ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಕ್ಕೆ ಗ್ರಾಮ ಸಹಾಯಕರ ಒತ್ತಾಯ

Last Updated 21 ಜನವರಿ 2022, 15:16 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್‌ನಿಂದ ಮೃತಪಟ್ಟ ಗ್ರಾಮ ಸಹಾಯಕರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಬೇಕು. ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಗ್ರಾಮ ಸಹಾಯಕರಿಗೆ ಕೊಡಬೇಕು. ಈ ಬೇಡಿಕೆ ಈಡೇರುವ ತನಕ ತಮ್ಮನ್ನು ಕೋವಿಡ್ 19 ಸಂಬಂಧಿಸಿದ ಕೆಲಸಗಳಿಗೆ ನಿಯೋಜಿಸಬಾರದು ಎಂದು ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಜಿಲ್ಲಾ ಘಟಕವು ಒತ್ತಾಯಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಮೂಲಕ ಶುಕ್ರವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

‘ರಾಜ್ಯದಾದ್ಯಂತ 10,450 ಮಂದಿ ಗ್ರಾಮ ಸಹಾಯಕರು ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ನಮ್ಮ ಪಾತ್ರ ಅತಿ ಪ್ರಮುಖವಾಗಿದೆ. ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಹಗಲು ರಾತ್ರಿ ಕೆಲಸ ಮಾಡಿ ಇಲಾಖೆಯ ಗೌರವ ಹೆಚ್ಚಿಸಿದ್ದೇವೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿ ಕಂದಾಯ ಇಲಾಖೆಯ ಮಾನ ಕಾಪಾಡಿದ್ದಾರೆ. ಆದರೆ, ಸರ್ಕಾರ ಕೇವಲ ₹ 12 ಸಾವಿರ ವೇತನ ನೀಡುತ್ತಿದೆ. 43 ವರ್ಷಗಳಿಂದ ಇದೇ ವೇತನ ಮತ್ತು ಯಾವುದೇ ಭದ್ರತೆ ಇಲ್ಲದೇ ಕೆಲಸ ಮಾಡುತ್ತಿದ್ದೇವೆ’ ಎಂದು ಮನವಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಗ್ರಾಮಕ್ಕೆ ಯಾರೇ ಮಂತ್ರಿ ಮಹೋದಯರು ಬಂದರೂ ಅವರ ಆತಿಥ್ಯಕ್ಕಾಗಿ ಹಗಲು ರಾತ್ರಿ ದುಡಿಯಲು ಗ್ರಾಮ ಸಹಾಯಕರು ಬೇಕು. ಆದರೆ, ಅವರ ಕಣ್ಣೀರನ್ನು ಒರೆಸುವ ಕಾರ್ಯ ಮೇಲಧಿಕಾರಿಗಳಿಂದ ಆಗಿಲ್ಲ. ಕೋವಿಡ್‌ನಿಂದಾಗಿ ಹಲವಾರು ಮಂದಿ ಗ್ರಾಮ ಸಹಾಯಕರು ಮೃತಪಟ್ಟಿದ್ದಾರೆ. ಈ ಹಿಂದೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುನಾಥ ಪ್ರಸಾದ್ ಅವರು ಸರ್ಕಾರದಿಂದ ನೀಡುವ ₹ 30 ಲಕ್ಷ ವಿಮಾ ಸೌಲಭ್ಯವನ್ನು ಮಾನವೀಯ ನೆಲೆಯಲ್ಲಿ ಗ್ರಾಮ ಸಹಾಯಕರಿಗೂ ಕೊಡಬೇಕು ಎಂದು ಆದೇಶಿಸಿದ್ದರು. ಆದರೆ, ಈಗಿನ ಅಧೀನ ಕಾರ್ಯದರ್ಶಿಯವರು ಡಿ.31ರಂದು ಈ ಆದೇಶವನ್ನು ಹಿಂಪಡೆದಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ನಮ್ಮ ಜೀವಕ್ಕೆ ಬೆಲೆಯಿಲ್ಲವೇ?’:

‘ಗ್ರಾಮ ಸಹಾಯಕರು ಕಾಯಂ ನೌಕರರಲ್ಲ. ಹಾಗಾಗಿ, ಕೋವಿಡ್ 19ನಿಂದ ಮೃತಪಟ್ಟರೆ ಕೊಡುವ ಪರಿಹಾರ ಪಡೆಯಲು ಅರ್ಹರಲ್ಲ ಎಂಬ ವಾದವನ್ನುಈಗಿನ ಅಧೀನ ಕಾರ್ಯದರ್ಶಿಯವರು ಮುಂದಿಟ್ಟಿದ್ದಾರೆ. ಸರ್ಕಾರವು, ಒಬ್ಬ ಜನಸಾಮಾನ್ಯ ಮೃತಪಟ್ಟರೆ ₹ 3 ಲಕ್ಷ, ಸರ್ಕಾರಿ ನೌಕರ ಸತ್ತರೆ ₹ 30 ಲಕ್ಷ ಪರಿಹಾರ ನೀಡುತ್ತದೆ. ಆದರೆ, ಗ್ರಾಮ ಸಹಾಯಕನ ಕುಟುಂಬಕ್ಕೆ ಶೂನ್ಯ ಪರಿಹಾರ ನೀಡಲಾಗುತ್ತದೆ. ನಮ್ಮ ಜೀವಕ್ಕೆ ಬೆಲೆಯಿಲ್ಲ ಎಂದು ಸರ್ಕಾರ ನಿರ್ಧರಿಸಿದ್ದು, ಬಹಳ ನೊಂದುಕೊಂಡಿದ್ದೇವೆ. ಮಾನವೀಯ ನೆಲೆಯಲ್ಲಿ ಪರಿಹಾರ ಸಿಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರೋಹಿದಾಸ ನಾಯ್ಕ, ಉಪಾಧ್ಯಕ್ಷರಾದ ದೇವೇಂದ್ರ ನಾಯ್ಕ, ರೇಷ್ಮಾ ಫರ್ನಾಂಡಿಸ್, ಗೌರವಾಧ್ಯಕ್ಷ ರಾಮಕೃಷ್ಣ ಎಚ್.ನಾಯಕ ಮತ್ತು ಅಧ್ಯಕ್ಷ ಮಾಸ್ತಯ್ಯ ಎನ್.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT