ಜೊಯಿಡಾದಲ್ಲಿ 5ರಂದು ಆಯೋಜನೆ; ವಿವಿಧ ಪಾರಂಪರಿಕವಾಗಿ ಬೆಳೆದ ವಿವಿಧ ತಳಿಗಳ ಸಂರಕ್ಷಣೆಯ ಮಾಹಿತಿ
Last Updated 2 ಜನವರಿ 2022, 4:42 IST
ಅಕ್ಷರ ಗಾತ್ರ

ಜೊಯಿಡಾ: ಸತತ ಏಳು ವರ್ಷ ಯಶಸ್ವಿಯಾಗಿ ನಡೆದ ಜೊಯಿಡಾದ ‘ಗೆಡ್ಡೆ ಗೆಣಸು’ ಮೇಳದ ಸಂಭ್ರಮ ಮತ್ತೆ ಬಂದಿದೆ. ತಾಲ್ಲೂಕಿನ ಕುಣಬಿ ಅಭಿವೃದ್ಧಿ ಸಂಘ ಹಾಗೂ ಕುಂಬಾರವಾಡದ ಕಾಳಿ ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ಜ.5ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆಯಾಗಲಿದೆ.

ಪ್ರತಿ ವರ್ಷ ಜನವರಿಯಲ್ಲಿ ಮೇಳವು ಹಲವು ವೈಶಿಷ್ಟ್ಯಗಳಿಂದ ಕೂಡಿರುತ್ತದೆ. ಗೆಡ್ಡೆ, ಗೆಣಸುಗಳ ಪ್ರದರ್ಶನ ಮತ್ತು ಮಾರಾಟ, ಅವುಗಳಿಂದ ಸಿದ್ದಪಡಿಸಿಲಾದ ರುಚಿಯಾದ ತಿನಿಸುಗಳು ಅಲ್ಲಿರುತ್ತವೆ. ಕುಣಬಿ ಬುಡಕಟ್ಟು ಸಮುದಾಯದವರು ವಿವಿಧ ಪಾರಂಪರಿಕವಾಗಿ ಬೆಳೆದ ವಿವಿಧ ಜಾತಿಯ ತಳಿಗಳ ಸಂರಕ್ಷಣೆಯ ಮಾಹಿತಿಯನ್ನು ಈ ವೇಳೆ ನೀಡಲಾಗುತ್ತದೆ.

ಮೇಳ ಆಯೋಜನೆಯ ಪೂರ್ವದಲ್ಲಿ ಕೇವಲ ಮನೆ ಬಳಕೆಗೆ ಸೀಮಿತವಾಗಿದ್ದ ಜೊಯಿಡಾದ ಗೆಡ್ಡೆ, ಗೆಣಸುಗಳನ್ನು ಇತ್ತೀಚೆಗೆ ಆದಾಯದ ಉದ್ದೇಶದಿಂದ ಬೆಳೆಯಲಾಗುತ್ತಿದೆ. ಹೊರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದಿದೆ.

ಪ್ರತಿ ವರ್ಷಕ್ಕೊಮ್ಮೆ ನಡೆಯುವ ಈ ಮೇಳಕ್ಕೆ ರಾಜ್ಯದ ಹಾಗೂ ನೆರೆಯ ರಾಜ್ಯಗಳ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಸಂಶೋಧಕರು ಭೇಟಿ ನೀಡುತ್ತಾರೆ. ಅವರಲ್ಲಿರುವ ಮಾಹಿತಿಗಳನ್ನು ರೈತರಿಗೆ ನೀಡಿ, ಸ್ಥಳೀಯ ರೈತರ ಅನುಭವಗಳನ್ನು ಗುರುತಿಸಿಕೊಳ್ಳುತ್ತಾರೆ.

ಮೇಳ ಆಯೋಜನೆಯ ವರ್ಷದಿಂದಲೂ ರೈತರಿಗೆ ಸ್ಪರ್ಧೆಗಳಿದ್ದು ಗೆಡ್ಡೆ, ಗೆಣಸುಗಳ ಪ್ರಭೇದಗಳು, ಅವುಗಳ ಗಾತ್ರಕ್ಕೆ ಹಾಗೂ ಆಕಾರಕ್ಕೆ ಅನುಗುಣವಾಗಿ ಪ್ರಥಮ ಮೂರು ಬಹುಮಾನಗಳನ್ನು ನೀಡಲಾಗುತ್ತದೆ.

ಈ ಬಾರಿ ಮೇಳದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರೈಸ್ತರಾಜು.ಡಿ ಹಾಗೂ ಕೃಷಿ ವಿಜ್ಞಾನಿ ಬಾಲಚಂದ್ರ ಹೆಗಡೆ ಸಾಯಿಮನೆ ಭಾಗವಹಿಸಲಿದ್ದಾರೆ.

₹ 3 ಲಕ್ಷ ವ್ಯಾಪಾರ

ಕಳೆದ ವರ್ಷದ ಮೇಳದಲ್ಲಿ 172 ರೈತರು ಭಾಗವಹಿಸಿ 52 ವಿವಿಧ ಜಾತಿಯ ಗೆಡ್ಡೆ ಗೆಣಸುಗಳ ಪ್ರದರ್ಶನ ಮತ್ತು ಮಾರಾಟವಾಗಿತ್ತು. ಸುಮಾರು ₹ 3 ಲಕ್ಷ ಮೌಲ್ಯದ ಗೆಡ್ಡೆ ಗೆಣಸುಗಳು ಮಾರಾಟವಾಗಿದ್ದವು.

200ಕ್ಕೂ ಅಧಿಕ ರೈತರ ನಿರೀಕ್ಷೆ:

‘ಪ್ರತಿ ವರ್ಷ ಗೆಡ್ಡೆ ಗೆಣಸು ಮೇಳ ಆಯೋಜನೆ ಆಗುವುದರಿಂದ ತಾಲ್ಲೂಕಿನಲ್ಲಿ ಗೆಡ್ಡೆ ಗೆಣಸುಗಳನ್ನು ಬೆಳೆಯುವ ಪ್ರದೇಶ ಹಾಗೂ ರೈತರ ಪ್ರಮಾಣ ಅಧಿಕವಾಗಿದೆ. ಮೊದಲು ಕೇವಲ ಮನೆ ಬಳಕೆಗೆ ಸೀಮಿತವಾಗಿದ್ದ ಗೆಡ್ಡೆ ಗೆಣಸುಗಳನ್ನು ಇಂದು ಮಾರಾಟ ಮಾಡಿ ಆದಾಯ ಗಳಿಸುವ ಉದ್ದೇಶದಿಂದ ಬೆಳೆಯಲಾಗುತ್ತಿದೆ. ಈ ವರ್ಷ ಮೇಳದಲ್ಲಿ 200ಕ್ಕೂ ಅಧಿಕ ರೈತರು ಭಾಗವಹಿಸುವ ನಿರೀಕ್ಷೆ ಇದೆ. ವರ್ಷದಿಂದ ವರ್ಷಕ್ಕೆ ಗೆಡ್ಡೆ ಗೆಣಸು ಮೇಳಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತದೆ’ ಎಂದು ಕಾರ್ಯಕ್ರಮದ ಸಂಘಟಕ ಡಾ. ಜಯಾನಂದ ಡೇರೆಕರ ಸಂತಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT