ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ನಿವೃತ್ತ ಯೋಧರಿಗೆ ಅಭಿಮಾನದ ಹೂಮಳೆ

ಕಾರವಾರ ತಾಲ್ಲೂಕಿನ ಹಳಗೇಜೂಗ ಗ್ರಾಮದಲ್ಲಿ ಭಾವುಕ ಕ್ಷಣ: ಮೂವರಿಗೆ ಗ್ರಾಮಸ್ಥರಿಂದ ಸನ್ಮಾನ
Last Updated 1 ಏಪ್ರಿಲ್ 2022, 15:23 IST
ಅಕ್ಷರ ಗಾತ್ರ

ಕಾರವಾರ: ಭಾರತೀಯ ಸೇನೆಯಲ್ಲಿ ದಶಕಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮೂವರು ಯೋಧರನ್ನು, ತಾಲ್ಲೂಕಿನ ಹಳಗೇಜೂಗ ಗ್ರಾಮಸ್ಥರು ಶನಿವಾರ ಅದ್ಧೂರಿಯಾಗಿ ಸ್ವಾಗತಿಸಿದರು. ಕರ್ನಾಟಕ– ಗೋವಾ ಗಡಿ ಪೋಳೆಂನಿಂದ ಗ್ರಾಮದವರೆಗೂ ಮೆರವಣಿಗೆಯಲ್ಲಿ ಕರೆದುಕೊಂಡು ಬಂದರು. ಗ್ರಾಮದಲ್ಲಿ ನೂರಾರು ಮಂದಿ ಸೇರಿ ಮಾಲಾರ್ಪಣೆ, ಪುಷ್ಪವೃಷ್ಟಿ ಮಾಡಿ ಅಭಿಮಾನ ಮೆರೆದರು.

ಹಳಗೇಜೂಗದ ಸುಭಾಶ್ಚಂದ್ರ ರೇವಣೀಧರ್, ಸರ್ವೇಶ ಹಾಗೂ ಸಚಿನ್ ಅವರಿಗೆ ಗ್ರಾಮಸ್ಥರು ಶನಿವಾರ ಅಕ್ಷರಶಃ ಅಚ್ಚರಿ ಮೂಡಿಸಿದ್ದರು. ಗ್ರಾಮಸ್ಥರ ಪ್ರೀತಿ, ಅಭಿಮಾನ ಕಂಡು ಮೂಕ ವಿಸ್ಮಿತರಾದರು. ಗ್ರಾಮದ ಮೂವರು ಒಂದೇ ದಿನ ನಿವೃತ್ತರಾಗಿ ಊರಿಗೆ ಮರಳಿದ್ದೂ ಸ್ಥಳೀಯರ ಸಂಭ್ರಮಕ್ಕೆ ಕಾರಣವಾಯಿತು.

ಸೇನೆಯಲ್ಲಿ ತಲಾ 17 ವರ್ಷ ಕರ್ತವ್ಯ ನಿರ್ವಹಿಸಿದ ಸುಭಾಶ್ಚಂದ್ರ ರೇವಣೀಧರ್ ಹಾಗೂ ಸಚಿನ್, ಲ್ಯಾನ್ಸ್ ನಾಯಕ ಹುದ್ದೆಯಲ್ಲಿದ್ದು ನಿವೃತ್ತರಾದರು. ಸುದೀರ್ಘ 22 ವರ್ಷ ಜವಾಬ್ದಾರಿ ನಿಭಾಯಿಸಿದ ಸರ್ವೇಶ ಹವಾಲ್ದಾರ್ ಹುದ್ದೆಯಲ್ಲಿದ್ದರು. ಅವರಲ್ಲಿ ಸುಭಾಶ್ಚಂದ್ರ ಮತ್ತು ಸಚಿನ್, ಇಬ್ಬರೂ ಸೇನೆಗೆ ಒಂದೇ ದಿನ ನೇಮಕಗೊಂಡಿದ್ದರು.

ಸಚಿನ್, ಸೇನೆಯ ‘9 ಮದ್ರಾಸ್ ರೆಜಿಮೆಂಟ್‌’ನಲ್ಲಿ, ಸರ್ವೇಶ ‘10 ಮದ್ರಾಸ್ ರೆಜಿಮೆಂಟ್’ನಲ್ಲಿ ಹಾಗೂ ಸುಭಾಶ್ಚಂದ್ರ ‘177 ಮೀಡಿಯಂ ರೆಜಿಮೆಂಟ್’ನಲ್ಲಿ ಕರ್ತವ್ಯ ನಿರ್ವಹಿಸಿದ್ದರು.

‘ನಿವೃತ್ತರಾಗಿ ಊರಿಗೆ ಮರಳಿದ ನಮ್ಮನ್ನು ಗ್ರಾಮಸ್ಥರು ಸ್ವಾಗತಿಸಿದ ರೀತಿಗೆ ಮಾತೇ ಹೊರಳಿಲ್ಲ. ಇಂಥದ್ದೊಂದು ಸ್ವಾಗತವನ್ನು ನಾವು ಯೋಚಿಸಿಯೇ ಇರಲಿಲ್ಲ’ ಎಂದು ಸುಭಾಶ್ಚಂದ್ರ ಭಾವುಕರಾದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ನಾವಿಬ್ಬರು (ಸುಭಾಶ್ಚಂದ್ರ ಮತ್ತು ಸಚಿನ್) 2005ರಲ್ಲಿ ಸೇನೆಗೆ ನೇಮಕಗೊಂಡಿದ್ದೆವು. ಹೈದರಾದಾಬ್‌ನಲ್ಲಿ ತರಬೇತಿ ಪಡೆದ ಬಳಿಕ ನಾವು ಜಮ್ಮು ಕಾಶ್ಮೀರದ ಸತ್ವಾರಿ ಸೆಕ್ಟರ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡೆವು. ಬಳಿಕ, ಜಮ್ಮು ಕಾಶ್ಮೀರದ ಮಚ್ಚಲ್ ಸೆಕ್ಟರ್‌ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದೆವು’ ಎಂದರು.

‘ಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ಈಗ ಮೊದಲಿನಷ್ಟು ಸಮಸ್ಯೆಗಳಿಲ್ಲ. ಹಲವು ಸೌಲಭ್ಯಗಳಿವೆ. ಇತರ ಯೋಧರೊಂದಿಗೆ ಉತ್ತಮ ಒಡನಾಟವಿದ್ದ ಕಾರಣ ಎಲ್ಲರೂ ಒಂದೇ ಪರಿವಾರದಂತೆ ಇದ್ದೆವು. ಹಾಗಾಗಿ, ನಿವೃತ್ತಿ ಹೊಂದಿ ಬರಲು ಮನಸ್ಸು ಒಪ್ಪಲಿಲ್ಲ. ಆದರೂ ಮನೆಯಲ್ಲೂ ನಾನೊಬ್ಬನೇ ಮಗನಾದ ಕಾರಣ ಬರಲೇಬೇಕಿತ್ತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT