ಭಾನುವಾರ, ಜೂನ್ 26, 2022
24 °C

ಕೆರೆಬೇಟೆಯಲ್ಲಿ ಗಲಾಟೆ: ಪೊಲೀಸರ ಮೇಲೆ ಕಲ್ಲು ತೂರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಸಿದ್ದಾಪುರ ತಾಲ್ಲೂಕಿನ ಕಾನಗೋಡು ಗ್ರಾಮದಲ್ಲಿ ಭಾನುವಾರ ನಡೆದ ಕೆರೆಬೇಟೆ ವೇಳೆ ಉದ್ರಿಕ್ತ ಜನರಿಂದ ಗ್ರಾಮಸ್ಥರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದ ಘಟನೆ ನಡೆದಿದೆ.

ಗ್ರಾಮದ ಈಶ್ವರ ದೇವಸ್ಥಾನದ ಸಮಿತಿ ಆಯೋಜಿಸಿದ್ದ ಕೆರೆಬೇಟೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸುಮಾರು 40 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಏಕಕಾಲಕ್ಕೆ ಸಾವಿರಾರು ಜನರು ಕೂಣಿಯೊಂದಿಗೆ ಮೀನು ಹಿಡಿಯಲು ಇಳಿದಿದ್ದರು. ಪ್ರತಿ ಕೂಣಿಗೆ ₹600 ದರ ನಿಗದಿಪಡಿಸಲಾಗಿತ್ತು.

ಆದರೆ, ನಿರೀಕ್ಷಿತ ಪ್ರಮಾಣದ ಮೀನು ಸಿಗದ ಕಾರಣ ಜನರು ಅಸಮಾಧಾನಗೊಂಡರು. ಕೂಣಿಗೆ ನೀಡಿದ ಹಣ ಮರಳಿಸುವಂತೆ ಪಟ್ಟು ಹಿಡಿದರು. ಜನರು ಉದ್ರಿಕ್ತಗೊಳ್ಳುತ್ತಿದ್ದನ್ನು ಗಮನಿಸಿದ ದೇವಸ್ಥಾನ ಸಮಿತಿಯವರು ಸ್ಥಳದಿಂದ ಕಾಲ್ಕಿತ್ತಿದ್ದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಜನರು ಗ್ರಾಮದ ಕೆಲವು ಮನೆಗಳಿಗೆ ತೆರಳಿ ಸಮಿತಿಯವರ ವಿಚಾರಣೆ ನಡೆಸತೊಡಗಿದ್ದರು. ಈ ವೇಳೆ ಪರಸ್ಪರ ಘರ್ಷಣೆ ಉಂಟಾಯಿತು.

‘ಕೆರೆಬೇಟೆಗೆ ದೂರದ ಶಿರಾಳಕೊಪ್ಪ, ಆನವಟ್ಟಿ, ಸೊರಬ, ದಾಸನಕೊಪ್ಪ ಭಗದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಬಂದಿದ್ದರು. ಮೀನು ಸಿಗದ ಕಾರಣ ಸಿಟ್ಟಿಗೆದ್ದ ಅವರು ಕಲ್ಲು ತೂರಾಟ ನಡೆಸಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಕಲ್ಲು ತೂರಿದ್ದಾರೆ. ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘ಉದ್ರಿಕ್ತ ಜನರನ್ನು ಚದುರಿಸಲಾಗುತ್ತಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಸಶಸ್ತ್ರ ಮಿಸಲು ಪಡೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಘಟನೆಗೆ ಕಾರಣರಾದವರ ಮೇಲೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಸಿದ್ದಾಪುರ ಪೊಲೀಸ್ ಠಾಣೆಯ ಎಸ್ಐ ಮಹಾಂತೇಶ ಕುಂಬಾರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು