ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ಆಸ್ಪತ್ರೆಗೆ ಆಗ್ರಹ: ರಕ್ತದಲ್ಲಿ ಪತ್ರ ಬರೆಯಲು ತೀರ್ಮಾನ

ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ
Last Updated 23 ಜುಲೈ 2022, 13:40 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಸೌಲಭ್ಯಗಳಿರುವ ಆಸ್ಪತ್ರೆ ಸ್ಥಾಪನೆಯ ಕೂಗು ಮತ್ತಷ್ಟು ಬಲವಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಬೇಡಿಕೆಗೆ ಎರಡನೇ ಬಾರಿಗೆ ಅಭಿಯಾನದ ಸ್ವರೂಪ ಕೊಟ್ಟಿದ್ದಾರೆ. ಜುಲೈ 24ರಂದು ಸಂಜೆ 5ಕ್ಕೆ ಗರಿಷ್ಠ ಸಂಖ್ಯೆಗಳಲ್ಲಿ ಟ್ವೀಟ್ ಮಾಡಲು ಕರೆ ಕೊಟ್ಟಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್‌ಸುಖ್ ಮಾಂಡವೀಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯಮಟ್ಟದ ವಿವಿಧ ಜನಪ್ರತಿನಿಧಿಗಳನ್ನು ‘ಟ್ಯಾಗ್’ ಮಾಡಲು ಉದ್ದೇಶಿಸಿದ್ದಾರೆ. 2019ರ ಜೂನ್‌ನಲ್ಲಿ ಮೊದಲ ಬಾರಿಗೆ ಟ್ವೀಟ್ ಅಭಿಯಾನ ಮಾಡಲಾಗಿತ್ತು.

ಈ ನಡುವೆ, ವಿವಿಧ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಸುದ್ದಿಗೋಷ್ಠಿಗಳ ಮೂಲಕ ಒತ್ತಾಯಿಸುತ್ತಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ‘ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿಯಎರಡು ಆಸ್ಪತ್ರೆಗಳನ್ನು ಆರಂಭಿಸಬೇಕು. ಕರಾವಳಿ ಭಾಗಕ್ಕೆ ಅನುಕೂಲವಾಗುವಂತೆ ಕಾರವಾರದಲ್ಲಿ ಹಾಗೂ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಶಿರಸಿಯಲ್ಲಿ ಆಸ್ಪತ್ರೆಗಳು ಬೇಕು. ಈ ಸಂಬಂಧ ರಕ್ತದಲ್ಲಿ ಪತ್ರ ಬರೆದು ಆ.1ರಿಂದ ಪ್ರಧಾನಮಂತ್ರಿಗೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯ ಈ ಬೇಡಿಕೆಯನ್ನು ಬಲಗೊಳಿಸಲು ಪಕ್ಷಾತೀತವಾಗಿ ಎಲ್ಲ ಮುಖಂಡರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು. ಹಿರಿಯ ವಕೀಲ ಆರ್.ಜಿ.ನಾಯ್ಕ ಅವರೂ ಬೆಂಬಲ ಸೂಚಿಸಿದ್ದಾರೆ. ಅವರು, ಸರ್ಕಾರಕ್ಕೆ ಗಡುವು ಕೊಟ್ಟು ನಂತರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಸಲಹೆ ನೀಡಿದ್ದಾರೆ’ ಎಂದು ಹೇಳಿದರು.

‘ಉತ್ತರ ಕನ್ನಡವು ಬಹಳ ಯೋಜನೆಗಳಿಗೆ ತ್ಯಾಗ ಮಾಡಿ‌ದ್ದರೂ ಅನ್ಯಾಯವಾಗುತ್ತಿದೆ. ಇಲ್ಲಿ ಸಚಿವರು, ಪ್ರಭಾವಿಗಳಿದ್ದಾರೆ. ಅವರಿಂದ ಆಸ್ಪತ್ರೆ ಸ್ಥಾಪನೆ ವಿಚಾರದಲ್ಲಿ ಪ್ರಯೋಜನವಾಗಿಲ್ಲ. ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗುವ ಸರ್ಕಾರ, ಆಸ್ಪತ್ರೆ ಸ್ಥಾಪಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘2019– 20ರಲ್ಲಿ ಕಾರವಾರದ ಶಿರವಾಡದಲ್ಲಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿಗೆ ಐದು ಎಕರೆ ಜಾಗ ಮಂಜೂರಾಗಿತ್ತು. ಅಂದಿನ ಜಿಲ್ಲಾಧಿಕಾರಿ ಆ ಜಾಗವನ್ನು ವೈದ್ಯಕೀಯ ಕಾಲೇಜಿಗೆ ಮಂಜೂರು ಮಾಡಿ ಹಕ್ಕುಪತ್ರ ನೀಡಿದ್ದಾರೆ. ಆದರೂ ಏನೂ ಪ್ರಗತಿಯಾಗಿಲ್ಲ’ ಎಂದು ಹೇಳಿದರು.

ಮುಖಂಡ ಗಿರೀಶ ರಾವ್ ಮಾತನಾಡಿ, ‘ಜಿಲ್ಲಾಧಿಕಾರಿ ಕಚೇರಿ ಮುಂದೆಯೂ ಧರಣಿ ಕುಳಿತುಕೊಳ್ಳಲಾಗುವುದು’ ಎಂದರು.

ನಗರಸಭೆ ಸದಸ್ಯ ಮನೋಜ ಬಾಂದೇಕರ್, ಪ್ರಮುಖರಾದ ವಿಜಯ್ ಮಹಾಲೆ, ಆರ್.ಎಸ್.ನಾಯ್ಕ, ಚಂದ್ರಕಾಂತ ನಾಯ್ಕ, ವಿಜಯಕುಮಾರ ನಾಯ್ಕ, ಗಣೇಶ ಕೊಳಂಕರ್, ಸಂದೀಪ ನಾಯ್ಕ, ರಾಜೇಂದ್ರ ಮಾದರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT