ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್ಸಿ | ಪರಿಣಾಮಕಾರಿ ಓದು ಯಶಸ್ಸಿನ ಗುಟ್ಟು; 213ನೇ ರ‍್ಯಾಂಕ್ ಪಡೆದ ಮನೋಜ್

Last Updated 30 ಮೇ 2022, 19:30 IST
ಅಕ್ಷರ ಗಾತ್ರ

ಶಿರಸಿ: ‘ಯುಪಿಎಸ್ಸಿ ಪರೀಕ್ಷೆ ಪಾಸು ಮಾಡುವ ಕನಸು ಬಾಲ್ಯದಲ್ಲೇನೂ ಇರಲಿಲ್ಲ. ಪಿಯುಸಿ ಹಂತ ದಾಟಿದ ಮೇಲೆ ಕನಸು ಕಟ್ಟಿಕೊಂಡೆ. ಪರಿಣಾಮಕಾರಿ ಓದಿನ ಮೂಲಕ ಯಶಸ್ಸು ಸಾಧ್ಯವಾಯಿತು’.

ಹೀಗೆಂದವರು 2021ನೇ ಸಾಲಿನ ಭಾರತೀಯ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯಲ್ಲಿ (ಯುಪಿಎಸ್ಸಿ) ದೇಶಕ್ಕೆ 213ನೇ ರ‍್ಯಾಂಕ್ ಗಳಿಸಿದ, 29ರ ಹರೆಯದ ಶಿರಸಿಯ ಮನೋಜ್ ಹೆಗಡೆ. ಅವರ ತಂದೆ ರಾಮನಾಥ ಹೆಗಡೆ, ತಾಯಿ ಗೀತಾ ಹೆಗಡೆ ಸಿದ್ದಾಪುರ ತಾಲ್ಲೂಕು ಹಣಗಾರ ಗ್ರಾಮದ ಮೂಲದವರು. ಪ್ರಸ್ತುತ ಶಿರಸಿ ನಗರದಲ್ಲಿ ನೆಲೆಸಿದ್ದಾರೆ.

‘ನನಗೆ ಲಭಿಸಿದ ರ‍್ಯಾಂಕ್‍ಗೆ ಐ.ಪಿ.ಎಸ್ ಹುದ್ದೆ ಸಿಗುವ ನಿರೀಕ್ಷೆ ಇದೆ. ದೇಶದ ಯಾವುದೇ ಭಾಗದಲ್ಲೂ ಕೆಲಸ ಮಾಡಲು ಸಿದ್ಧನಿದ್ದೇನೆ’ ಎಂದರು.

‘ಯುಪಿಎಸ್ಸಿ ಪರೀಕ್ಷೆ ಎಂದ ಕೂಡಲೆ ದಿನಕ್ಕೆ ಹೆಚ್ಚು ತಾಸು ಓದಬೇಕು ಎಂಬುದು ತಪ್ಪು ಕಲ್ಪನೆ. ಓದುವ ವೇಳೆಗಿಂತ ಓದುವ ರೀತಿ ಮುಖ್ಯ. ಇದನ್ನು ಗಮನದಲ್ಲಿಟ್ಟು ಪದವಿ ಹಂತದಲ್ಲಿ ದಿನಕ್ಕೆ ಎಂಟು ತಾಸು ಓದಲು ಆರಂಭಿಸಿದೆ. ಓದಿದ ವಿಷಯಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಂಡರೆ ಇದಕ್ಕಿಂತಲೂ ಕಡಿಮೆ ಸಮಯ ಓದಿದರೂ ಸಾಕು’ ಎಂದರು.

‘ಕೃಷಿ ವಿಜ್ಞಾನ ಪದವೀಧರನಾದ ಬಳಿಕ 2015ರಲ್ಲಿ ಕೆ.ಎ.ಎಸ್ ಪರೀಕ್ಷೆ ಬರೆದಿದ್ದೆ. 2016, 2017, 2019ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದೆ. 2017ರಲ್ಲಿ 12 ಅಂಕದಿಂದ, 2019ರಲ್ಲಿ ಕೇವಲ ಮೂರು ಅಂಕದಲ್ಲಿ ಉತ್ತೀರ್ಣನಾಗುವ ಅವಕಾಶ ಕಳೆದುಕೊಂಡಿದ್ದೆ. ಆಗಲೇ ಮುಂದಿನ ಬಾರಿ ಪಾಸು ಮಾಡುವ ವಿಶ್ವಾಸ ಮೂಡಿತ್ತು’ ಎಂದು ವಿವರಿಸಿದರು.

‘ಹಿಂದಿನ ಪರೀಕ್ಷೆಗಳ ಅನುಭವದಿಂದ ಈ ಬಾರಿ ನಿರ್ದಿಷ್ಟ ವಿಷಯಗಳ ಮೇಲೆ ಒತ್ತು ನೀಡಿ ಅಭ್ಯಸಿಸಿದೆ. ಎನ್.ಸಿ.ಇ.ಆರ್.ಟಿ.ಯ ಪಠ್ಯಕ್ರಮ ಅನುಕೂಲವಾಯಿತು. ದೆಹಲಿಯಲ್ಲಿ ಕೆಲವು ತಿಂಗಳು ಪಡೆದ ತರಬೇತಿ, ಶಿರಸಿಯ ಎಸ್.ಜಿ.ಕರಿಯರ್ ಅಕಾಡೆಮಿಯ ತರಬೇತಿ ನೆರವಿಗೆ ಬಂದಿದೆ’ ಎಂದರು.

ಮನೋಜ್ 10ನೇ ತರಗತಿವರೆಗೆ ಲಯನ್ಸ್ ಶಾಲೆಯಲ್ಲಿ, ಎಂ.ಇ.ಎಸ್. ಕಾಲೇಜ್‍ನಲ್ಲಿ ಪಿಯುಸಿ ಮುಗಿಸಿದ್ದಾರೆ. ಪ್ರೌಢಶಾಲೆ ಹಂತದಲ್ಲಿ ರಾಜ್ಯಮಟ್ಟದಲ್ಲಿ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು. ಪದವಿ ಹಂತದಲ್ಲಿ ವಾಲಿಬಾಲ್ ಆಟಗಾರನಾಗಿ ಯೂನಿವರ್ಸಿಟಿ ಬ್ಲ್ಯೂ ಆಗಿ ಹೊರಹೊಮ್ಮಿದ್ದರು.

ಆತ್ಮವಿಶ್ವಾಸ, ಕೌಶಲ ಬೆಳೆಸಿಕೊಳ್ಳಿ:‘ಗ್ರಾಮೀಣ ಭಾಗದಿಂದ ಯುಪಿಎಸ್ಸಿ ಪರೀಕ್ಷೆ ಬರೆಯಲು ತೆರಳುವವರಿಗೆ ಸಂವಹನ ಕೌಶಲ, ಇಂಗ್ಲಿಷ್ ಭಾಷೆಯ ಪ್ರೌಢಿಮೆಯ ಕೊರತೆಯಿಂದ ಕೀಳರಿಮೆ ಕಾಡುತ್ತದೆ. ಇದು ಆತ್ಮವಿಶ್ವಾಸ ಕುಗ್ಗಲು ಕಾರಣವಾಗುತ್ತದೆ. ಮೊದಲು ಇದರಿಂದ ಹೊರಬರಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾರೆ ಮನೋಜ್ ಹೆಗಡೆ.

‘ಪಿಯುಸಿ ಹಂತ ಅಥವಾ ಅದಕ್ಕೂ ಮೊದಲು ಯುಪಿಎಸ್ಸಿ ಪರೀಕ್ಷೆ ಪಾಸು ಮಾಡುವ ಗುರಿ ಇಟ್ಟುಕೊಳ್ಳಿ. ನಿರಂತರ ಅಧ್ಯಯನ ನಡೆಸುತ್ತಿರಿ. ಪರಿಣಾಮಕಾರಿ ಸಂವಹನ ಕೌಶಲ ಬೆಳೆಸಿಕೊಳ್ಳಿ. ಆಗ ಅಲ್ಲಿಗೆ ಐಐಟಿ, ಐಐಎಂನಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಬರುವ ಅಭ್ಯರ್ಥಿಗಳಿಗೂ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗುತ್ತದೆ. ಇದು ಅನುಭವದ ಮಾತು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT